ಗುರುವಾರ , ಅಕ್ಟೋಬರ್ 29, 2020
20 °C
ಪ್ರಕೃತಿ ವಿಕೋಪದಿಂದ ನಲುಗಿ ಹೋಗಿದ್ದ ಹೆತ್ತೂರು, ಯಸಳೂರು ಹೋಬಳಿ ಜನರು

ಮತ್ತೆ ಮುಂಗಾರು; ಆತಂಕದಲ್ಲಿ ಮಲೆನಾಡಿಗರು

ಪವನ ಎಚ್.ಎಸ್ Updated:

ಅಕ್ಷರ ಗಾತ್ರ : | |

Prajavani

ಹೆತ್ತೂರು: ಮುಂಗಾರು ಕೆಲವೇ ದಿನಗಳಲ್ಲಿ ರಾಜ್ಯಕ್ಕೆ ಕಾಲಿಡಲಿದೆ ಎನ್ನುವ ಸುದ್ದಿ ರೈತರಲ್ಲಿ ಹರ್ಷ ಮೂಡಿಸಿದೆ. ಆದರೆ, ತಾಲ್ಲೂಕಿನ ಹೆತ್ತೂರು, ಯಸಳೂರು ಹಾಗೂ ಕೊಡಗು ಜಿಲ್ಲೆಯ ಶಾಂತಳ್ಳಿ ಹೋಬಳಿಯ, ಪಶ್ಚಿಮಘಟ್ಟದಲ್ಲಿರುವ ಜನರಲ್ಲಿ ಆತಂಕ ಮೂಡಿಸಿದೆ.

ಕಳೆದ ವರ್ಷ ಪ್ರಕೃತಿ ವಿಕೋಪದಿಂದಾಗಿ ಈ ಭಾಗದಲ್ಲಿ ಹಲವೆಡೆ ಭೂಕುಸಿತವುಂಟಾಗಿತ್ತು. ಅಲ್ಲದೇ, ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿ, ಸಾವಿರಾರು ಮರಗಳು, ಎಕರೆಗಟ್ಟಲೆ ಕಾಫಿ, ಏಲಕ್ಕಿ ತೋಟಗಳು ಕುಸಿದು ಹೋಗಿದ್ದವು. ಅನೇಕ ಮನೆಗಳಿಗೂ ಹಾನಿಯಾಗಿತ್ತು.

ಹಿಜ್ಜನಹಳ್ಳಿ, ಮಾಗೇರಿ, ನೇರಡಿ, ತಂಬಲಗೇರಿ, ಸೋಮವಾರಪೇಟೆ ತಾಲ್ಲೂಕಿನ ಕುಂದಳ್ಳಿ, ಶಾಂತಳ್ಳಿ, ಕೂತಿ, ತೋಳೂರುಶೇಟ್ಟಳ್ಳಿ ಸೇರಿ ದಂತೆ ಈ ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು ಮಾಗೇರಿ ಗ್ರಾಮದಲ್ಲಿ ಗಂಜಿ ಕೇಂದ್ರವನ್ನೂ ತೆರೆಯಲಾಗಿತ್ತು.

ಧಾರ್ಮಿಕ ಕ್ಷೇತ್ರ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಬಿಸಿಲೆ ಘಾಟ್‌ ರಸ್ತೆ ಸಹ ಕೊಚ್ಚಿ ಹೋಗಿತ್ತು. ಇದರಿಂದಾಗಿ ಮಾಯನೂರು, ಪಟ್ಲ, ಬಿಸಿಲೆ ಗ್ರಾಮದ ಜನರಿಗೂ ಸಾಕಷ್ಟು ಅನಾನುಕೂಲಗಳಾಗಿದ್ದವು.

‘ಕಳೆದ ವರ್ಷ ಉಂಟಾಗಿದ್ದ ಅನಾಹುತದಿಂದ ಜನರು ಇನ್ನೂ ಚೇತ ರಿಸಿಕೊಂಡಿಲ್ಲ. ಈಗ ಮತ್ತೆ ಮಳೆಗಾಲ ಎದುರಾಗಿದ್ದು ಜಿಲ್ಲಾಡಳಿತ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಅಲ್ಲದೇ ಇಲ್ಲಿನ ವಾಸಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ’ ಎಂದು ಹಿಜ್ಜನಹಳ್ಳಿ ಗ್ರಾಮದ ದರ್ಶನ್‌ ಬೇಸರ ವ್ಯಕ್ತಪಡಿಸಿದರು.

‘ಹಿಂದೆ, ಈ ಭಾಗದಲ್ಲಿ ನಾಲ್ಕಕ್ಕೂ ಹೆಚ್ಚು ತಿಂಗಳೂ ಮಳೆ ಸುರಿಯುತ್ತಿತ್ತು. ಹಳ್ಳ ಕೊಳ್ಳಗಳು, ಹೊಳೆ, ಝರಿಗಳು ವರ್ಷಪೂರ್ತಿ ಹರಿಯುತ್ತಿದ್ದವು. ಎಲ್ಲ ಕಾಲದಲ್ಲೂ ಪ್ರಾಕೃತಿಕವಾಗಿ ನೀರು ಲಭ್ಯವಾಗುತ್ತಿತ್ತು.  ಆದರೆ, ಕಳೆದ ಭಾರಿ ಕೇವಲ ಒಂದೇ ತಿಂಗಳಲ್ಲಿ ಅಪಾರ ಮಳೆ ಸುರಿಯಿತು. ಇದರಿಂದಾಗಿ ಎಲ್ಲವೂ ಕೊಚ್ಚಿ ಹೋಯಿತು. ಬಳಿಕ ಮಳೆಯೇ ಸುರಿಯಲಿಲ್ಲ. ಅಲ್ಲದೇ, ವರ್ಷಪೂರ್ತಿ ಹರಿಯುತ್ತಿದ್ದ ನೀರಿನ ಮೂಲಗಳು ಬತ್ತಿಹೋಗಿವೆ. ಇದರಿಂದಾಗಿ ಬೇಸಿಗೆ ಬೆಳೆಯನ್ನೇ ಮಾಡಲು ಸಾಧ್ಯವಾಗಲಿಲ್ಲ’ ಎನ್ನುತ್ತಾರೆ ಮಾಲ್‌ಮನೆ ಶ್ರೀಮಾನ್‌.

ಅಧಿಕಾರಿಗಳ ತಂಡ ರಚನೆ:

‘ಪ್ರಕೃತಿ ವಿಕೋಪ ಎದುರಿಸಲು ತಾಲ್ಲೂಕು ಆಡಳಿತ ಸಜ್ಜಾಗಿದೆ. ಅದಕ್ಕೆಂದು ‘ಬಿ’ ಗ್ರೇಡ್‌ ಅಧಿಕಾರಿಯೊ ಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಅಲ್ಲದೇ, ಸ್ಥಳೀಯ ಅಧಿಕಾರಿಗಳ ತಂಡಗಳನ್ನೂ ರಚಿಸಲಾಗಿದ್ದು,  ಹಗಲು ಮತ್ತು ರಾತ್ರಿ ಕಾರ್ಯಾಚರಣೆ ನಡೆಸಲಿ ದ್ದಾರೆ. ಅಲ್ಲದೇ, 24X7 ಸಹಾಯವಾಣಿ ಕೇಂದ್ರವನ್ನೂ ಆರಂಭಿಸಲಾಗಿದೆ’ ಎಂದು ‘ಪ್ರಜಾವಾಣಿ’ಗೆ ತಹಶೀಲ್ದಾರ್‌ ನಿರಂಜನ ತಿಳಿಸಿದರು.

‘ಇತ್ತೀಚೆಗೆ ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಭಾರಿ ಯಾವುದೇ ಅನಾಹುತ  ಸಂಭವಿಸುವುದಿಲ್ಲ ಎಂದು ವರದಿ ನೀಡಿದೆ. ಆದರೂ, ಮುಂಬೈನಿಂದ ಕಾರ್ಯಾಚರಣೆಗೆ ಬೇಕಾದ ಸಾಮಗ್ರಿಗಳನ್ನು ತರಿಸಲಾಗಿದೆ. ಸಿಬ್ಬಂದಿಗೆ ರೈನ್‌ಕೋಟ್‌, ಅಗತ್ಯ ಟಾರ್ಚ್‌ಗಳನ್ನೂ ತರಿಸಲಾಗಿದ್ದು,  ಅಗ್ನಿಶಾಮಕ ದಳದ ಸಿಬ್ಬಂದಿಯೂ ಸನ್ನದ್ಧರಾಗಿದ್ದಾರೆ’ ಎಂದು ಅವರು ತಿಳಿಸಿದರು.

ಗಂಜಿಕೇಂದ್ರಗಳನ್ನು ತೆರೆಯಲು ಹೋಬಳಿಗಳಲ್ಲಿ ಮೂಲಸೌಲಭ್ಯಗಳನ್ನು ಹೊಂದಿರುವ ಸೂಕ್ತ ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲದೇ, ಅಲ್ಲಿ ಆಗಬೇಕಿದ್ದ ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನೂ ನಡೆಸಲಾಗಿದೆ. ಅಗತ್ಯ ನೋಡಿಕೊಂಡು ಎಷ್ಟುಬೇಕು ಅಷ್ಟು ಗಂಜಿಕೇಂದ್ರಗಳನ್ನು ತೆರೆಯಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು