ಶುಕ್ರವಾರ, ಸೆಪ್ಟೆಂಬರ್ 24, 2021
26 °C
ರಾಮಕೃಷ್ಣ ಮಠದ ಸ್ವಾಮಿ ಜಿತಕಾಮಾನಂದಜೀ

ವಿವೇಕ ಪ್ರಚೋದಿಸುವ ದಾಸ ಸಾಹಿತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಭಾರತವು ಪರಕೀಯರ ದಾಳಿ, ಅಧ್ಯಾತ್ಮದ ಮೇಲಿನ ಪ್ರಹಾರದಂತಹ ಸಂಕಷ್ಟದ ಸ್ಥಿತಿಯಲ್ಲಿದ್ದಾಗ ಜನ್ಮತಳೆದ ದಾಸ ಸಾಹಿತ್ಯವು ಜನರ ವಿವೇಕವನ್ನು ಪ್ರಚೋದಿಸುವ ಶಕ್ತಿಯನ್ನು ಹೊಂದಿದೆ ಎಂದು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಹೇಳಿದರು.

ದಾಸಸಾಹಿತ್ಯ ಸೇವಾ ಪ್ರತಿಷ್ಠಾನ ಮತ್ತು ಶ್ರೀ ರಾಮಕೃಷ್ಣ ಮಠದ ಸಹಯೋಗದಲ್ಲಿ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ದಾಸ ನಮನ– 2019 ಹರಿದಾಸ ಸಾಹಿತ್ಯ– ಸಂಗೀತೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಭಕ್ತನು ಭಗವಂತನನ್ನು ಪ್ರೀತಿಸುವುದು ಮತ್ತು ಅವನೊಂದಿಗೆ ಸಂಭಾಷಿಸುವ ರೀತಿಯನ್ನು ದಾಸ ಸಾಹಿತ್ಯ ತೆರೆದಿಡುತ್ತದೆ. ಜನರ ಭಾವನೆಗಳನ್ನು ಎತ್ತಿಹಿಡಿಯುವ ಶಕ್ತಿ ದಾಸ ಸಾಹಿತ್ಯಕ್ಕೆ ಇದೆ ಎಂದರು.

ಭಗವಂತನನ್ನೇ ಮುಖ್ಯ ಕೇಂದ್ರವನ್ನಾಗಿ ಇರಿಸಿಕೊಂಡು ದಾಸ ಸಾಹಿತ್ಯ ರಚನೆಯಾಯಿತು. ಸಮಾಜದಲ್ಲಿನ ಕೆಡುಕನ್ನು ಎತ್ತಿ ತೋರಿಸುವಲ್ಲಿ ಮತ್ತು ಅದಕ್ಕೆ ಪರಿಹಾರ ಸೂಚಿಸುವಲ್ಲಿ ಈ ಸಾಹಿತ್ಯ ಯಶಸ್ವಿಯಾಯಿತು. ಈ ಸಾಹಿತ್ಯವನ್ನು ಹೆಚ್ಚು ಜನರಿಗೆ ತಲುಪಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಮಡಿ, ಮೈಲಿಗೆ ಇಲ್ಲ: ಮುಖ್ಯ ಅತಿಥಿಯಾಗಿದ್ದ ಉಡುಪಿಯ ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಬಿ.ಗೋಪಾಲಾಚಾರ್‌ ಮಾತನಾಡಿ, ‘ದಾಸ ಸಾಹಿತ್ಯಕ್ಕೆ ಜಾತಿಯ ತಾರತಮ್ಯ, ಮಡಿ, ಮೈಲಿಗೆ ಎಂಬುದು ಇರಲಿಲ್ಲ. ದೇವರ ಮುಂದೆ ಸಂಸ್ಕೃತವನ್ನಷ್ಟೇ ಮಾತನಾಡಬೇಕು ಎಂಬಂತಿದ್ದ ಕಾಲದಲ್ಲಿ ಕನ್ನಡದಲ್ಲೂ ದೇವರ ಎದುರು ಮಾತನಾಡಲು ಸಾಧ್ಯ ಎಂಬುದನ್ನು ಹರಿದಾಸರು ಸಾಬೀತುಪಡಿಸಿದ್ದರು’ ಎಂದರು.

ಹೆಜ್ಜೆ ಹೆಜ್ಜೆಗೂ ಕ್ರಾಂತಿಕಾರಿ ವಿಚಾರಗಳನ್ನು ಮಂಡಿಸುತ್ತಾ, ಅವುಗಳ ಮೂಲಕ ಸಮಾಜವನ್ನು ತಿದ್ದಿದ ಕೀರ್ತಿ ಹರಿದಾಸರಿಗೆ ಸಲ್ಲುತ್ತದೆ ಎಂದು ಹೇಳಿದರು.

ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್‌ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ್‌ ಕುಮಾರ್ ಕಲ್ಕೂರ ಮತ್ತು ಸಂಗೀತ ಕಲಾವಿದ ಪಂಡಿತ್‌ ಹುಸೇನ್‌ ಸಾಬ್ ಕನಕಗಿರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ದಾಸಸಾಹಿತ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗುರುರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭಾ ಕಾರ್ಯಕ್ರಮದ ಬಳಿಕ ಪಂಡಿತ್‌ ಹುಸೇನ್‌ ಸಾಬ್‌ ಕನಕಗಿರಿ ಅವರು ‘ದಾಸವಾಣಿ’ ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯದ ಹಲವು ರಚನೆಗಳನ್ನು ಹಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು