ಅಕಾಡೆಮಿಗಳಿಗೆ ಅನುದಾನ ಕಡಿತಪ್ರಸ್ತಾವ ಮರುಪರಿಶೀಲನೆಯಾಗಲಿ

ಬುಧವಾರ, ಜೂನ್ 19, 2019
28 °C

ಅಕಾಡೆಮಿಗಳಿಗೆ ಅನುದಾನ ಕಡಿತಪ್ರಸ್ತಾವ ಮರುಪರಿಶೀಲನೆಯಾಗಲಿ

Published:
Updated:
Prajavani

ವಿವಿಧ ಅಕಾಡೆಮಿಗಳಿಗೆ ನೀಡಲಾಗುತ್ತಿರುವ ವಾರ್ಷಿಕ ಅನುದಾನವನ್ನು ಕಡಿತಗೊಳಿಸಲು ಮುಂದಾಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕ್ರಮ, ಸಾಂಸ್ಕೃತಿಕ ವಲಯದ ಟೀಕೆಗೆ ಗುರಿಯಾಗಿದೆ. ಕನ್ನಡ ಸಾಹಿತ್ಯ–ಸಂಸ್ಕೃತಿ ಪೋಷಕ ಕೆಲಸಗಳಲ್ಲಿ ತೊಡಗಿರುವ ಸಂಸ್ಥೆಗಳಿಗೆ ಅನುದಾನವನ್ನು ಕಡಿತಗೊಳಿಸುವುದು ಸಂಸ್ಕೃತಿ ವಿರೋಧಿ ನೀತಿ ಎಂದು ಕೆಲವು ಅಕಾಡೆಮಿಗಳ ಅಧ್ಯಕ್ಷರು ಕಟುಮಾತುಗಳನ್ನಾಡಿದ್ದಾರೆ. ಅವರ ಈ ಆತಂಕ–ಆಕ್ರೋಶ ಸಹಜವಾದುದು. ಪ್ರತಿವರ್ಷ ಏರಿಕೆಯಾಗಬೇಕಾದ ಅನುದಾನದಲ್ಲಿ ಒಮ್ಮೆಗೇ ಗಣನೀಯ ಪ್ರಮಾಣದಲ್ಲಿ ಹಣ ಕಡಿಮೆಯಾದರೆ ಅಕಾಡೆಮಿಗಳ ವಾರ್ಷಿಕ ಚಟುವಟಿಕೆಗಳು ಅಸ್ತವ್ಯಸ್ತವಾಗುತ್ತವೆ. ಈಗಾಗಲೇ ಜಾರಿಯಲ್ಲಿರುವ ಕಾರ್ಯಕ್ರಮಗಳನ್ನು ನಡೆಸುವುದೇ ಕಷ್ಟವಾಗಿ, ಹೊಸ ಯೋಜನೆಗಳ ಬಗ್ಗೆ ಯೋಚಿಸುವುದೂ ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಇದು ಅಕಾಡೆಮಿಗಳ ಕುತ್ತಿಗೆ ಹಿಚುಕುವ ಕ್ರಮ ಎನ್ನುವುದರಲ್ಲಿ ಅನುಮಾನವೇನೂ ಇಲ್ಲ. ಈವರೆಗೆ ಪ್ರತಿ ಅಕಾಡೆಮಿಗೆ ಸರ್ಕಾರದಿಂದ ಸುಮಾರು ₹ 1 ಕೋಟಿ ಅನುದಾನ ದೊರೆಯುತ್ತಿತ್ತು. ಈ ಮೊತ್ತದಲ್ಲಿ ಅರ್ಧದಷ್ಟು ಹಣ ಸಿಬ್ಬಂದಿಯ ಸಂಬಳಕ್ಕೆ ವೆಚ್ಚವಾಗುವುದರಿಂದ, ದೀರ್ಘಾವಧಿ ಯೋಜನೆಗಳನ್ನು ಹಮ್ಮಿಕೊಳ್ಳಲಿಕ್ಕಾಗಿ ಇನ್ನೂ ₹ 50 ಲಕ್ಷದಿಂದ ₹ 75 ಲಕ್ಷದಷ್ಟು ಹೆಚ್ಚುವರಿ ಅನುದಾನ ಅಗತ್ಯ ಎಂದು ಅಕಾಡೆಮಿಗಳು ಕಳೆದ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಸಲ್ಲಿಸಿದ್ದವು. ಆದರೆ, ಅನುದಾನ ಹೆಚ್ಚು ಮಾಡುವ ಬದಲು ಕಡಿಮೆ ಮಾಡಲು ಮುಂದಾಗಿರುವುದು ಸಾಂಸ್ಕೃತಿಕ ವಲಯಕ್ಕೆ ಆಘಾತ ತಂದಿದೆ. ಇಲಾಖೆಯ ಪ್ರಸ್ತಾವದ ಹಿಂದೆ ಕೆಲವು ಅಧಿಕಾರಿಗಳ ಕೈವಾಡವೂ ಇದೆ ಎನ್ನುವ ಆರೋಪವಿದೆ. ಬರದ ಕಾರಣ ನೀಡಿ ಅನುದಾನಕ್ಕೆ ಕತ್ತರಿ ಹಾಕಲಾಗಿದೆ ಎನ್ನುವ ಅಭಿಪ್ರಾಯವೂ ಇದೆ. ಕಾರಣಗಳೇನೇ ಇರಲಿ, ಸರ್ಕಾರದ ಕ್ರಮ ನಾಡಿನ ಸಾಂಸ್ಕೃತಿಕ ಹಿತಾಸಕ್ತಿಗೆ ಪೂರಕವಾಗಿಲ್ಲ ಎನ್ನುವುದಂತೂ ಸ್ಪಷ್ಟ. ಸಂಸ್ಕೃತಿಯ ಚಟುವಟಿಕೆಗಳಿಗೆ ಹಣ ನೀಡುವುದು ಐಷಾರಾಮ ಎಂದು ಸರ್ಕಾರಕ್ಕೆ ಅನ್ನಿಸಿದರೆ, ಆ ಸರ್ಕಾರವು ಸಾಂಸ್ಕೃತಿಕ ದಾರಿದ್ರ್ಯದಿಂದ ಬಳಲುತ್ತಿದೆ ಎಂದೇ ಅರ್ಥ. ಭಾಷೆ–ಸಂಸ್ಕೃತಿಯ ಹೆಸರಿನಲ್ಲಿ ಕರ್ನಾಟಕದಲ್ಲಿ ಇರುವಷ್ಟು ಸಂಖ್ಯೆಯ ಸರ್ಕಾರಿಪೋಷಿತ ಸಂಸ್ಥೆಗಳು ದೇಶದ ಯಾವ ರಾಜ್ಯದಲ್ಲೂ ಇಲ್ಲ. ಇಡೀ ದೇಶಕ್ಕೆ ಕರ್ನಾಟಕದ್ದೇ ಸಾಂಸ್ಕೃತಿಕ ಮೇಲ್ಪಂಕ್ತಿ. ಈ ಹಿರಿಮೆಯನ್ನು ಮಸುಕಾಗಿಸುವ ಕೆಲಸವನ್ನು ಸರ್ಕಾರ ಮಾಡಬಾರದು.

ಅಕಾಡೆಮಿಗಳಿಗೆ ಅನುದಾನವನ್ನು ಕಡಿತಗೊಳಿಸುವ ಪ್ರಸ್ತಾವ, ಸರ್ಕಾರದ ಮರುಪರಿಶೀಲನೆಗೆ ಒಳಗಾಗುವುದು ಅಗತ್ಯ. ಅಂತೆಯೇ ಈಗಿನ ಬೆಳವಣಿಗೆಯು ಅಕಾಡೆಮಿಗಳ ಕಾರ್ಯನಿರ್ವಹಣೆಯ ವಿಮರ್ಶೆಗೂ ಕಾರಣವಾಗಬೇಕು. ಸಾಂಸ್ಕೃತಿಕ ಹೊಣೆಗಾರಿಕೆಯ ಹೆಸರಿನಲ್ಲಿ ಸಾರ್ವಜನಿಕರ ಹಣವನ್ನು ಪಡೆಯುತ್ತಿರುವ ಸಂಸ್ಥೆಗಳು, ಅದಕ್ಕೆ ತಕ್ಕನಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿವೆಯೇ ಎನ್ನುವುದರ ಚರ್ಚೆಯೂ ಆಗಬೇಕು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಕಾಡೆಮಿಗಳ ನೈಜ ಕೊಡುಗೆಯೇನು ಎನ್ನುವುದರ ಮೌಲ್ಯಮಾಪನ ನಡೆಯಬೇಕು. ಅಕಾಡೆಮಿ–ಪ್ರಾಧಿಕಾರಗಳ ಕಾರ್ಯನಿರ್ವಹಣೆ ಕುರಿತು ದೂರುಗಳಿಗೇನೂ ಕಡಿಮೆಯಿಲ್ಲ. ಅಕಾಡೆಮಿಗಳ ಕಾರ್ಯಯೋಜನೆಗಳಲ್ಲಿ ಪುನರಾವರ್ತನೆಯಾಗುತ್ತಿದೆ ಎನ್ನುವುದು ಸಾಮಾನ್ಯ ದೂರು. ವಾರ್ಷಿಕ ಪ್ರಶಸ್ತಿ ನೀಡುವಷ್ಟಕ್ಕೆ ಮಾತ್ರ ಕೆಲವು ಅಕಾಡೆಮಿಗಳು ಕ್ರಿಯಾಶೀಲವಾಗಿವೆ ಹಾಗೂ ಅವುಗಳ ಚಟುವಟಿಕೆಗಳು ಸಾಂಸ್ಕೃತಿಕ ದಲ್ಲಾಳಿಗಳ ನಿಯಂತ್ರಣದಲ್ಲಿವೆ ಎನ್ನುವ ಗಂಭೀರ ಆರೋಪಗಳೂ ಇವೆ. ಕಾರ್ಯಕ್ರಮಗಳನ್ನು ನಡೆಸದೆಯೇ ಹಣ ಪಡೆಯುವ ಲೆಟರ್‌ಹೆಡ್‌ ಸಂಸ್ಥೆಗಳೂ ಅಸ್ತಿತ್ವದಲ್ಲಿವೆ. ಇಂಥ ದೂರುಗಳ ಬಗ್ಗೆ ವಿಚಾರಣೆ–ಕ್ರಮ ಅಗತ್ಯ. ಸರ್ಕಾರದಿಂದ ಹಣ ಪಡೆಯಲು ಹಕ್ಕು ಮಂಡಿಸುವವರು ತಮ್ಮ ಉತ್ತರ
ದಾಯಿತ್ವ ಸಾಬೀತುಪಡಿಸುವ ಜವಾಬ್ದಾರಿಯನ್ನೂ ಹೊಂದಿರಬೇಕಾಗುತ್ತದೆ. ಪ್ರತಿ ಅಕಾಡೆಮಿ ತನ್ನದೇ ಆದ ಸ್ಪಷ್ಟ ಕ್ರಿಯಾ ಯೋಜನೆ ರೂಪಿಸಿಕೊಂಡು ಅದಕ್ಕೆ ಬದ್ಧವಾಗಿರುವಂತೆ ನೋಡಿಕೊಳ್ಳುವಲ್ಲಿ ಸರ್ಕಾರದ ಜವಾಬ್ದಾರಿಯೂ ಇದೆ. ಅಕಾಡೆಮಿಗಳು ಕ್ರಿಯಾಶೀಲವಾದ ವಿಶಿಷ್ಟ ಯೋಜನೆಗಳನ್ನು ರೂಪಿಸಿದಾಗ ಅವುಗಳಿಗೆ ಸರ್ಕಾರದ ಬೆಂಬಲ ದೊರಕಿಸಿಕೊಡಲು ಸಾರ್ವಜನಿಕರೂ ಒತ್ತಾಸೆಯಾಗಿ ನಿಲ್ಲುತ್ತಾರೆ. ಅಕಾಡೆಮಿಗಳನ್ನೂ ಒಳಗೊಂಡಂತೆ ಕರ್ನಾಟಕದ ಸಾಂಸ್ಕೃತಿಕ ನೀತಿಯ ಪುನರ್‌ ವಿವೇಚನೆಗೆ ಇದು ಸಕಾಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !