ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲೂ ‘ಸೂರ್ಯ’ ಪ್ರಾಬಲ್ಯ

ಬುಧವಾರ, ಜೂನ್ 19, 2019
23 °C
ತಂದೆ– ಮಗಳ ಕ್ಷೇತ್ರದಲ್ಲೂ ಬಿಜೆಪಿ ಸಾಧನೆ * ಲಕ್ಷದ ಗಡಿ ದಾಟಿಸಿದ ಬಿಜೆಪಿ ಶಾಸಕರು

ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲೂ ‘ಸೂರ್ಯ’ ಪ್ರಾಬಲ್ಯ

Published:
Updated:
Prajavani

ಬೆಂಗಳೂರು: ‘ಅನಂತ’ ಅಸ್ತಂಗತದಿಂದ ಬರಿದಾಗಿದ್ದ ದಕ್ಷಿಣದ ಬಾನಿನಲ್ಲಿ ಹೊಸದಾಗಿ ಉದಯಿಸಿರುವ ‘ಸೂರ್ಯ’, ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಲ್ಲೂ ಹೆಚ್ಚು ಪ್ರಾಬಲ್ಯ ಮೆರೆದಿದ್ದಾರೆ.

ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಈ ಬಾರಿಯೂ ‘ಕಮಲ’ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಪಕ್ಷದ ಅಭ್ಯರ್ಥಿ ತೇಜಸ್ವಿ ಸೂರ್ಯ 3.3 ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

28 ನೇ ವಯಸ್ಸಿನಲ್ಲಿ ಕಮಲದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದ ತೇಜಸ್ವಿ, ನರೇಂದ್ರ ಮೋದಿಯ ಅಲೆಯಲ್ಲಿ ತೇಲಿ ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‌ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ.

ಕಾಂಗ್ರೆಸ್ ಶಾಸಕರು ಪ್ರತಿನಿಧಿಸಿರುವ ಕ್ಷೇತ್ರದಲ್ಲೇ ತೇಜಸ್ವಿ ಸೂರ್ಯ ಅವರಿಗೆ ಅತಿ ಹೆಚ್ಚು ಮತಗಳು ಬಂದಿದ್ದು, ಅದರಿಂದಲೇ ಗೆಲುವಿನ ಅಂತರವೂ ಜಾಸ್ತಿ ಆಗಿದೆ.

ತಂದೆ– ಮಗಳ ಕ್ಷೇತ್ರಗಳಲ್ಲೂ ಸೂರ್ಯ ಸಾಧನೆ; ಕಾಂಗ್ರೆಸ್ಸಿನ ರಾಮಲಿಂಗಾರೆಡ್ಡಿ ಹಾಗೂ ಅವರ ಮಗಳು ಸೌಮ್ಯಾ ರೆಡ್ಡಿ ಪ್ರತಿನಿಧಿಸುವ ಬಿಟಿಎಂ ಲೇಔಟ್ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರಗಳಲ್ಲೂ ತೇಜಸ್ವಿ ಸೂರ್ಯ ಅವರಿಗೆ ಅತ್ಯಧಿಕ ಮತಗಳು ಬಂದಿವೆ.

ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಅಭ್ಯರ್ಥಿಗಿಂತಲೂ 20 ಸಾವಿರ ಹೆಚ್ಚು ಮತಗಳನ್ನು ಬಿಜೆಪಿ ಅಭ್ಯರ್ಥಿ ಪಡೆದಿದ್ದಾರೆ. ಜಯನಗರ ಕ್ಷೇತ್ರದಲ್ಲೂ ಎದುರಾಳಿ ಅಭ್ಯರ್ಥಿಗಿಂತಲೂ 15 ಸಾವಿರ ಹೆಚ್ಚು ಮತಗಳು ಬಂದಿವೆ. 

ಕಾಂಗ್ರೆಸ್ ಹಾಗೂ ಜೆಡಿಎಸ್‌ ಒಟ್ಟಿಗೆ ಸೇರಿ ಈ ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸಿದ್ದವು. ಕಾಂಗ್ರೆಸ್ ಶಾಸಕರ ಕ್ಷೇತ್ರದ ಮತದಾರರೇ ಬಿಜೆಪಿಯ ಕೋಟೆಯನ್ನು ಮತ್ತಷ್ಟು ಭದ್ರಪಡಿಸಿದ್ದಾರೆ. 

ಕಮಾಲ್ ಮಾಡದ ಕೃಷ್ಣಪ್ಪ: ಕಾಂಗ್ರೆಸ್ಸಿನ ಎಂ.ಕೃಷ್ಣಪ್ಪ ಪ್ರತಿನಿಧಿಸಿದ್ದ ವಿಜಯನಗರ ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿಗೆ ಮುಖಭಂಗವಾಗಿದೆ. ಈ ಕ್ಷೇತ್ರದಲ್ಲೂ ಹರಿಪ್ರಸಾದ್‌ ಅವರಿಗಿಂತ ಸೂರ್ಯ ಅವರಿಗೆ 34 ಸಾವಿರ ಹೆಚ್ಚು ಮತಗಳು ಬಂದಿವೆ.

ಲಕ್ಷದ ಗಡಿ ದಾಟಿಸಿದ ಬಿಜೆಪಿ ಶಾಸಕರು: ಬಿಜೆಪಿಯ ಶಾಸಕರು ಇರುವ ಗೋವಿಂದರಾಜನಗರ, ಬೊಮ್ಮನಹಳ್ಳಿ, ಪದ್ಮನಾಭನಗರ, ಬಸವನಗುಡಿ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲೂ ನಿರೀಕ್ಷೆಯಂತೆ ತೇಜಸ್ವಿ ಸೂರ್ಯ ಅವರು ಭರ್ಜರಿಯಾಗಿ ಮತ ಗಳಿಕೆ ಮಾಡಿದ್ದಾರೆ.‌

ಆರ್.ಅಶೋಕ, ಎಲ್‌.ಎ.ರವಿ ಸುಬ್ರಹ್ಮಣ್ಯ ಹಾಗೂ ಸತೀಶ್ ರೆಡ್ಡಿ, ತಮ್ಮ ಕ್ಷೇತ್ರಗಳಲ್ಲಿ ಲಕ್ಷಕ್ಕೂ ಹೆಚ್ಚು ಮತಗಳು ಸೂರ್ಯ ಅವರಿಗೆ ಬರುವಂತೆ ನೋಡಿಕೊಂಡಿದ್ದಾರೆ. ಇವರ ಮತಗಳಿಂದಲೇ ಗೆಲುವಿನ ಅಂತರವೂ ಹೆಚ್ಚಳವಾಗಿದೆ. ವಿ. ಸೋಮಣ್ಣ ಹಾಗೂ ಉದಯ ಗರುಡಾಚಾರ್ ಅವರ ಕ್ಷೇತ್ರದಲ್ಲೂ ಅತ್ಯಧಿಕ ಮತಗಳು ಬಂದಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !