ಸಂಪೂರ್ಣ ಬತ್ತಿದ ಕೃಷ್ಣೆ; ಜೀವಜಲಕ್ಕೆ ಹಾಹಾಕಾರ

ಭಾನುವಾರ, ಜೂನ್ 16, 2019
28 °C
ಕೊಯ್ನಾ ಜಲಾಶಯದಿಂದ ನೀರು ಹರಿಸಲು ಮುಂದಾಗದ ಮಹಾರಾಷ್ಟ್ರ ಸರ್ಕಾರ

ಸಂಪೂರ್ಣ ಬತ್ತಿದ ಕೃಷ್ಣೆ; ಜೀವಜಲಕ್ಕೆ ಹಾಹಾಕಾರ

Published:
Updated:
Prajavani

ಜಮಖಂಡಿ: ಮಳೆಗಾಲದಲ್ಲಿ ಉಕ್ಕಿ ಹರಿದು ನೂರಾರು ಹೆಕ್ಟರ್ ಬೆಳೆಯನ್ನು ನೀರಿನಲ್ಲಿ ಲೀನವಾಗಿಸುವ ಕೃಷ್ಣೆಯ ಒಡಲಿನಲ್ಲಿ ಈಗ ಬೊಗಸೆ ನೀರಿಗಾಗಿ ಚಿಕ್ಕ ಚಿಕ್ಕ ಒರತೆ, ಗುಂಡಿಗಳನ್ನು ತೋಡಲಾಗಿದೆ. ಇದು ನದಿ ಪಾತ್ರದಲ್ಲಿನ ನೀರಿನ ತೀವ್ರ ಹಾಹಾಕಾರಕ್ಕೆ ಹಿಡಿದ ಕೈಗನ್ನಡಿ.

ಈ ಭಾಗದಲ್ಲಿ ಜೀವನಾಡಿ ಕೃಷ್ಣೆಯ ಒಡಲು ಕಳೆದೊಂದು ತಿಂಗಳಿನಿಂದ ಸಂಪೂರ್ಣ ಬರಿದಾಗಿದೆ. ಹೀಗಾಗಿ, ರೈತರು ನದಿ ದಡದ ಜಮೀನುಗಳಲ್ಲಿ ಬೆಳೆಗಳ ಉಳಿಸಿಕೊಳ್ಳಲು ಜೆಸಿಬಿ ಯಂತ್ರಗಳನ್ನು ಬಳಸಿ ಹತ್ತಾರು ಅಡಿ ಆಳದ ಬಾವಿಯಾಕಾರದ ಗುಂಡಿಗಳನ್ನು ತೋಡಿ ಅದರಲ್ಲಿ ಸಂಗ್ರಹವಾಗುವ ಅಲ್ಪ ಸ್ವಲ್ಪ ನೀರನ್ನು ಪಂಪ್‌ಸೆಟ್ ಮೂಲಕ ಬೆಳೆಗಳಿಗೆ ಉಣಿಸುತ್ತಿದ್ದಾರೆ. ಗುಂಡಿಗಳಲ್ಲಿ ಜಿನುಗುವ ಅಂತರ್ಜಲ ಬಳಸಿಕೊಳ್ಳಲು ಪರದಾಡುತ್ತಿದ್ದಾರೆ. 

ಸಾವಿರಾರು ಹೆಕ್ಟೇರ್‌ ಭೂಮಿ ಮತ್ತು ಲಕ್ಷಾಂತರ ಜನ, ಸಾವಿರಾರು ಪಶು ಪಕ್ಷಿಗಳು ದಾಹ ತಣಿಸುವ ಕೃಷ್ಣೆ ಈಗ ನೀರಿಲ್ಲದೇ ಬತ್ತಿ ಹೋಗಿದೆ. ಕೃಷ್ಣೆಯ ಮಡಿಲಿನ ಜನರು ನೀರಿಲ್ಲದೆ ಕಂಗಾಲಾಗಿದ್ದಾರೆ. ಪ್ರತಿ ವರ್ಷದ ಬೇಸಿಗೆಯಲ್ಲಿ ಕೃಷ್ಣೆ ಬರಿದಾಗುತ್ತಿದ್ದಂತೆಯೇ ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡುವುದು ವಾಡಿಕೆ. ಆದರೆ, ಈ ವರ್ಷ ಮೇ ಕೊನೆಯ ವಾರ ಬಂದರೂ ಕೃಷ್ಣೆಗೆ ನೀರು ಬಿಡುಗಡೆ ಮಾಡಲು ಮಹಾರಾಷ್ಟ್ರ ಸರ್ಕಾರ ಮನಸ್ಸು ಮಾಡಿಲ್ಲ. ಇದರಿಂದ ಜನ– ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳೂ ಒಣಗುತ್ತಿವೆ. ಮುಂಗಾರು ಹಂಗಾಮಿನ ಬಿತ್ತನೆಗೂ ರೈತರು ಹಿಂದೇಟು ಹಾಕುವ ಪರಿಸ್ಥಿತಿ ತಲೆದೋರಿದೆ.

ಜಮಖಂಡಿ ತಾಲೂಕಿನಲ್ಲಿ ಕೃಷ್ಣಾ ನದಿಯಿಂದ ಜಾಕವೆಲ್ ಮೂಲಕ ಜಮಖಂಡಿ ನಗರ ಮತ್ತು ಹಲವಾರು ಗ್ರಾಮಗಳಿಗೆ ನೀರು ಹರಿಸಲಾಗುತ್ತದೆ. ಆದರೆ ನದಿ ಬತ್ತಿರುವುದರಿಂದ ನಗರದಲ್ಲೂ ನೀರಿನ ಹಾಹಾಕಾರ ಉಲ್ಬಣಗೊಂಡಿದೆ.

ಪ್ರತಿವರ್ಷ ಮಹಾರಾಷ್ಟ್ರದವರು ಕೊಯ್ನಾ ಜಲಾಶಯದಿಂದ ನೀರು ಹರಿಸುತ್ತಿದ್ದ ಕಾರಣ ಬೇಸಿಗೆಯ ಬವಣೆ ಸ್ವಲ್ಪವಾದರೂ ನೀಗುತ್ತಿತ್ತು. ಈ ಬಾರಿ ಅದಕ್ಕೂ ತೊಂದರೆಯಾಗಿದೆ. ನೀರು ಬಿಡಿಸಬೇಕಾದ ರಾಜ್ಯ ಸರ್ಕಾರ ಅದನ್ನು ಬಿಟ್ಟು ಚುನಾವಣೆ ಮಾಡುತ್ತಿದೆ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕಲ್ಲಪ್ಪ ಬಿರಾದಾರ ಒತ್ತಾಯಿಸುತ್ತಾರೆ.

‘ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರೈತರ ಸಮಸ್ಯೆಯನ್ನು ಅರಿತು ನೀರು ಬಿಡಿಸಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡುತ್ತಾರೆ.

 

 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !