ಮಂಗಳವಾರ, ಆಗಸ್ಟ್ 20, 2019
25 °C
ಗರ್ಭಿಣಿ ಹಿಂದೂ ಮಹಿಳೆಯನ್ನು ಆಸ್ಪತ್ರೆ ಸೇರಿಸಿದ ಮುಸ್ಲಿಂ ಆಟೋ ಚಾಲಕ

ಕರ್ಫೂ ನಡುವೆ ಹಿಂದೂ–ಮುಸ್ಲಿಂ ಭ್ರಾತೃತ್ವ

Published:
Updated:

ಹೈಲಾಕಂಡಿ: ಅಸ್ಸಾಂನ ಹೈಲಾಕಂಡಿಯಲ್ಲಿ ಕರ್ಫ್ಯೂ ನಡುವೆಯೇ ಹಿಂದೂ ಗರ್ಭಿಣಿಯೊಬ್ಬರನ್ನು ಆಸ್ಪತ್ರೆ ಸೇರಿಸಿದ ಆಟೋ ರಿಕ್ಷಾ ಚಾಲಕ ಮುಕ್ಬಾಲ್‌, ಹಿಂದೂ– ಮುಸ್ಲಿಂ ಭಾವೈಕ್ಯಕ್ಕೆ ಮಾದರಿ ಎನಿಸಿದ್ದಾರೆ.  

ಕೆಲ ದಿನದ ಹಿಂದೆ ನಡೆದ ಕೋಮುಗಲಭೆಯಿಂದಾಗಿ ಹೈಲಾಕಂಡಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಈ ಸಂದರ್ಭದಲ್ಲೇ ರಾಜ್ಯೇಶ್ವರ್‌ಪುರ್ ಪಾರ್ಟ್ 1 ವಿಲೇಜ್ ನಿವಾಸಿ ರೂಬನ್ ದಾಸ್ ಎಂಬಾತ ತುಂಬು ಗರ್ಭಿಣಿಯಾದ ತನ್ನ ಪತ್ನಿ ನಂದಿತಳನ್ನು ಆಸ್ಪತ್ರೆಗೆ ಸೇರಿಸಲು ತನ್ನ ಕುಟುಂಬ ಸದಸ್ಯರಿಗೆ ಹಾಗೂ ಆಂಬುಲೆನ್ಸ್‌ಗೆ ಕರೆ ಮಾಡುತ್ತಿದ್ದ. ಕರ್ಫ್ಯೂ ಕಾರಣದಿಂದಾಗಿ ಸೂಕ್ತ ಪ್ರತಿಕ್ರಿಯೆ ದೊರೆತಿರಲಿಲ್ಲ. ಈ ಸಂದರ್ಭದಲ್ಲಿ ಅವರ ನೆರೆಹೊರೆಯಲ್ಲಿ ವಾಸಿಸುತ್ತಿರುವ ಆಟೋ ರಿಕ್ಷಾ ಚಾಲಕ ಮಕ್ಬೂಲ್ ಸಹಾಯಕ್ಕೆ ಧಾವಿಸಿದ್ದು, ಆಟೋದಲ್ಲೇ ಗರ್ಭಿಣಿಯನ್ನು ಕರೆದೊಯ್ದು ಎಸ್.ಕೆ.ರಾಯ್ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

‘ಖಾಲಿ ರಸ್ತೆಗಳಲ್ಲಿ ವೇಗವಾಗಿ ಆಟೊ ಚಲಾಯಿಸಿಕೊಂಡು ಹೋಗುವಾಗ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗುತ್ತದೋ ಇಲ್ಲವೋ ಎಂದು ಆತಂಕವಾಗುತ್ತಿತ್ತು. ಆದರೆ ಅವರ ಒಳಿತಿಗಾಗಿ ನಾನು ಮನಸ್ಸಿನಲ್ಲೇ ಪ್ರಾರ್ಥಿಸುತ್ತಿದ್ದೆ. ಎಲ್ಲವೂ ಸರಿ ಹೋಗುತ್ತದೆ ಎಂದು ಸಮಾಧಾನಪಡಿಸಲು ಯತ್ನಿಸುತ್ತಿದ್ದೆ’ ಎಂದು ಮಕ್ಬೂಲ್ ಹೇಳಿದ್ದಾರೆ. 

ಕರ್ಫ್ಯೂ ಸಂದರ್ಭದಲ್ಲಿ ಜನಿಸಿದ ಈ ಗಂಡುಮಗುವಿಗೆ ‘ಶಾಂತಿ’ ಎಂದು ನಾಮಕರಣ ಮಾಡಲಾಗಿದೆ.  ಬುಧವಾರ ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹ್ನೀಶ್ ಮಿಶ್ರಾ ಪೋಷಕರ ನಿವಾಸಕ್ಕೆ ಭೇಟಿ ನೀಡಿ ತಾಯಿ– ಮಗುವಿನ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಕಷ್ಟದ ಸಂದರ್ಭದಲ್ಲಿ ಗೆಳೆಯನ ಸಹಾಯಕ್ಕೆ ಧಾವಿಸಿದ ಮಕ್ಬೂಲ್‌ಗೆ  ಅಧಿಕಾರಿಗಳು ಅಭಿನಂದನೆ ಸಲ್ಲಿಸಿ, ಹಿಂದೂ ಮುಸ್ಲಿಂ ಸಮನ್ವಯಕ್ಕೆ ಇಂತಹ ಮತ್ತಷ್ಟು ಉದಾಹರಣೆಗಳ ಅಗತ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಶುಕ್ರವಾರ ನಡೆದ ಕೋಮುಗಲಭೆಯಲ್ಲಿ 12 ಅಂಗಡಿಗಳು ಹಾಗೂ 15 ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಂಚಿದ್ದರು. ಪೊಲೀಸರ ಗುಂಡೇಟಿಗೆ ಒಬ್ಬ ಮೃತಪಟ್ಟು 15 ಜನ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಅನಿರ್ಧಿಷ್ಟಾವಧಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು.  

Post Comments (+)