ಆತಂಕದಲ್ಲಿ ಮುಳುಗಿಸುವ ಕಾಲುವೆಗಳು!

ಬುಧವಾರ, ಜೂನ್ 26, 2019
24 °C

ಆತಂಕದಲ್ಲಿ ಮುಳುಗಿಸುವ ಕಾಲುವೆಗಳು!

Published:
Updated:
Prajavani

ಮಂಗಳೂರು: ಕರಾವಳಿಯಲ್ಲಿ ಮುಂಗಾರಿನ ಕರಿ ಮೋಡಗಳು ದಟ್ಟೈಸುತ್ತಿದ್ದಂತೆಯೇ ಮಂಗಳೂರು ನಗರದ ತಗ್ಗು ಪ್ರದೇಶದ ಜನರ ಎದೆ ಬಡಿತ ಹೆಚ್ಚಲಾರಂಭಿಸುತ್ತದೆ. ಬೇಡವೆಂದರೂ ಮತ್ತೆ ಮತ್ತೆ ಹಿಂದಿನ ಮಳೆಗಾಲದ ದಿನಗಳು ಕಣ್ಣ ಮುಂದೆ ಸರಿದು ಹೋಗುತ್ತವೆ. ಬೃಹತ್‌ ಮಳೆನೀರು ಕಾಲುವೆಗಳ ಇಕ್ಕೆಲಗಳ ಜನರಂತೂ ಮಳೆಗಾಲವನ್ನು ನೆನೆದು ಕನವರಿಕೆಯಲ್ಲೂ ಭಯ ಬೀಳುತ್ತಾರೆ. ಕಳೆದ ವರ್ಷದ ಮೇ 29ರಂದು ನಗರದ ಬಹುಭಾಗದ ಜನಜೀವನವನ್ನು ಸ್ತಬ್ಧಗೊಳಿಸಿದ್ದ ಮಹಾಮಳೆಯ ನೆನಪು ಹಿಂದೆಂದಿಗಿಂತಲೂ ಹೆಚ್ಚಾಗಿ ಈ ಬಾರಿ ನಗರದ ಜನರನ್ನು ಕಾಡಲಾರಂಭಿಸಿದೆ.

ನಗರದಲ್ಲಿ ಸುರಿಯುವ ಅಪಾರ ಪ್ರಮಾಣದ ಮಳೆಯ ನೀರು ಫಲ್ಗುಣಿ ಮತ್ತು ನೇತ್ರಾವತಿ ನದಿಗಳನ್ನು ಸೇರುವುದಕ್ಕಾಗಿ ನೈಸರ್ಗಿಕವಾಗಿಯೇ ಇದ್ದ ಬೃಹತ್‌ ಕಾಲುವೆಗಳಲ್ಲಿ ಈಗ 9 ಮಾತ್ರ ಉಳಿದುಕೊಂಡಿವೆ. ಈ ಕಾಲುವೆಗಳು ಮತ್ತು ಅವುಗಳ ಉಪ ಕಾಲುವೆಗಳ ಉದ್ದ ಸುಮಾರು 110 ಕಿ.ಮೀ. ಇದೆ. ನಗರದ ತುಂಬಾ ಇರುವ ರಸ್ತೆಗಳ ಇಕ್ಕೆಲಗಳಲ್ಲಿರುವ ಚರಂಡಿಗಳು ಉಪ ಕಾಲುವೆಗಳಿಗೆ ನೀರನ್ನು ತಂದು ಜೋಡಿಸುತ್ತವೆ. ನಗರದ 60 ವಾರ್ಡ್‌ಗಳಲ್ಲಿ ವಿಸ್ತರಿಸಿಕೊಂಡಿರುವ ಚರಂಡಿಗಳ ಉದ್ದ ಸುಮಾರು 3,850 ಕಿಲೋಮೀಟರ್‌. ಈ ಎಲ್ಲ ಚರಂಡಿಗಳೂ ಸುಸ್ಥಿತಿಯಲ್ಲಿ ಇದ್ದರೆ ನಗರದ ಜನತೆ ಎಲ್ಲ ಕಾಲಕ್ಕೂ ನೆಮ್ಮದಿಯಿಂದ ಇರಲು ಸಾಧ್ಯವಿತ್ತು.

ಆದರೆ, ಬಹುತೇಕ ರಾಜ ಕಾಲುವೆಗಳು ಹೂಳಿನಿಂದ ತುಂಬಿಹೋಗಿವೆ. ಒಂದಷ್ಟು ಕಡೆಗಳಲ್ಲಿ ರಿಯಲ್‌ ಎಸ್ಟೇಟ್‌ ಮಾಫಿಯಾ ಮತ್ತು ಇಕ್ಕೆಲಗಳಲ್ಲಿರುವ ಆಸ್ತಿಗಳ ಮಾಲೀಕರ ಭೂದಾಹಕ್ಕೆ ಕಿರಿದಾಗಿವೆ. ರಸ್ತೆ ಪಕ್ಕದ ಚರಂಡಿಗಳಲ್ಲಿ ಎರಡನೇ ಬಾರಿಗೆ ಹೂಳು ತೆಗೆಯುತ್ತಿರುವುದಾಗಿ ಪಾಲಿಕೆ ಆಡಳಿತ ಹೇಳಿಕೊಳ್ಳುತ್ತಿದೆ. ಆದರೆ, ನಗರದ ಹೃದಯ ಭಾಗದ ಬಹುತೇಕ ಕಡೆಗಳಲ್ಲಿ ಹೂಳು ತುಂಬಿಕೊಂಡ ಚರಂಡಿಗಳ ಸ್ಥಿತಿಯಲ್ಲಿ ಕೊಂಚವೂ ಬದಲಾವಣೆ ಆಗಿಲ್ಲ. ಇವೆಲ್ಲವೂ ಈ ಬಾರಿಯ ಮಳೆಗಾಲಕ್ಕೂ ಮೊದಲೇ ಮಂಗಳೂರಿಗರನ್ನು ಚಿಂತೆಯ ಕಡಲಲ್ಲಿ ಮುಳುಗಿಸಿವೆ.

ಕೊಟ್ಟಾರದ ನೆನಪು: ಪ್ರತಿ ವರ್ಷವೂ ಜೋರಾಗಿ ಮಳೆ ಸುರಿದಾಗ ಕೊಟ್ಟಾರ ಚೌಕಿ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿಯುವುದು ವಾಡಿಕೆಯಂತಾಗಿದೆ. ಕೆಲವು ಸಮಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಬಂದ್‌ ಆಗುವುದೂ ಸಾಮಾನ್ಯವಾಗಿತ್ತು. ಆದರೆ, ಕಳೆದ ವರ್ಷ ಮೇ 29ರಂದು ಸುರಿದ ಮಳೆಗೆ ಕೊಟ್ಟಾರ ಚೌಕಿ ಅಕ್ರಶಃ ಸಮುದ್ರದಂತಾಗಿತ್ತು. ಇಡೀ ದಿನ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್‌ ಆದಂತಾಗಿತ್ತು. ಪಂಪ್‌ವೆಲ್‌, ಸುರತ್ಕಲ್‌ನ ಹೊನ್ನಕಟ್ಟೆ ಜಂಕ್ಷನ್‌ ಸೇರಿದಂತೆ ಹಲವು ಕಡೆಗಳಲ್ಲಿ ಆ ದಿನ ಕಿಲೋಮೀಟರ್‌ಗಳಷ್ಟು ಉದ್ದಕ್ಕೆ ರಸ್ತೆ ಮುಳುಗಿ ಹೋಗಿತ್ತು.

ಮತ್ತೆ ಮತ್ತೆ ನಗರವನ್ನು ಕಾಡುವ ಪ್ರವಾಹ ಸ್ಥಿತಿಯನ್ನು ತಪ್ಪಿಸಲು ಜಿಲ್ಲಾಡಳಿತ ಪ್ರಯತ್ನ ಆರಂಭಿಸಿತ್ತು. ಮಳೆನೀರು ಕಾಲುವೆಗಳ ಒತ್ತುವರಿ ಮತ್ತು ಅವುಗಳ ಸ್ಥಿತಿಗತಿ ಕುರಿತು ಸುರತ್ಕಲ್‌ನ ಎನ್‌ಐಟಿಕೆಯ ತಜ್ಞರಿಂದ ವರದಿಯನ್ನೂ ಪಡೆದಿತ್ತು. ವರದಿ ಆಧರಿಸಿ ಒಂದಷ್ಟು ಕೆಲಸಗಳೂ ಆಗಿವೆ. ಆದರೆ, ಪೂರ್ಣ ಪ್ರಮಾಣದಲ್ಲಿ ಮಳೆ ನೀರು ಕಾಲುವೆಗಳನ್ನು ಸರಿಪಡಿವ ಕೆಲಸ ಸಾಧ್ಯವಾಗಿಲ್ಲ. ಇದರಿಂದಾಗಿ ಕೃತಕ ನೆರೆಯ ಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಖಚಿತವಾಗಿ ಹೇಳುವ ಧೈರ್ಯವೂ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಗೆ ಇಲ್ಲವಾಗಿದೆ.

‘ಎನ್‌ಐಟಿಕೆ ತಜ್ಞರ ತಂಡ ನೀಡಿದ ವರದಿ ಆಧರಿಸಿ ಕೆಲವು ಕಡೆಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ. ರಾಜ ಕಾಲುವೆಗಳಲ್ಲಿ ಗಿಡಗಳು ಬೆಳೆದದ್ದೇ ಸಮಸ್ಯೆಗೆ ಮೂಲಕ ಕಾರಣ. ಈ ಬಾರಿ ಮಹಾನಗರ ಪಾಲಿಕೆ ಬೃಹತ್‌ ಕಾಲುವೆಗಳ ಹೂಳು ತೆಗೆಯುವ ಕೆಲಸ ಮಾಡಿದೆ. ಕೆಲವು ಕಡೆಗಳಲ್ಲಿ ಸಿಮೆಂಟ್‌ ಪೈಪ್‌ ಹಾಕಿ ಕಾಲುವೆ ಮುಚ್ಚಲಾಗಿತ್ತು. ಅವುಗಳನ್ನು ತೆರವುಗೊಳಿಸಲಾಗಿದೆ. ಈ ಬಾರಿ ಸಮಸ್ಯೆ ಸೃಷ್ಟಿಯಾಗಲಾರದು ಎಂಬ ನಿರೀಕ್ಷೆಯಲ್ಲಿದ್ದೇವೆ’ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌.

ತಗ್ಗು ಪ್ರದೇಶಗಳಲ್ಲಿ ಆತಂಕ: ಹೈದರಾಬಾದ್‌ ಭಾರತೀಯ ಆಡಳಿತಾತ್ಮಕ ಸಿಬ್ಬಂದಿ ಕಾಲೇಜು (ಎಎಸ್‌ಸಿಐ) 2010ರಲ್ಲಿ ನಡೆಸಿದ ಅಧ್ಯಯನವೊಂದರ ಪ್ರಕಾರ, ನಗರದಲ್ಲಿ 11 ತಗ್ಗು ಪ್ರದೇಶಗಳಿದ್ದವು. ಅಲ್ಲಿ ಮಳೆಗಾಲದಲ್ಲಿ ಆಗಾಗ ಪ್ರವಾಹ ಸ್ಥಿತಿ ಉಂಟಾಗುತ್ತಿತ್ತು. ಈಗಲೂ ಈ ಪ್ರದೇಶಗಳನ್ನು ನೆರೆ ಹಾವಳಿಯಿಂದ ಹೊರತರಲು ಮಹಾನಗರ ಪಾಲಿಕೆ ಆಡಳಿತಕ್ಕೆ
ಸಾಧ್ಯವಾಗಿಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !