ಬುಧವಾರ, ಫೆಬ್ರವರಿ 26, 2020
19 °C
ಮೈಸೂರು ವಿಶ್ವವಿದ್ಯಾಲಯ: ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಒಪ್ಪಿಗೆ

6 ತಿಂಗಳಲ್ಲಿ 336 ಬೋಧಕ ಹುದ್ದೆ ಭರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:ಮೈಸೂರು ವಿಶ್ವವಿದ್ಯಾಲಯವು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಸೂಚನೆಯಂತೆ 6 ತಿಂಗಳಲ್ಲಿ ಖಾಲಿ ಇರುವ 336 ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲಿದೆ ಎಂದು ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ತಿಳಿಸಿದರು.

ಶುಕ್ರವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ‘ಈ ಸಂಬಂಧ ‘ಯುಜಿಸಿ’ಯು ಆದೇಶ ಹೊರಡಿಸಿದ್ದು, ನೇಮಕಾತಿಗಳನ್ನು ಮಾಡಿಕೊಳ್ಳದೇ ಇದ್ದಲ್ಲಿ ಪೂರ್ಣ ಪ್ರಮಾಣದಲ್ಲಿ ಅನುದಾನ ನಿಲ್ಲಿಸುವುದಾಗಿ ತಿಳಿಸಿದೆ. ಹಾಗಾಗಿ, ನಾವು ತುರ್ತಾಗಿ ನೇಮಕಾತಿಗಳನ್ನು ಮಾಡಿಕೊಳ್ಳಬೇಕಿದೆ’ ಎಂದು ಸಭೆಯ ಗಮನಕ್ಕೆ ತಂದರು.

‘ವಿಶ್ವವಿದ್ಯಾಲಯದಲ್ಲಿ ಈಗ ಬೋಧಕರ ಕೊರತೆ ಇದೆ. ಇದರಿಂದ ಶೈಕ್ಷಣಿಕ ಕಾರ್ಯಗಳು ಕುಂಠಿತವಾಗಿವೆ. ಅಲ್ಲದೇ, ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮೌಲ್ಯಾಂಕನಾ ಸಮಿತಿ (ನ್ಯಾಕ್‌) ಇತ್ಯಾದಿ ಸಂಸ್ಥೆಗಳಿಂದ ಸಿಗಬೇಕಾದ ಉನ್ನತ ಮಟ್ಟದ ಮಾನ್ಯತೆಯೂ ಸಿಗದಂತೆ ಆಗಿದೆ. ಹಾಗಾಗಿ, ‘ಯುಜಿಸಿ’ಯ ಈ ಆದೇಶವು ನಮಗೆ ವರದಾನವಾಗಿ ಪರಿಣಮಿಸಿದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

‘ಮೊದಲ ಹಂತದಲ್ಲಿ 76 ಬ್ಯಾಕ್‌ಲಾಗ್‌ ಹಾಗೂ 54 ಹೈದರಾಬಾದ್‌ ಕರ್ನಾಟಕ ಸೇರಿದಂತೆ ಒಟ್ಟು 130 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದಕ್ಕೆ ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಲಾಗಿದೆ. 15 ದಿನಗಳಲ್ಲಿ ಅರ್ಜಿ ಆಹ್ವಾನಿಸಿ ಜಾಹೀರಾತು ನೀಡಲಾಗುವುದು. ಮಿಕ್ಕ, 206 ಹುದ್ದೆಗಳನ್ನು ರೋಸ್ಟರ್‌ ಪದ್ಧತಿಯಂತೆ ನಂತರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಎರಡನೇ ಹಂತದ ಈ ನೇಮಕಾತಿ ಪ್ರಕ್ರಿಯೆಗೆ ಅನುಮತಿ ಕೋರಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುಮತಿ ಸಿಗುತ್ತಿದ್ದಂತೆಯೆ, ಪ್ರಕ್ರಿಯೆ ಶುರುಮಾಡಲಾಗುವುದು. 6 ತಿಂಗಳೊಳಗೆ ನೇಮಕಾತಿ ಪ್ರಕ್ರಿಯೆ ಮುಗಿಯಲಿವೆ’ ಎಂದು ಮಾಹಿತಿ ನೀಡಿದರು.

ಈ ಕುರಿತು ಬಳಿಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪ್ರೊ.ಹೇಮಂತಕುಮಾರ್‌, ‘2007ರಿಂದಲೂ ನೇಮಕಾತಿ ಪ್ರಕ್ರಿಯೆಗಳು ನಡೆದಿಲ್ಲ. ಈ ನಡುವೆ ಅನೇಕರು ನಿವೃತ್ತರಾಗಿದ್ದಾರೆ. ಹಾಗಾಗಿ, ಬೋಧಕರ ಕೊರತೆ ಉಂಟಾಗಿದೆ. ಹಾಗಾಗಿ, ನೇಮಕಾತಿ ಪ್ರಕ್ರಿಯೆ ಈಗಿನ ನಮ್ಮ ಪ್ರಮುಖ ಆದ್ಯತೆಯಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು