ರಸ್ತೆ ಬದಿಯಲ್ಲಿ ಕಸ: ಆತಂಕದಲ್ಲಿ ಗ್ರಾಮಸ್ಥರು 

ಭಾನುವಾರ, ಮೇ 26, 2019
32 °C
ಸಾಮಾನ್ಯ ಪ್ರಜ್ಞೆ ಮರೆತ ನಾಗರಿಕರು– ಪರಿಸರದ ತುಂಬೆಲ್ಲಾ ದುರ್ನಾತ

ರಸ್ತೆ ಬದಿಯಲ್ಲಿ ಕಸ: ಆತಂಕದಲ್ಲಿ ಗ್ರಾಮಸ್ಥರು 

Published:
Updated:
Prajavani

ವಿಟ್ಲ: ಸ್ಚಚ್ಛತಾ ಆಂದೋಲನದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಕೆಲವೆಡೆ ಇದು ಪ್ರಚಾರಕ್ಕೆ ಮಾತ್ರ ಸೀಮಿತವಾಗುತ್ತಿದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ.

ಕಲ್ಲಡ್ಕ ಕಾಂಞಂಗಾಡ್ ಅಂತರರಾಜ್ಯ ಹೆದ್ದಾರಿಯ ವೀರಕಂಬ ಗ್ರಾಮದ ಮಂಗಳಪದವು ಜಂಕ್ಷನ್ ಸಮೀಪದ ರಸ್ತೆ ಬದಿಯಲ್ಲಿ ರಾಶಿ ರಾಶಿ ಕಸ, ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಆದರೆ, ಸಂಬಂಧಪಟ್ಟವರು ಮಾತ್ರ ಮೌನ ವಹಿಸಿದ್ದಾರೆ. ಮಂಗಳಪದವು-ಕೋಡಪದವು ಕ್ರಾಸ್ ಬಳಿಯ ರಸ್ತೆ ಬದಿ ಹಾಗೂ ಚರಂಡಿಗಳಲ್ಲಿ ಲೋಡುಗಟ್ಟಲೇ ಕಸ, ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಈ ಕಸದ ರಾಶಿಯಲ್ಲಿ ಕೊಳೆತ ಮೀನು ಹಾಗೂ ಕೋಳಿ ತ್ಯಾಜ್ಯವೂ ಸೇರಿಕೊಂಡಿರುತ್ತದೆ. ಇದರಿಂದಾಗಿ ಸಹಿಸಲು ಅಸಾಧ್ಯವಾದ ದುರ್ನಾತ ಉಂಟಾಗಿ ಇಡೀ ಪರಿಸರ ಹಾಳಾಗಿದೆ.

‘ನಾಯಿಗಳು ಕಸ ಹಾಗೂ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಕೊಂಡೊಯ್ದು, ಹರಡುತ್ತಿವೆ. ಈ ಭಾಗದಲ್ಲಿ ಕಸದ ಬುಟ್ಟಿಯೂ ಇಲ್ಲ. ಸುತ್ತಮುತ್ತಲಿನ ಹೋಟೆಲ್, ಅಂಗಡಿ, ಮನೆಯವರು ತಮ್ಮ ಮನೆಯ ತ್ಯಾಜ್ಯಗಳನ್ನು ಭೀತಿ ಇಲ್ಲದೇ ಇಲ್ಲಿಗೆ ತಂದು ಸುರಿಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆ ಪ್ರಾರಂಭಗೊಳ್ಳಲಿದ್ದು, ವಿದ್ಯಾರ್ಥಿಗಳು ಇದನ್ನೇ ತುಳಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಲಿದೆ. ಇದರಿಂದ ರೋಗಗಳು ಬಂದರೆ ಯಾರು ಹೊಣೆ’ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.

ಕಸದ ರಾಶಿ ವಿಟ್ಲ ಪಟ್ಟಣ ಪಂಚಾಯಿತಿ ಹಾಗೂ ವೀರಕಂಬ ಗ್ರಾಮ ಪಂಚಾಯಿತಿ ಗಡಿ ಭಾಗದಲ್ಲಿ ಇದ್ದು, ಅದನ್ನು ತೆರವುಗೊಳಿಸಲು ಎರಡು ಪಂಚಾಯಿತಿಗಳೂ ಹಿಂದೇಟು ಹಾಕುತ್ತಿವೆ. ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಸ ವಿಲೇವಾರಿ ಮಾಡಲು ವಾಹನ ಹಾಗೂ ಕಾರ್ಮಿಕರು ಇದ್ದಾರೆ. ವೀರಕಂಬ ಗ್ರಾಮ ಪಂಚಾಯಿತಿನಲ್ಲಿ ಕಾರ್ಮಿಕರು ಹಾಗೂ ವಾಹನ ಸಮಸ್ಯೆ ಇದೆ. ಈ ಹಿನ್ನೆಲೆಯಲ್ಲಿ ಮಂಗಳಪದವು ಪೇಟೆ ಸಮೀಪ ದೊರಕುವ ಕಸ, ತ್ಯಾಜ್ಯಗಳನ್ನು ತಮ್ಮ ವಾಹನದಲ್ಲಿ ಕೊಂಡೊಯ್ಯುವಂತೆ ಮನವಿ ಸಲ್ಲಿಸಲಾಗಿದ್ದರೂ, ಜಾಗದ ಸಮಸ್ಯೆಯಿಂದ ಅದು ಈಡೇರಿಲ್ಲ’ ಎಂದು ವೀರಕಂಬ ಪಂಚಾಯಿತಿ ತಿಳಿಸಿದೆ. ಈ ಎಲ್ಲಾ ಸಮಸ್ಯೆಗಳಿಂದ ಈ ವಿಲೇವಾರಿ ಇಲ್ಲಿಯ ಗ್ರಾಮಸ್ಥರಿಗೆ ಶಾಪವಾಗಿ ಪರಿಣಮಿಸಿದೆ.

‘ಸ್ಥಳೀಯ ನಿವಾಸಿಗಳು, ಪಾದಚಾರಿಗಳು, ಶಾಲಾ– ಕಾಲೇಜು ವಿದ್ಯಾರ್ಥಿಗಳು ರೋಗ ಭೀತಿಯಲ್ಲಿ ದಿನದೂಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿ ಸುಲೈಮಾನ್ ಆರೋಪಿಸಿದ್ದಾರೆ.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವಚ್ಛತೆಗೆ ಭಾರಿ ಆದ್ಯತೆ ನೀಡಲಾಗುತ್ತಿದೆ. ಇದೀಗ ಅದೇ ಜಿಲ್ಲೆಯಲ್ಲಿ ಸೂಕ್ತ ಕಸ ವಿಲೇವಾರಿ ವ್ಯವಸ್ಥೆ ಇಲ್ಲದಂತಾಗಿದೆ. ಸಂಬಂಧಪಟ್ಟವರು ತಕ್ಷಣವೇ ಸ್ಪಂದಿಸಬೇಕು’ ಎಂದು ಶಿಕ್ಷಕಿ ಲಿಲ್ಲಿ ಪಾಯಸ್ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !