ಮಂಗಳವಾರ, ಸೆಪ್ಟೆಂಬರ್ 21, 2021
26 °C
ವಿದ್ಯಾರ್ಥಿಗಳಿಗೆ ಕೋಚಿಂಗ್ ಅಗತ್ಯವೇ ಬೀಳದಿರುವ ಹಾಗೆ ಪಠ್ಯಕ್ರಮ, ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಲು ಆಗದೇ?

ಕೋಚಿಂಗ್ ಕೇಂದ್ರಗಳಿಗೆ ಲಗಾಮು....

ಡಾ.ಎಚ್.ಬಿ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳಿಗೆ ಕೋಚಿಂಗ್ ಅಗತ್ಯವೇ ಬೀಳದಿರುವ ಹಾಗೆ ಪಠ್ಯಕ್ರಮ, ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತರಲು ಆಗದೇ?

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುವಿನಲ್ಲಿ ಪ್ರಸ್ತುತ 10 ಮತ್ತು 12ನೇ ತರಗತಿಗಳಲ್ಲಿ ಕೋಚಿಂಗ್ ಸಂಸ್ಕೃತಿಯಿಂದ ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆ ಹಾಗೂ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಈ ನಿಟ್ಟಿನಲ್ಲಿ ಮೂಲ ಪರಿಕಲ್ಪನೆಗಳು, ಕೌಶಲಗಳನ್ನು ಮಾತ್ರ ಪರೀಕ್ಷಿಸಲು ಸಾಧ್ಯವಾಗುವಂತೆ ಬೋರ್ಡ್ ಪರೀಕ್ಷೆಗಳನ್ನು ಪುನರ್‌ರಚನೆ ಮಾಡುವ ಪ್ರಸ್ತಾವ ಇದೆ. ಆದರೆ, ಕೋಚಿಂಗ್ ಪದ್ಧತಿಯನ್ನು ವ್ಯವಸ್ಥಿತವಾಗಿ ನಿಯಂತ್ರಿಸುವ ಕುರಿತಂತೆ ಬಲವಾದ ಪ್ರತಿಪಾದನೆ ಇಲ್ಲ. ಅದರ ಅಗತ್ಯ ಹಿಂದಿಗಿಂತ ಈಗ ಹೆಚ್ಚಿಗಿದೆ.

ಶಿಕ್ಷಣ ಕ್ಷೇತ್ರದಲ್ಲಿ ಕೋಚಿಂಗ್ ಪದ್ಧತಿಯಿಂದ ಎದುರಾಗಿರುವ ಅಪಾಯಗಳ ಬಗ್ಗೆ ಏಷಿಯನ್ ಅಭಿವೃದ್ಧಿ ಬ್ಯಾಂಕ್‍ನ 2012ರ ವರದಿಯಲ್ಲಿ ಪರಿಣಾಮಕಾರಿಯಾಗಿ ವಿವರಿಸಲಾಗಿದೆ. ಕೋಚಿಂಗ್ ಪದ್ಧತಿಯು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಜಾಗತಿಕ ಸ್ವರೂಪ ಪಡೆದಿದೆ. ಅದರಲ್ಲೂ ಏಷಿಯಾ ಖಂಡದಲ್ಲಿ ಕೋಚಿಂಗ್ ಪದ್ಧತಿಯ ಕಬಂಧಬಾಹುಗಳು ಸಾರ್ವಜನಿಕ ಶಿಕ್ಷಣ ಕ್ಷೇತ್ರದ ಬೇರುಗಳನ್ನು ಸಡಿಲಗೊಳಿಸುತ್ತಿರುವ ಕುರಿತಂತೆ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಭಾರತವೂ ಸೇರಿದಂತೆ ಕೊರಿಯಾ, ಜಪಾನ್, ಹಾಂಕಾಂಗ್, ಚೀನಾದಲ್ಲಿ ಕೋಚಿಂಗ್ ಪದ್ಧತಿಯು ವ್ಯಾಪಕವಾಗಿದೆ. ಕೊರಿಯಾದಲ್ಲಿ ಪ್ರಾಥಮಿಕ ಹಂತದ ಶೇ 90ರಷ್ಟು ವಿದ್ಯಾರ್ಥಿಗಳು; ಚೀನಾ, ಹಾಂಕಾಂಗ್‍ನಲ್ಲಿ ಪಿ.ಯು. ಹಂತದ ಶೇ 85ರಷ್ಟು ಹಾಗೂ ಭಾರತದ ಪಶ್ಚಿಮ ಬಂಗಾಳ ರಾಜ್ಯದ ಪ್ರಾಥಮಿಕ ಹಂತದ ಶೇ 60ರಷ್ಟು ಮಕ್ಕಳು ಕೋಚಿಂಗ್ ಮೊರೆ ಹೋಗುತ್ತಾರೆ. ಕೊರಿಯಾದಲ್ಲಿ ಕೋಚಿಂಗ್ ಹಾವಳಿ ಮಿತಿ ಮೀರಿದ್ದು, ಅದರ ನಿಯಂತ್ರಣಕ್ಕೆ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಕೋಚಿಂಗ್ ವ್ಯವಸ್ಥೆಯು ಸಾರ್ವಜನಿಕ ಶಿಕ್ಷಣಕ್ಕೆ ಸವಾಲಾಗುವ ರೀತಿಯಲ್ಲಿ ಇದೆ. ಪರ್ಯಾಯ ರೂಪ ಪಡೆದಿದೆ. ಛಾಯಾಶಿಕ್ಷಣವಾಗಿ ಬೆಳೆಯುತ್ತಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ರಾಜಸ್ಥಾನದ ಕೋಟ ನಗರವೊಂದರಲ್ಲೇ ಕೋಚಿಂಗ್ ಕೇಂದ್ರಗಳು ವಾರ್ಷಿಕ ₹ 1500 ಕೋಟಿಯಷ್ಟು ವಹಿವಾಟು ನಡೆಸುತ್ತವೆ ಎಂದು ಅಂದಾಜಿಸಲಾಗಿದೆ. ಕೋಚಿಂಗ್ ವ್ಯವಸ್ಥೆಯು ₹ 75 ಸಾವಿರ ಕೋಟಿಗೂ ಅಧಿಕ ವಹಿವಾಟನ್ನು ಹೊಂದಿ ಬೆಳೆಯುವ ಉದ್ಯಮವಾಗಿ ಹಾಗೂ ವಾರ್ಷಿಕ ಶೇ 15ರಷ್ಟು ಬೆಳವಣಿಗೆಯನ್ನು ದಾಖಲಿಸುತ್ತಿದೆ ಎಂದು ಕ್ರಿಸಿಲ್ ಸಂಶೋಧನಾ ವರದಿ ಹೇಳುತ್ತದೆ.

ಕೋಚಿಂಗ್ ಕೇಂದ್ರಗಳಿಗೆ ಹೋಗದಿದ್ದರೆ ಹೆಚ್ಚು ಅಂಕ ಗಳಿಸುವುದು ಸಾಧ್ಯವಿಲ್ಲ ಎಂಬ ಭ್ರಮೆ ಸೃಷ್ಟಿಸಲಾಗಿದೆ. ಟ್ಯೂಷನ್, ಕೋಚಿಂಗ್‌ಗೆ ಹೋಗದಿದ್ದರೆ ಹೇಗೋ ಏನೋ ಎಂಬ ಅಳುಕು. ಪೋಷಕರು ಮತ್ತು ಮಕ್ಕಳಲ್ಲಿ ಆ ಮಟ್ಬಿಗೆ ದಿಗಿಲು ಬಿತ್ತುವಲ್ಲಿ ಕೋಚಿಂಗ್ ಕೇಂದ್ರಗಳು ಯಶಸ್ವಿಯಾಗಿವೆ. ಅತಿಹೆಚ್ಚು ಅಂಕ ಅಥವಾ ರ್‍ಯಾಂಕ್‌ ಗಳಿಸಿದ ವಿದ್ಯಾರ್ಥಿಗಳ ಫೋಟೊಗಳನ್ನು ಎಲ್ಲೆಡೆ ಪ್ರದರ್ಶಿಸಿ, ವಿದ್ಯಾರ್ಥಿಗಳನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಕೋಚಿಂಗ್ ಕೇಂದ್ರಗಳು ಪೈಪೋಟಿ ನಡೆಸುತ್ತಿವೆ. ಇದರ ಮಧ್ಯೆ ಮುಖ್ಯವಾಹಿನಿಯಲ್ಲಿ ಶಿಕ್ಷಣ ನೀಡುತ್ತಿರುವ ಶಾಲಾ ಕಾಲೇಜುಗಳು ನೆಪಮಾತ್ರಕ್ಕೆ ಎಂಬಂತಾಗಿ ಸೊರಗುತ್ತಿವೆ.

ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣದ ಖಾತರಿಯ ಭರವಸೆ ಕಾಣದ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚಿನ ಹಣ ತೆತ್ತು ಕೋಚಿಂಗ್ ಕೇಂದ್ರಗಳಿಗೆ ನೂಕುತ್ತಾ ತಮ್ಮ ಜೇಬುಗಳನ್ನು ಖಾಲಿ ಮಾಡಿಕೊಳ್ಳುತ್ತಿದ್ದಾರೆ. ಆರ್ಥಿಕ ಸಾಮರ್ಥ್ಯ ಇಲ್ಲದವರೂ ಸಾಲಸೋಲ ಮಾಡಿ ತಮ್ಮ ಮಕ್ಕಳನ್ನು ಕೋಚಿಂಗ್ ಕೇಂದ್ರಗಳಿಗೆ ಕಳುಹಿಸುತ್ತಿದ್ದಾರೆ. 10ನೇ ತರಗತಿ ಅಥವಾ ಪಿಯು ಹಂತಕ್ಕೆ ವಿದ್ಯಾರ್ಥಿಗಳು ತಲುಪುತ್ತಿದ್ದ ಹಾಗೆಯೇ ಶಾಲಾಕಾಲೇಜು, ಕೋಚಿಂಗ್ ಕೇಂದ್ರಗಳಿಗೆ ಎಡತಾಕುತ್ತಾ ಹೈರಾಣಾಗುತ್ತಿದ್ದಾರೆ.

ಕೋಚಿಂಗ್ ಕೇಂದ್ರಗಳಲ್ಲಿ ಪಾಠ ಮಾಡುವ ಶಿಕ್ಷಕರ ವಿದ್ಯಾರ್ಹತೆ, ಸಾಮರ್ಥ್ಯಗಳ ಬಗ್ಗೆ ಪೂರ್ಣ ಮಾಹಿತಿ ಪೋಷಕರಿಗೆ ಇರುವುದಿಲ್ಲ. ಅಂತಹ ಕೇಂದ್ರಗಳಲ್ಲಿ ಸರಿಯಾದ ಭೌತಿಕ ಸೌಲಭ್ಯಗಳೂ ಇರುವುದಿಲ್ಲ. ಇತ್ತೀಚೆಗೆ ಸೂರತ್ ನಗರದಲ್ಲಿ ಕೋಚಿಂಗ್ ತರಗತಿಯಲ್ಲಿ ಅಗ್ನಿ ಅವಘಡದಿಂದ ವಿದ್ಯಾರ್ಥಿಗಳು ಸಾವಿಗೀಡಾದ ದುರಂತ  ನಮ್ಮ ನೆನಪಿನಿಂದ ಇನ್ನೂ ಮಾಸಿಲ್ಲ. ಇದೊಂದು ಉದಾಹರಣೆ ಮಾತ್ರ. ನಮ್ಮಲ್ಲಿಯೂ ಕೋಚಿಂಗ್ ಕೇಂದ್ರಗಳಲ್ಲಿ ಗಾಳಿ–ಬೆಳಕು ಪಸರಿಸಲು ಅವಕಾಶ ಇದೆಯೋ ಇಲ್ಲವೋ, ಸುರಕ್ಷಾ ಕ್ರಮಗಳನ್ನು ಎಷ್ಟರಮಟ್ಟಿಗೆ ಕೈಗೊಳ್ಳಲಾಗಿದೆ ಎಂಬುದನ್ನು ಬಲ್ಲವರಾರು?

ಕೋಚಿಂಗ್ ವ್ಯವಸ್ಥೆಯು ಮುಖ್ಯವಾಹಿನಿ ಶಿಕ್ಷಣ ವ್ಯವಸ್ಥೆಯನ್ನು ಅಪೋಶನ ತೆಗೆದುಕೊಳ್ಳುವುದಕ್ಕೆ ಮುಂಚೆ ಸರ್ಕಾರಗಳು ಎಚ್ಚರ ವಹಿಸುವುದು ಅಗತ್ಯ. ಮನೆಪಾಠ, ಕೋಚಿಂಗ್ ಅನ್ನು ಸಂಪೂರ್ಣ ನಿಲ್ಲಿಸುವುದು ಸಾಧ್ಯವಾಗದಿದ್ದರೂ ಸಮರ್ಪಕ ರೀತಿಯಲ್ಲಿ ನಿಯಂತ್ರಣ ಸಾಧಿಸಬಹುದಾಗಿದೆ. ಕೋಚಿಂಗ್ ಅಗತ್ಯವೇ ಬೀಳದೆ ಇರುವ ರೀತಿ ಪಠ್ಯಕ್ರಮ, ಬೋಧನಾ ಪದ್ಧತಿ, ಪರೀಕ್ಷಾ ಪದ್ಧತಿಗಳಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು. ನಮ್ಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟವನ್ನು ಖಾತರಿಪಡಿಸುವ ಮೂಲಕ ಅದರ ಬೇರುಗಳು ಸಡಿಲವಾಗದಂತೆ ಎಚ್ಚರ ವಹಿಸಬೇಕು.

ಕೋಚಿಂಗ್ ಕೇಂದ್ರಗಳ ನೋಂದಣಿಯನ್ನು ಕಡ್ಡಾಯಗೊಳಿಸುವುದು, ಗುಣಮಟ್ಟದ ಶಿಕ್ಷಕರು ಹಾಗೂ ಭೌತಿಕ ಸಂಪನ್ಮೂಲಗಳ ಲಭ್ಯತೆಯನ್ನು ಖಾತರಿಪಡಿಸುವುದು, ಮಿತಿ ಮೀರಿದ ಶುಲ್ಕಕ್ಕೆ ಕಡಿವಾಣ ಹಾಕಲು ಬೇಕಾದ  ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೋಚಿಂಗ್‌ ತರಗತಿಗಳಿಗೆ ಹೋಗದೆಯೂ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಬಹುದು ಎಂದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ವಿಶ್ವಾಸ ಮೂಡಿಸುವಂತಹ ಕೆಲಸ ಶಾಲಾ–ಕಾಲೇಜು ಆಡಳಿತ ಮಂಡಳಿಗಳಿಂದ ಆಗಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು