ಗುರುವಾರ , ಸೆಪ್ಟೆಂಬರ್ 24, 2020
21 °C

2015ರ ವಿಶ್ವಕಪ್: ಕಾಡಿದ ಮಳೆ; ಜಯ ಕಸಿದ ಗ್ರ್ಯಾಂಟ್ ಎಲಿಯಟ್ ಸಿಕ್ಸರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಮುಖ ಟೂರ್ನಿಗಳ ಮುಖ್ಯ ಹಂತಗಳಲ್ಲಿ ನಿರಾಸೆ ಅನುಭವಿಸುವ ‘ಚಾಳಿ’ ಬೆಳೆಸಿಕೊಂಡಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಆ ‘ಪಟ್ಟ’ದಿಂದ ಹೊರಬರಲು ಲಭಿಸಿದ ಸುವರ್ಣಾವಕಾಶವಾಗಿತ್ತು ಈಡನ್ ಪಾರ್ಕ್‌ನಲ್ಲಿ ನಡೆದಿದ್ದ ಸೆಮಿಫೈನಲ್ ಪಂದ್ಯ. ಆದರೆ ನ್ಯೂಜಿಲೆಂಡ್ ಎದುರಿನ ಈ ಪಂದ್ಯದಲ್ಲೂ ತಂಡ ಮುಗ್ಗರಿಸಿತು. ಇಲ್ಲಿ ಎಬಿ ಡಿವಿಲಿಯರ್ಸ್ ಬಳಗವನ್ನು ಮೊದಲು ಕಾಡಿದ್ದು ಮಳೆ; ಕೊನೆಯಲ್ಲಿ ಗ್ರ್ಯಾಂಡ್ ಎಲಿಯಟ್.

* ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಸೊಗಸಾದ ಆಟದ ಮೂಲಕ ಉತ್ತಮ ಮೊತ್ತ ಕಲೆ ಹಾಕಿತ್ತು. ಎಂಟನೇ ಓವರ್‌ನಲ್ಲಿ 31 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದಲ್ಲಿಂದ ಚೇತರಿಸಿಕೊಂಡ ತಂಡ 43 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 281 ರನ್ ಗಳಿಸಿತು. ಆಗ ಕಾಡಿದ ಮಳೆ ತಂಡದ ಭರವಸೆಯನ್ನು ಕೊಚ್ಚಿಕೊಂಡು ಹೋಯಿತು.

* ಹಾಶಿಂ ಆಮ್ಲಾ ಮತ್ತು ಕ್ವಿಂಟನ್ ಡಿ ಕಾಕ್ ಔಟಾದ ನಂತರ ಫಾಫ್ ಡು ಪ್ಲೆಸಿ ಅಮೋಘ ಆಟದ ಮೂಲಕ ತಂಡವನ್ನು ಕಾಪಾಡಿದರು. 82 ರನ್ ಗಳಿಸಿದ ಅವರಿಗೆ ರಿಲಿ ರೊಸ್ಸೊ ಉತ್ತಮ ಸಹಕಾರ ನೀಡಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ ಸೇರಿಸಿದ್ದು 83 ರನ್.

* ರೊಸೊ ವಾಪಸಾದ ನಂತರ ಡು ಪ್ಲೆಸಿ ಮತ್ತು ಡಿವಿಲಿಯರ್ಸ್ 103 ರನ್ ಜೊತೆಯಾಟವಾಡಿ ತಂಡದ ಮತ್ತವನ್ನು 200ರ ಗಡಿ ದಾಟಿಸಿದರು. 65 ರನ್ ಗಳಿಸಿದ ಡಿವಿಲಿಯರ್ಸ್ ಮತ್ತು 18 ಎಸೆತಗಳಲ್ಲಿ 49 ರನ್ ಗಳಿಸಿದ ಡೇವಿಡ್ ಮಿಲ್ಲರ್ ಜೊತೆಯಾಟವೂ ಕಳೆಗಟ್ಟಿತು. ಜೆಪಿ ಡುಮಿನಿ ಕ್ರೀಸ್‌ಗೆ ಬಂದ ಸ್ವಲ್ಪ ಹೊತ್ತಿನಲ್ಲೇ ಮಳೆ ಕಾಡಿತು.

* ಮಳೆ ನಿಂತಾಗ ನ್ಯೂಜಿಲೆಂಡ್ ಗೆಲುವಿಗೆ ಪರಿಷ್ಕೃತ ಗುರಿ ನೀಡಲಾಯಿತು. ಬ್ರೆಂಡನ್ ಮೆಕ್ಲಂ ಬಳಗ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 43 ಓವರ್‌ಗಳಲ್ಲಿ 298 ರನ್ ಗಳಿಸಬೇಕಾಗಿತ್ತು. ಮಾರ್ಟಿನ್ ಗಪ್ಟಿಲ್ ಮತ್ತು ನಾಯಕ ಮೊದಲ ವಿಕೆಟ್‌ಗೆ 71 ರನ್ ಸೇರಿಸಿದರು. ಗಪ್ಟಿಲ್ ಔಟಾದ ನಂತರವೂ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ ಮೆಕ್ಲಂ 26 ಎಸೆತಗಳಲ್ಲಿ 59 ರನ್ ಗಳಿಸಿದರು. ನಾಲ್ಕು ಸಿಕ್ಸರ್ ಮತ್ತು ಎಂಟು ಬೌಂಡರಿ ಸಿಡಿಸಿದ ಅವರು ತಂಡಕ್ಕೆ ಸುಲಭ ಜಯ ತಂದುಕೊಡುವ ಭರವಸೆ ಮೂಡಿಸಿದ್ದರು.

* ಮಾರ್ನೆ ಮಾರ್ಕೆಲ್ ಮತ್ತು ಜೆಪಿ ಡುಮಿನಿ ದಾಳಿಗೆ ಕಂಗೆಟ್ಟ ನ್ಯೂಜಿಲೆಂಡ್ ಏಕಾಏಕಿ ಪತನದ ಹಾದಿ ಹಿಡಿಯಿತು. ಆದರೆ 22ನೇ ಓವರ್ ನಂತರ ಪಂದ್ಯ ಮತ್ತೆ ತಿರುವು ಕಂಡಿತು. ಗ್ರ್ಯಾಂಟ್ ಎಲಿಯಟ್ ಮತ್ತು ಕೋರಿ ಆ್ಯಂಡರ್ಸನ್ 103 ರನ್ ಸೇರಿಸಿ ಪಂದ್ಯದ ಗತಿ ಬದಲಿಸಿದರು.

* ಕೋರಿ ಆ್ಯಂಡರ್ಸನ್ ಮತ್ತು ಲೂಕ್ ರಾಂಚಿ ಅವರನ್ನು ಕ್ರಮವಾಗಿ ಮಾರ್ಕೆಲ್ ಮತ್ತು ಡೇಲ್ ಸ್ಟೇನ್ ಪೆವಿಲಿಯನ್‌ಗೆ ಕಳುಹಿಸಿದಾಗ ಹರಿಣಗಳ ನಾಡಿನವರ ಮುಖ ಅರಳಿತು. ನಂತರ ನಡೆದದ್ದೆಲ್ಲವೂ ನಾಟಕೀಯ. ಅಂತಿಮ ಓವರ್‌ನಲ್ಲಿ ಗೆಲುವಿಗೆ 12 ರನ್ ಬೇಕಾಗಿತ್ತು. ಸ್ಟ್ರೈಕ್ ತೆಗೆದುಕೊಂಡದ್ದು ವೆಟೋರಿ. ಮೊದಲ ಎಸೆತದಲ್ಲಿ ಬೈ ಮೂಲಕ ಒಂದು ರನ್. ಎರಡನೇ ಎಸೆತ ಹಾಕಿದ ನಂತರ ಸ್ಟೇನ್ ಪಕ್ಕೆಲುಬು ನೋವಿಗೆ ಒಳಗಾದರು. ಪ್ರಥಮ ಚಿಕಿತ್ಸೆ ಪಡೆದ ನಂತರ ಬೌಲಿಂಗ್ ಮುಂದುವರಿಸಿದ ಅವರಿಗೆ ನಿರಾಸೆ ಕಾದಿತ್ತು. ಐದನೇ ಎಸೆತವನ್ನು ಸಿಕ್ಸರ್‌ಗೆ ಎತ್ತಿದ ಎಲಿಯಟ್ ಕುಪ್ಪಳಿಸಿದರು. ತಂಡದ ಆಟಗಾರರ ಸಂಭ್ರಮ ಗರಿಗೆದರಿತು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು