ಭಾನುವಾರ, ಸೆಪ್ಟೆಂಬರ್ 22, 2019
23 °C
ನಗರದ ವಿವಿಧೆಡೆಯಿಂದ ಹರಿದುಬಂದ ಜನಸಾಗರ

ವಿಜೃಂಭಣೆಯಿಂದ ನಡೆದ ಪಟಾಲಮ್ಮ ದೇವಿ ಉತ್ಸವ

Published:
Updated:
Prajavani

ಬೆಂಗಳೂರು: ಕನಕನಪಾಳ್ಯದ ಪ್ರಸಿದ್ಧ ಪಟಾಲಮ್ಮ ದೇವಿ ಪಲ್ಲಕ್ಕಿ ಉತ್ಸವ ಹಾಗೂ ಊರಹಬ್ಬ ಬುಧವಾರ ವಿಜೃಂಭಣೆಯಿಂದ ನಡೆಯಿತು. ನಗರದ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಜನರು ಉತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು. 

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉತ್ಸವಕ್ಕೆ ಚಾಲನೆ ನೀಡಿ, ದೇವಿ ದರ್ಶನ ಪಡೆದರು. ಪೂರ್ಣಕುಂಭ ಹಾಗೂ ಮಂಗಳವಾದ್ಯಗಳೊಂದಿಗೆ ಜಯನಗರದ 3ನೇ ಬಡಾವಣೆಯ ಆನೆ ಬಂಡೆ ರಸ್ತೆ, ಕನಕನಪಾಳ್ಯ, ಸಿದ್ಧಾಪುರ, ಯಡಿಯೂರು, ಬೈರಸಂದ್ರ ಹಾಗೂ ನಾಗಸಂದ್ರದ ಮೂಲಕ ಪಟಾಲಮ್ಮ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ವೀರಗಾಸೆ, ಪೂಜಾ ಕುಣಿತ, ಕಂಸಾಳೆ, ಕೋಲಾಟ, ಲಂಬಾಣಿ ನೃತ್ಯ, ಕೀಲು ಕುದುರೆ ಸೇರಿದಂತೆ ವಿವಿಧ ಜಾನ‍ಪದ ಕಲಾ ತಂಡಗಳು ಮಾರ್ಗದುದ್ದಕ್ಕೂ ಹೆಜ್ಜೆ ಹಾಕಿದವು. 

ಎರಡು ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮೂಲಕ ತರಲಾಯಿತು. ಇದರಲ್ಲಿ ಒಂದು ಮೂರ್ತಿಯನ್ನು ಹೂವಿನ ಪಲ್ಲಕ್ಕಿಯ ತೇರು ಹಾಗೂ ಇನ್ನೊಂದು ಮೂರ್ತಿಯನ್ನು ಭಕ್ತರು ಹೊತ್ತು ತಂದರು. ‌ಪ್ರಧಾನ ಅರ್ಚಕರಾದ ರಾಮಕೃಷ್ಣಪ್ಪ ಅಗ್ನಿ ಕೊಂಡಕ್ಕೆ ಪೂಜೆ ಸಲ್ಲಿಸಿದರು. ಹರಕೆ ಹೊತ್ತ ನೂರಾರು ಭಕ್ತರು ಅಗ್ನಿಕೊಂಡ ಪ್ರವೇಶ ಮಾಡಿದರು.

ಇದಕ್ಕೂ ಮೊದಲು ಗಣಪತಿ ಹೋಮ, ನವಗ್ರಹ ಹೋಮ, ಪಟಾಲಮ್ಮ ದೇವಿಗೆ ಅಭಿಷೇಕ ಹಾಗೂ ವಿಶೇಷ ಅಲಂಕಾರ ನಡೆಯಿತು. ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಪಟಾಲಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಕೆ.ಎಂ. ನಾಗರಾಜ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ವಿ. ದೇವರಾಜ್ ಪಾಲ್ಗೊಂಡಿದ್ದರು.

Post Comments (+)