ಆನೆ ದಾಳಿ ನಿಯಂತ್ರಣಕ್ಕೆ ನೈಸರ್ಗಿಕ ‘ಜೇನು ಬೇಲಿ’

ಮಂಗಳವಾರ, ಜೂನ್ 18, 2019
29 °C
ಮಂಚಿಕೇರಿ ಅರಣ್ಯ ವಲಯದಲ್ಲಿ ರಾಜ್ಯದ ಮೊದಲ ಪ್ರಯೋಗ ಯಶಸ್ವಿ

ಆನೆ ದಾಳಿ ನಿಯಂತ್ರಣಕ್ಕೆ ನೈಸರ್ಗಿಕ ‘ಜೇನು ಬೇಲಿ’

Published:
Updated:
Prajavani

ಶಿರಸಿ: ಮಾನವ ಮತ್ತು ಆನೆ ಸಂಘರ್ಷ ನಿಯಂತ್ರಿಸುವ ನಿಟ್ಟಿನಲ್ಲಿ ಯಲ್ಲಾಪುರ ವಿಭಾಗದ ಮಂಚಿಕೇರಿ ಅರಣ್ಯ ವಲಯದಲ್ಲಿ ಅನುಷ್ಠಾನಗೊಳಿಸಿರುವ ರಾಜ್ಯದ ಮೊದಲ ‘ಜೇನು ಬೇಲಿ’ ಪ್ರಯೋಗ ಯಶಸ್ಸು ಕಂಡಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಮುಂಡಗೋಡ, ಹಳಿಯಾಳ, ಶಿರಸಿ ತಾಲ್ಲೂಕುಗಳಲ್ಲಿ ಕೃಷಿ ಬೆಳೆಗಳ ಮೇಲೆ ಆನೆ ಹಿಂಡಿನ ದಾಳಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇದನ್ನು ತಪ್ಪಿಸಲು ಯಲ್ಲಾಪುರ ಅರಣ್ಯ ವಿಭಾಗವು ಮಹಾರಾಷ್ಟ್ರದ ವನ್ಯಜೀವಿ ಸಂಶೋಧನೆ ಮತ್ತು ಸಂರಕ್ಷಣಾ ಸೊಸೈಟಿ ಸಹಕಾರದಲ್ಲಿ 2017–18ನೇ ಸಾಲಿನಲ್ಲಿ ಮಂಚಿಕೇರಿ ವಲಯದಲ್ಲಿ ಪೈಲೆಟ್ ಯೋಜನೆಯನ್ನು ಅನುಷ್ಠಾನಗೊಳಿಸಿತು. ಈ ಯೋಜನೆ ಇಲಾಖೆಗೆ ಉತ್ತಮ ಫಲ ನೀಡಿದೆ.

‘ಮೊದಲು ಆನೆಗಳನ್ನು ಓಡಿಸಲು ಮೆಣಸಿನಕಾಯಿ ಹೊಗೆ, ಖಾರಪುಡಿ, ಪಟಾಕಿ ಬಳಸುತ್ತಿದ್ದೆವು. ಪಟಾಕಿ ಸದ್ದಿಗೆ ಆನೆಗಳು ಇನ್ನಷ್ಟು ಆಕ್ರಮಣಕಾರಿಯಾಗುವುದರಿಂದ ಇದರ ಬಳಕೆ ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತು. ಆಮೇಲೆ ಆನೆ ಕಾರಿಡಾರ್‌ನಲ್ಲಿ ‘ಎಲಿಫೆಂಟ್ ಟ್ರೂಫ್ ಟ್ರೆಂಚ್’ ನಿರ್ಮಾಣ ಮಾಡಿದೆವು. ಆನೆಗಳು ಸುಲಭವಾಗಿ ಈ ಅಗಳದಲ್ಲಿ ಇಳಿದು, ಮರಿಗಳನ್ನು ಮೇಲಕ್ಕೆ ಹತ್ತಿಸಿಕೊಂಡು ಬರಲಾರಂಭಿಸಿದ್ದರಿಂದ ಈ ಪ್ರಯೋಗ ವಿಫಲವಾಯಿತು. ನೈಸರ್ಗಿಕ ವಿಧಾನದಿಂದಲೇ ಆನೆಗಳ ಓಡಾಟದ ದಿಕ್ಕನ್ನು ಬದಲಿಸಬೇಕೆಂದು ಯೋಚಿಸಿದಾಗ ಹೊಳೆದಿದ್ದು ಪರಿಸರ ಸ್ನೇಹಿ ಜೇನು ಬೇಲಿ’ ಎನ್ನುತ್ತಾರೆ ಮಂಚಿಕೇರಿ ಎಸಿಎಫ್ ಪ್ರಶಾಂತ ಪಿ.ಕೆ.ಎಂ.

‘ಈ ಯೋಜನೆಯು ರಾಷ್ಟ್ರ ಮಟ್ಟದಲ್ಲಿ ‘ಉತ್ತರ ಕನ್ನಡ ಮಾದರಿ’ ಎಂದೇ ಪ್ರಚಲಿತವಾಗಿದೆ. ಪ್ರಾಯೋಗಿಕ ಹಂತವಾಗಿದ್ದರಿಂದ 5–6 ಕಿ.ಮೀ ದೂರದವರೆಗಷ್ಟೇ ಇದನ್ನು ಅಳವಡಿಸಲಾಗಿದೆ’ ಎನ್ನುತ್ತಾರೆ ಯಲ್ಲಾಪುರ ಡಿಸಿಎಫ್ ಆರ್.ಜಿ.ಭಟ್ಟ

ಏನಿದು ಜೇನು ಬೇಲಿ?

‘ಮರದ ಬೊಡ್ಡೆ (ಬುಡಚಿ)ಯನ್ನು ಸಂಗ್ರಹಿಸಿ, ಅದರ ಒಳಗಿನ ಪೊಳ್ಳು ಭಾಗದಲ್ಲಿ, ಬೆಲ್ಲ, ಘಮದ ಚಕ್ಕೆ (ಅಡುಗೆಗೆ ಬಳಸುವ), ನಿರುಪಯುಕ್ತ ಜೇನುರಟ್ಟನ್ನು ಇಟ್ಟರೆ 10 ದಿನಗಳ ಒಳಗೆ ಇದರೊಳಗೆ ಜೇನು ಸೇರಿಕೊಳ್ಳುತ್ತದೆ. ರೈತರ ಜಮೀನಿನ ಗುಂಟ 100ರಿಂದ 200 ಮೀಟರ್‌ ಅಂತರದಲ್ಲಿ ಇಂತಹ ಬೊಡ್ಡೆಗಳನ್ನು ಕಟ್ಟಲಾಗಿದೆ. ಮರಗಳ ಹೆಣೆ ಅಥವಾ ಎರಡು ಕಂಬಗಳ ನಡುವೆ ಇಂತಹ ಹಲವಾರು ಬೊಡ್ಡೆಗಳು ಇವೆ. ಜೇನು ಪಡೆ ಸಂಚಾರ, ಅವುಗಳ ಸದ್ದಿಗೆ ಹೆದರುವ ಆನೆಗಳು ಈ ಮಾರ್ಗದಲ್ಲಿ ಓಡಾಡುವುದು ಕಡಿಮೆಯಾಗಿದೆ. ಕಳೆದ ವರ್ಷ ಬೆಳೆ ಹಾನಿ ಪ್ರಮಾಣ ಕೂಡ ಕಡಿಮೆಯಾಗಿದೆ’ ಎಂದು ಪ್ರಶಾಂತ್ ವಿವರಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 18

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !