ಯಕ್ಷಗಾನ ಪ್ರಸಂಗ ಕರ್ತ ಅನಂತರಾಮ ಬಂಗಾಡಿ ನಿಧನ

ಶುಕ್ರವಾರ, ಮೇ 24, 2019
29 °C

ಯಕ್ಷಗಾನ ಪ್ರಸಂಗ ಕರ್ತ ಅನಂತರಾಮ ಬಂಗಾಡಿ ನಿಧನ

Published:
Updated:
Prajavani

ಮಂಗಳೂರು: ಯಕ್ಷಗಾನ ಪ್ರಸಂಗ ಕರ್ತರಾಗಿ ಜ್ಯೋತಿಷಿಯಾಗಿ ಗುರುತಿಸಿಕೊಂಡಿದ್ದ ಅನಂತರಾಮ ಬಂಗಾಡಿ ಅವರು ಭಾನುವಾರ (ಮೇ 12) ಬೆಳಿಗ್ಗೆನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.  ಅವರಿಗೆ ಪತ್ನಿ, ಮಗ, ಮಗಳು ಮತ್ತು ಮೊಮ್ಮಕ್ಕಳು ಇದ್ದಾರೆ.

ಅನಂತರಾಮ ಬಂಗಾಡಿ ಅವರು ಸುಮಾರು 150ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದ ವಿದ್ವಾಂಸರು. ಯಕ್ಷಗಾನ  ಛಂದಸ್ಸಿನ ಅಧ್ಯಯನ ಮತ್ತು ಕನ್ನಡ ಸಾಹಿತ್ಯ ಅಧ್ಯಯನ ನಡೆಸಿದ್ದರು. ಅವರು ಬರೆದ ’ಕಾಡ ಮಲ್ಲಿಗೆ’, ‘ಕಚ್ಚೂರ ಮಾಲ್ದಿ’, ’ಬೊಳ್ಳಿ ಗಿಂಡೆ’, ’ಪಟ್ಟದ ಪದ್ಮಲೆ’ ಮುಂತಾದ ಪ್ರಸಂಗಗಳು ಜನಪ್ರಿಯ ಪ್ರದರ್ಶನಗಳನ್ನು ಕಂಡಿವೆ. ರಾಜ್ಯದಾದ್ಯಂತ ಪ್ರದರ್ಶನ ಕಂಡ ಅನೇಕ ಪ್ರಸಂಗಗಳ ಕರ್ತೃ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

ಕ್ರೈಸ್ತ ಸಂತರ ಕತೆಗಳನ್ನೂ ಯಕ್ಷಗಾನಕ್ಕೆ ಅಳವಡಿಸುವ ಮೂಲಕ ಜಾತಿಯ ಗೋಡೆಯನ್ನು ಮೀರಿದ್ದರು. ಅವರ ನೇತೃತ್ವದಲ್ಲಿ ರೂಪುಗೊಂಡ ‘ಸೌಹಾರ್ದ ಕಲಾವಿದರು, ಯಕ್ಷರಂಗ ಬಂಗಾಡಿ’ ಎಂಬ ತಂಡ ಸುಮಾರು 15 ವರ್ಷಗಳ ಕಾಲ ರಾಜ್ಯದ ವಿವಿಧೆಡೆಗಳಲ್ಲಿ ಪ್ರದರ್ಶನ ನೀಡಿದೆ. ಕೆಲವು ಪ್ರಸಂಗಗಳು ಸಾವಿರಕ್ಕೂ ಮಿಕ್ಕಿ ಪ್ರದರ್ಶನಗಳನ್ನು ಕಂಡಿವೆ.

ಜ್ಯೋತಿರ್ವಿಜ್ಞಾನ ಕ್ಷೇತ್ರದಲ್ಲಿಯೂ ಅಪಾರ ಜ್ಞಾನ ಹೊಂದಿದ್ದ ಅವರು ಮೊತ್ತ ಮೊದಲ ‘ತುಳು ಜ್ಯೋತಿಷ ಗ್ರಂಥ’ವನ್ನು ಬರೆದಿದ್ದರು. ತುಳು ನಿಘಂಟು ರಚನೆಯ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದರು. ಹರಿಕಥಾ ಪ್ರವಚನಕಾರರಾಗಿ, ತೊಗಲು ಬೊಂಬೆಯಾಟ ಮತ್ತು ವರ್ಣಾಲಂಕಾರ ಪರಿಣಿತರಾಗಿ ಸದಾ  ಒಂದಿಲ್ಲೊಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಲೇ ಇದ್ದವರು. ತುಳು ಭಾಷೆಯ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ ಇತ್ತು. ಪಾಡ್ದನಗಳನ್ನು ಹೇಳಬಲ್ಲವರಾಗಿದ್ದರು. ಇತರರು ಹೇಳುವ ಪಾಡ್ದನಗಳನ್ನು ಆಸ್ಥೆಯಿಂದ ಕೇಳುತ್ತಿದ್ದರು.
ದಕ್ಷಿಣ ಕನ್ನಡದ ಬೆಳ್ತಂಗಡಿಯ ಬಂಗಾಡಿ ಮನೆತನದ ಅರಸುಗಳ ಶ್ವೇತಛತ್ರ ಹಿಡಿಯುತ್ತಿದ್ದ ಮಾಯಿಲ ಭಂಡಾರಿ ವಂಶದ ಕುತ್ರೊಟ್ಟು ಮಂಜು ಭಂಡಾರಿ ಮತ್ತು ಕಿನ್ಯಕ್ಕ ದಂಪತಿಯ ಪುತ್ರನಾಗಿದ್ದ ಅವರು ಪ್ರಾಥಮಿಕ ವಿದ್ಯಾಭ್ಯಾಸ ಬಂಗಾಡಿಯಲ್ಲಿಯೇ ಪೂರೈಸಿ ಬಳಿಕ ಹಾಸನದ ಹೆತ್ತೂರಿನಲ್ಲಿ ಪ್ರೌಢಶಿಕ್ಷಣ ಪಡೆದರು. ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಅವರಿಗೆ ಸಂದಿವೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜ್ಯೋತಿಷ ಜ್ಞಾನ ರತ್ನ ಬಿರುದು, ಪುಳಿಂಚ ರಾಮಯ್ಯ ಶೆಟ್ಟಿ ಪ್ರತಿಷ್ಠಾನದ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಸನ್ಮಾನಗಳು ಅವರಿಗೆ ಲಭಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !