ಶುಕ್ರವಾರ, ಸೆಪ್ಟೆಂಬರ್ 20, 2019
22 °C

‘ರಾಜ್ಯದಲ್ಲಿ ಡೆಂಗಿ ಪ್ರಕರಣ ನಿಯಂತ್ರಣಕ್ಕೆ’

Published:
Updated:
Prajavani

ಬೆಂಗಳೂರು: ‘ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳನ್ನು ಗುರುತಿಸಿ ನಾಶಮಾಡುವುದು ಸೇರಿದಂತೆ ವಿವಿಧ ಚಟುವಟಿಕೆಗಳಿಂದಾಗಿ ರಾಜ್ಯದಲ್ಲಿ ಡೆಂಗಿ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಶಿವರಾಜ್ ಸಜ್ಜನ್ ಶೆಟ್ಟಿ ತಿಳಿಸಿದರು. 

ರಾಷ್ಟ್ರೀಯ ಡೆಂಗಿ ದಿನಾಚರಣೆ ಪ್ರಯುಕ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘2018–19ನೇ ಸಾಲಿನಲ್ಲಿ 56.39 ಲಕ್ಷ ಮನೆಗಳಿಗೆ ಆಶಾ ಕಾರ್ಯಕರ್ತರು ಭೇಟಿ ನೀಡಿ, ಲಾರ್ವಾ ಸಮೀಕ್ಷೆಯ ಜತೆಗೆ ಡೆಂಗಿ ತಡೆಗಟ್ಟುವ ಬಗ್ಗೆ ಅರಿವು ಮೂಡಿಸಿದ್ದಾರೆ. ಡೆಂಗಿ ಸೋಂಕಿತರಿಗೆ ಚಿಕಿತ್ಸೆಯಲ್ಲಿ ವ್ಯತ್ಯಯವಾಗಕೂಡದು ಎಂಬ ಕಾರಣಕ್ಕೆ ಜಿಲ್ಲಾ ಆಸ್ಪತ್ರೆ
ಗಳಲ್ಲಿ ತಲಾ 5 ಹಾಸಿಗೆಯನ್ನು ಮೀಸಲಿಡಲಾಗಿದೆ. ಅದೇ ರೀತಿ, ಉಚಿತವಾಗಿ ರಕ್ತದ ಪ್ಲೇಟ್ ಲೆಟ್ ಪೂರೈಕೆ ಮಾಡುತ್ತಿದ್ದೇವೆ. ಖಾಸಗಿ ಆಸ್ಪತ್ರೆ
ಗಳಲ್ಲಿ ರಕ್ತದ ಪ್ಲೇಟ್ ಲೆಟ್‌ಗೆ ₹800 ನಿಗದಿಪಡಿಸಿದ್ದು, ಹೆಚ್ಚುವರಿ ಹಣ ವಸೂಲಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು. 

ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮದ (ಎನ್‌ವಿಬಿಡಿಸಿಪಿ) ಸಂಶೋಧನಾ ಅಧಿಕಾರಿ ಡಾ. ಮಹಮದ್ ಶರೀಫ್, ’ಕುಡಿದು ಬಿಸಾಡಿದ ಪ್ಲಾಸ್ಟಿಕ್ ಲೋಟ, ತೆಂಗಿನ ಚಿಪ್ಪುಗಳಲ್ಲಿ ಕೂಡ ಮಳೆಗಾಲದಲ್ಲಿ ನೀರು ನಿಲ್ಲಲಿದ್ದು, ಲಾರ್ವಾ ಉತ್ಪತ್ತಿಯಾಗಲಿದೆ. ಹೀಗಾಗಿ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದರು. 

ಇದಕ್ಕೂ ಮೊದಲು ಡೆಂಗಿ ಬಗ್ಗೆ ಜಾಗೃತಿ ಜಾಥಾ ನಡೆಯಿತು. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು. 

Post Comments (+)