ಗುರುವಾರ , ಸೆಪ್ಟೆಂಬರ್ 19, 2019
21 °C

ಉಸಿರು-ಭಗವಂತನ ಹೆಸರು

Published:
Updated:
Prajavani

ರಾಮನುಚ್ಛ್ವಾಸವಲೆದಿರದೆ ರಾವಣನ ಕಡೆಗೆ?|ರಾಮನುಂ ದಶಕಂಠನೆಲರನುಸಿರಿರನೆ?||ರಾಮ ರಾವಣರುಸಿರ್ಗಳಿಂದು ನಮ್ಮೊಳಗಿರವೆ?|ಭೂಮಿಯಲಿ ಪೊಸತೇನೋ? – ಮಂಕುತಿಮ್ಮ || 132 ||

ಶಬ್ದಾರ್ಥ: ರಾಮನುಚ್ಛ್ವಾಸವಲೆದಿರದೆ=ರಾಮನ+ಉಚ್ಛ್ವಾಸ(ಉಸಿರು)+ಅಲೆದಿರದೆ, ದಶಕಂಠನೆಲರನುಸಿರಿರನೆ=ದಶಕಂಠನ(ರಾವಣನ)+ಎಲರನು(ಗಾಳಿಯನ್ನು, ಉಸಿರನ್ನು)+ಉಸಿರಿರನೆ(ಉಸಿರಾಡಿರನೆ), ರಾಮರಾವಣರುಸಿರ್ಗಳಿಂದು=ರಾಮರಾವಣರ+ಉಸಿರ್ಗಳು(ಉಸಿರುಗಳು)+ಇಂದು
ವಾಚ್ಯಾರ್ಥ: ರಾಮನ ಉಸಿರು ರಾವಣನ ಕಡೆಗೆ ಹೋಗಿರದೆ? ರಾಮನೂ ರಾವಣನ ಉಸಿರಿನ ಗಾಳಿಯನ್ನು ಉಸಿರಾಡಿರನೆ? ಅಂದು ರಾಮ, ರಾವಣರು ಉಸಿರಾಡಿದ ಗಾಳಿ ಇಂದು ನಮ್ಮೊಳಗೆ ಇರಲಾರದೆ? ಹಾಗಾದರೆ ಭೂಮಿಯಲ್ಲಿ ಹೊಸದೇನು ಇದೆ?

ವಿವರಣೆ: ಇದು ಒಂದು ರೀತಿಯಲ್ಲಿ ಹಿಂದಿನ ಕಗ್ಗದ ಮುಂದುವರಿದ ಭಾಗದಂತಿದೆ. ರಾಮನಿದ್ದಾಗ ರಾವಣನೂ ಇದ್ದ. ಇಬ್ಬರೂ ಎದುರುಬದುರಾಗಿ ಹೋರಾಟ ಮಾಡಿದವರು. ಹಾಗಿರುವಾಗ ರಾಮ ಉಸಿರಾಡಿದ ಗಾಳಿ ರಾವಣನೆಡೆಗೆ ಸಾಗಿ ಅದು ಅವನ ಉಸಿರಾಗಿರುವುದು ಸಾಧ್ಯವಿಲ್ಲವೇ? ಅಂತೆಯೇ ರಾವಣ ಉಸಿರಾಡಿದ ಗಾಳಿ ರಾಮನತ್ತ ಬಂದು ಅವನ ಉಸಿರಾಗಿರಬಹುದು. ಅದು ಅಷ್ಟೇ ಅಲ್ಲದೆ ಅವರಿಬ್ಬರೂ ಉಸಿರಾಡಿದ ಗಾಳಿಯನ್ನೇ ನಾವೂ ಉಸಿರಾಡಿಸುತ್ತಿದ್ದೇವೆಯೆ? ಹಾಗಾದರೆ ಭೂಮಿಯಲ್ಲಿ ಹೊಸದಾದದ್ದು ಏನೂ ಇಲ್ಲವೆ?

ನಾವೆಲ್ಲ ಉಸುರುವುದು ಒಂದೇ ಗಾಳಿ ಎನ್ನುವ ತತ್ವ ಶತಶತಮಾನಿಗಳಿಂದ ತತ್ವಜ್ಞಾನಿಗಳನ್ನು ಚಿಂತೆನೆಗೆ ಹಚ್ಚಿದೆ. ಮದರ್ ತೆರೆಸಾ ಹೇಳುತ್ತಾರೆ, “ಕೆಲವೊಮ್ಮೆ ಉಸಿರಾಟ ಒಂದೇ ಸರಿಯಾದ ಪ್ರಾರ್ಥನೆ. ಭಗವಂತ ನಮ್ಮ ಉಸಿರಾಟದಲ್ಲಿಯ ಸಂತೋಷವನ್ನು, ದುಃಖ ದುಮ್ಮಾನಗಳನ್ನು ಗುರುತಿಸಿ ಮತ್ತೆ ಬದುಕನ್ನು ಚಿಗುರಿಸುವ ಗಾಳಿಯನ್ನೂ ನಮ್ಮೆಡೆಗೆ ಊದುತ್ತಾನೆ. ಅದು ಬರೀ ಆಮ್ಲಜನಕವನ್ನು ತೆಗೆದುಕೊಂಡು ಇಂಗಾಲ ವಾಯುವನ್ನು ಹೊರಗೆ ಕಳುಹಿಸುವುದಲ್ಲ. ಪ್ರಾರ್ಥನೆಯಲ್ಲಿ ನಮ್ಮ ಉಸಿರನ್ನು ಭಗವಂತನ ಉಸಿರಿನೊಂದಿಗೆ ಸೇರಿಸಿಕೊಳ್ಳುವ ಪವಿತ್ರ ಕ್ರಿಯೆ”. ಅಂದರೆ ನಮ್ಮ ಉಸಿರಿನಲ್ಲಿ ಪುರಾತನರ, ವರ್ತಮಾನದವರ ಉಸಿರು ಮಾತ್ರವಲ್ಲ, ಭಗವಂತನ ಉಸಿರೂ ಸೇರಿಕೊಂಡಿದೆ.

ಹಿಂದೆ ಯಹೂದ್ಯರು ಭಗವಂತನ ಹೆಸರು ಹೇಳುತ್ತಿರಲಿಲ್ಲ. ಆದರೆ ಉಸಿರಾಡುವಾಗ ಪೂರ್ತಿ ಬಾಯಿ, ಗಂಟಲುಗಳನ್ನು ತೆರೆದು “ಯಾಹ್” (yah) ಎಂದಾಗ ದೀರ್ಘವಾದ ಉಸಿರು ಒಳಗೆ ಬರುತ್ತದೆ, ಅದು ಶ್ವಾಸ. ಅದೇ ರೀತಿ ಜೋರಾಗಿ “ವೇಹ್” (Weh) ಎಂದಾಗ ಉಸಿರು ಹೊರಗೆ ಹೋಗುತ್ತದೆ. ಅದು ಉಚ್ಛ್ವಾಸ. ಅವರ ಪ್ರಕಾರ ಹೀಗೆ ದೀರ್ಘವಾಗಿ ಉಸಿರಾಡುವುದೇ ಭಗವಂತನನ್ನು ನೆನೆಯುವ ರೀತಿ. ಈ “ಯಾಹ್ – ವೇಹ್” ನಮ್ಮ ಉಸಿರಾಟವಾದರೂ ಅದು ಭಗವಂತನಿಂದ ಬಂದದ್ದು. ಅದೇ ಗಾಳಿಯನ್ನು ನಾವು ಶ್ರೀಮಂತರಾಗಿ, ನಿರ್ಗತಿಕರಾಗಿ, ದೇಶಪ್ರೇಮಿಗಳಾಗಿ, ದೇಶದ್ರೋಹಿಗಳಾಗಿ, ಹಿಂದುವಾಗಿ, ಮುಸ್ಲಿಮನಾಗಿ, ಕ್ರೈಸ್ತನಾಗಿ, ಸಿಖ್‍ನಾಗಿ, ಬೌದ್ಧನಾಗಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಾಗಿ, ನಮ್ಮೊಡನೆ ಸ್ನೇಹದಿಂದ ಇರುವವರೊಡನೆ ಹಾಗೆಯೇ ನಮ್ಮನ್ನು ದ್ವೇಷಿಸುವವರೊಡನೆಯೂ ಹಂಚಿಕೊಳ್ಳುತ್ತೇವೆ. ಅದೇ ಹಳೆಯ ಗಾಳಿ ನಮ್ಮನ್ನು ಪ್ರತಿಕ್ಷಣ ಹೊಸಬರನ್ನಾಗಿ ಮಾಡುತ್ತದೆ.

Post Comments (+)