ಪ. ಬಂಗಾಳ: ರಾಜಕೀಯ ಹಿಂಸೆಕೊನೆಗೊಂಡು ಶಾಂತಿ ನೆಲೆಸಲಿ

ಶುಕ್ರವಾರ, ಜೂನ್ 21, 2019
24 °C
ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ನಿಷ್ಪಕ್ಷಪಾತ ಹಾಗೂ ಕಠಿಣ ಕ್ರಮಗಳನ್ನು ಮುಖ್ಯಮಂತ್ರಿ ಕೈಗೊಳ್ಳಬೇಕು

ಪ. ಬಂಗಾಳ: ರಾಜಕೀಯ ಹಿಂಸೆಕೊನೆಗೊಂಡು ಶಾಂತಿ ನೆಲೆಸಲಿ

Published:
Updated:

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪಕ್ಷಗಳ ನಡುವಣ ಘರ್ಷಣೆ, ಕಾರ್ಯಕರ್ತರ ಕೊಲೆಗಳು ಹೊಸತೇನಲ್ಲ. ಹಿಂದೆ ಎಡರಂಗ ಮತ್ತು ಕಾಂಗ್ರೆಸ್‌ ಪಕ್ಷಗಳ ಮಧ್ಯೆ ಇಂತಹ ಹಿಂಸಾಚಾರದ ಘಟನೆಗಳು ನಡೆಯುತ್ತಿದ್ದವು. ಈಗ ಬದಲಾದ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ಪಕ್ಷಗಳ ಕಾರ್ಯಕರ್ತರ ಮಧ್ಯೆ ಹಿಂಸಾಚಾರ ಭುಗಿಲೆದ್ದಿದೆ. ಸಾಮಾನ್ಯವಾಗಿ ಚುನಾವಣೆ ಮುಗಿದು ಫಲಿತಾಂಶ ಬಂದ ಬಳಿಕ ಇಂತಹ ಹಿಂಸೆಗೆ ಕೊನೆ ಬೀಳುತ್ತದೆ. ಆದರೆ ಈ ಸಲ ಹಾಗಾಗಿಲ್ಲ. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದು ಎರಡು ವಾರಗಳಾದ ಬಳಿಕವೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ಮಧ್ಯೆ ನಿರಂತರ ರಾಜಕೀಯ ಘರ್ಷಣೆ ಮುಂದುವರಿದಿದೆ. ಮೇ 23ರಿಂದ ಈಚೆಗೆ ಅಲ್ಲಿ ನಡೆದಿರುವ ರಾಜಕೀಯ ಘರ್ಷಣೆಗಳಲ್ಲಿ ಒಟ್ಟು 13 ಮಂದಿ ಸಾವನ್ನಪ್ಪಿದ್ದಾರೆ. ಸತ್ತ 13 ಮಂದಿಯಲ್ಲಿ 7 ಮಂದಿ ಬಿಜೆಪಿ ಕಾರ್ಯಕರ್ತರಿದ್ದರೆ, 6 ಮಂದಿ ತೃಣಮೂಲ ಕಾಂಗ್ರೆಸ್‌ನವರು ಎಂದು ವರದಿಯಾಗಿದೆ. ‘ಈ ಹಿಂಸೆ ಮತ್ತು ಕೊಲೆಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾರಣ. ರಾಜ್ಯದಲ್ಲಿ ಕಾನೂನು– ಶಿಸ್ತು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ’ ಎಂದು ಬಿಜೆಪಿ ನಾಯಕರು ದೂರಿದ್ದಾರೆ. ‘ರಾಜ್ಯದಲ್ಲಿರುವ ತೃಣಮೂಲ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಬಿಜೆಪಿ ನಾಯಕರೇ ಸಂಚು ರೂಪಿಸಿ ಗಲಭೆ ಎಬ್ಬಿಸುತ್ತಿದ್ದಾರೆ’ ಎಂದು ಮಮತಾ ಆರೋಪಿಸಿದ್ದಾರೆ. ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೊ, ‘ಬಿಜೆಪಿ ಕಾರ್ಯಕರ್ತನೊಬ್ಬನ ಕೊಲೆಯಲ್ಲಿ ರೋಹಿಂಗ್ಯಾದ ವಲಸಿಗ ಮುಸ್ಲಿಮರ ಕೈವಾಡವಿದೆ’ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ, ನವದೆಹಲಿಗೆ ತೆರಳಿ ಪ್ರಧಾನಿ ಮತ್ತು ಗೃಹಸಚಿವರನ್ನು ಭೇಟಿಯಾಗಿ ಬಂದಿದ್ದಾರೆ. ಕೇಂದ್ರ ಗೃಹ ಇಲಾಖೆಯು ರಾಜ್ಯ ಸರ್ಕಾರಕ್ಕೆ ‘ಕಾನೂನು ಶಿಸ್ತು ಪರಿಸ್ಥಿತಿಯನ್ನು ನಿಯಂತ್ರಿಸಿ; ಶಾಂತಿ ಕಾಪಾಡುವ ಕೆಲಸವನ್ನು ಸರಿಯಾಗಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ’  ಎಂದು ಸೂಚನೆ ನೀಡಿದೆ. ಮೂರು ವಾರಗಳಿಂದ ಪಶ್ಚಿಮ ಬಂಗಾಳದ ಹಲವೆಡೆ ಭುಗಿಲೆದ್ದಿರುವ ಗಲಭೆಗಳಿಂದಾಗಿ ಜನಸಾಮಾನ್ಯರು ಉದ್ರಿಕ್ತ ವಾತಾವರಣದಲ್ಲಿ ಬದುಕುವಂತಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ತನ್ನ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ಎಡವುತ್ತಿದೆ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ.

ಪಶ್ಚಿಮ ಬಂಗಾಳದಲ್ಲಿ ನಿರಂತರ ಚುನಾವಣೆಗಳೇ ರಾಜಕೀಯ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಡುತ್ತಿರುವಂತಿವೆ. ಕಳೆದ ವರ್ಷ ಅಲ್ಲಿ ಪಂಚಾಯಿತಿ ಚುನಾವಣೆಗಳು ನಡೆದರೆ, ಈ ವರ್ಷ ಲೋಕಸಭಾ ಚುನಾವಣೆ ನಡೆಯಿತು. ಮುಂದಿನ ವರ್ಷ ನಗರಸಭೆಗಳ ಚುನಾವಣೆ ನಡೆಯಲಿದೆ. 2021ರಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಬೇಕಿವೆ. ಲೋಕಸಭಾ ಚುನಾವಣೆಯಲ್ಲಿ 18 ಸ್ಥಾನಗಳನ್ನು ಗೆದ್ದು, ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನೆಮ್ಮದಿ ಕದಡಿರುವ ಬಿಜೆಪಿ, ಮುಂದಿನ ವರ್ಷ ನಡೆಯಲಿರುವ ನಗರಸಭೆ ಚುನಾವಣೆಗಳನ್ನು ಗೆಲ್ಲಲು ಈ ರಾಜಕೀಯ ಹಿಂಸಾಚಾರ ತನಗೆ ನೆರವಾಗಲಿದೆ ಎಂದೇ ಭಾವಿಸಿದಂತಿದೆ. ಬಿಜೆಪಿಯ ಕೆಲವು ನಾಯಕರು ತಮ್ಮ ಪಕ್ಷದ ಕಾರ್ಯಕರ್ತರ ಕೊಲೆಯನ್ನು ಹಿಂದೂಗಳ ಮೇಲಿನ ದೌರ್ಜನ್ಯ ಎಂದು ಬಣ್ಣಿಸುವ ಮೂಲಕ ಕೋಮುಭಾವನೆಯನ್ನು ಪ್ರಚೋದಿಸಲು ಯತ್ನಿಸಿದ್ದಾರೆ. ಹಿಂಸಾಚಾರದಲ್ಲಿ ನಿಧನರಾದ ತೃಣಮೂಲ ಕಾಂಗ್ರೆಸ್‌ನ ಆರು ಕಾರ್ಯಕರ್ತರಲ್ಲಿ ಐವರು ಹಿಂದೂಗಳೇ ಎನ್ನುವುದನ್ನು ಬಿಜೆಪಿ ಉದ್ದೇಶಪೂರ್ವಕವಾಗಿ ಮರೆಮಾಚುತ್ತಿದೆ. ತೃಣಮೂಲ ಕಾಂಗ್ರೆಸ್‌ನಲ್ಲಿದ್ದಾಗ ಶಾಸಕ ಮೊನಿರುಲ್‌ ಇಸ್ಲಾಂ, ಬಿಜೆಪಿ ಕಾರ್ಯಕರ್ತನೊಬ್ಬನ ಕೊಲೆಯ ಆರೋಪಿ ಎಂದು ಬಿಜೆಪಿ ನಾಯಕರು ದೂರಿದ್ದರು. ಅದಾಗಿ ಕೆಲವೇ ತಿಂಗಳಲ್ಲಿ ಆ ಶಾಸಕರೇ ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಗಳು ಕೋಮುಭಾವನೆಗಿಂತ ಹೆಚ್ಚಾಗಿ, ರಾಜಕೀಯ ಪ್ರಾಯೋಜಿತ ಎನ್ನುವುದನ್ನು ಇದು ಎತ್ತಿ ತೋರಿಸುತ್ತಿದೆ. ಚುನಾವಣೆ ಗೆಲ್ಲುವ ತಂತ್ರಗಳು ಏನೇ ಇರಲಿ, ಪಶ್ಚಿಮ ಬಂಗಾಳದಲ್ಲಿ ಈಗ ನಡೆಯುತ್ತಿರುವ ರಾಜಕೀಯ ಕೊಲೆಗಳು ಯಾವ ಪಕ್ಷಕ್ಕೂ ಶೋಭೆ ತರುವಂತಹವಲ್ಲ. ಪಕ್ಷಗಳ ಕಾರ್ಯಕರ್ತರ ಈ ಕೊಲೆಗಳಲ್ಲಿ ಸಮಾಜಘಾತುಕ ಶಕ್ತಿಗಳ ಕೈವಾಡವೂ ಇರುವುದು ಪ್ರಜಾಪ್ರಭುತ್ವಕ್ಕೆ ಕಳಂಕ ತರುವ ಸಂಗತಿಯಾಗಿದೆ. ಮುಖ್ಯಮಂತ್ರಿ ಮಮತಾ ಅವರು ಪಕ್ಷ ಹಿತಾಸಕ್ತಿಯ ವರ್ತುಲದಿಂದ ಹೊರಬಂದು ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ನಿಷ್ಪಕ್ಷಪಾತ ಹಾಗೂ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಹಿಂಸಾಚಾರ ನಡೆಸುವ ಯಾರನ್ನೇ ಆದರೂ ನಿರ್ದಾಕ್ಷಿಣ್ಯವಾಗಿ ಬಂಧಿಸಿ ಅವರ ವಿರುದ್ಧ ಮೊಕದ್ದಮೆ ಹೂಡುವಂತಹ ಮುಕ್ತ ವಾತಾವರಣ ಕಲ್ಪಿಸಬೇಕು. ಪ್ರಜೆಗಳ ಶಾಂತಿಯುತ ಬದುಕಿನ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ ಯಾವ ಪಕ್ಷಕ್ಕೂ ಇಲ್ಲ. ರಾಜಕೀಯ ಹಿಂಸೆ ಮತ್ತು ಕಾರ್ಯಕರ್ತರ ಕೊಲೆ ಹೀಗೆಯೇ ಮುಂದುವರಿದರೆ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರಾಷ್ಟ್ರಪತಿ ಆಳ್ವಿಕೆಯನ್ನೂ ಹೇರಬಹುದು. ಅಂತಹ ಸಂದರ್ಭ ಬಂದರೆ ಅದನ್ನು ಪ್ರತಿಭಟಿಸುವ ನೈತಿಕ ಹಕ್ಕನ್ನೂ ಮಮತಾ ಬ್ಯಾನರ್ಜಿ ಕಳೆದುಕೊಳ್ಳಲಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !