‘ಐಎಂಎ ಜ್ಯುವೆಲ್ಸ್‌’ ವಿರುದ್ಧ ಇ.ಡಿ ತನಿಖೆ

ಮಂಗಳವಾರ, ಜೂನ್ 25, 2019
22 °C
ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮಹಮದ್‌ ಮನ್ಸೂರ್‌ ಖಾನ್‌ಗೆ ಎದುರಾಯಿತು ಇನ್ನಷ್ಟು ಸಂಕಷ್ಟ

‘ಐಎಂಎ ಜ್ಯುವೆಲ್ಸ್‌’ ವಿರುದ್ಧ ಇ.ಡಿ ತನಿಖೆ

Published:
Updated:

ಬೆಂಗಳೂರು: ಸಾವಿರಾರು ಜನರಿಂದ ಕೋಟ್ಯಂತರ ರೂಪಾಯಿ ಷೇರು ಸಂಗ್ರಹಿಸಿ ವಂಚಿಸಿರುವ ‘ಐ ಮಾನಿಟರಿ ಅಡ್ವೈಸರಿ‘ (ಐಎಂಎ) ಕಂಪನಿ ವಿರುದ್ಧ ‘ಜಾರಿ ನಿರ್ದೇಶನಾಲಯ’ (ಇ.ಡಿ) ಪ್ರಕರಣ ದಾಖಲಿಸಿದೆ. ಇದರಿಂದಾಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮಹಮದ್‌ ಮನ್ಸೂರ್‌ ಖಾನ್‌ಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ.

ಜಾರಿ ನಿರ್ದೇಶನಾಲಯದ ಬೆಂಗಳೂರು ಅಧಿಕಾರಿಗಳು ‘ಲೇವಾದೇವಿ ನಿಯಂತ್ರಣ ಕಾಯ್ದೆ’ಯಡಿ ‘ಇಸಿಇಆರ್‌’ ದಾಖಲಿಸಿದ್ದು, ಇದು ಪೊಲೀಸ್ ‘ಎಫ್‌ಐಆರ್‌’ಗೆ ಸಮಾನ ವಾಗಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಇ.ಡಿ ತನಿಖೆ ಕೈಗೆತ್ತಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. 

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ಅಗತ್ಯವಾದರೆ ಎಸ್‌ಐಟಿ ಅಧಿಕಾರಿಗಳಿಂದ ಮಾಹಿತಿ ಪಡೆಯುವುದಾಗಿ ಇ.ಡಿ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಪಿ ಕಂಪನಿ ಹೊರ ದೇಶಗಳಲ್ಲಿ ಏನಾದರೂ ಹೂಡಿಕೆ ಮಾಡಿದೆಯೇ? ಯಾವ್ಯಾವ ದೇಶಗಳಲ್ಲಿ ಹೂಡಿಕೆ ಮಾಡಿದೆ? ಯಾವ ಕ್ಷೇತ್ರಗಳಲ್ಲಿ ಹೂಡಿದೆ. ಹೂಡಿಕೆಗೆ ಸಂಬಂಧಿಸಿದಂತೆ ನಿಯಮಗಳನ್ನು ಪಾಲಿಸಲಾಗಿದೆಯೇ ಎಂದು ಪರಿಶೀಲಿಸಲಿದೆ. ಕಂಪನಿಯ ಆಸ್ತಿಪಾಸ್ತಿಗಳನ್ನು ಪತ್ತೆ ಹಚ್ಚಿ ಜಪ್ತಿ ಮಾಡುವ ಸಂಭವವಿದೆ. ತಕ್ಷಣವೇ ತನಿಖೆ ಆರಂಭಿಸಲಿರುವ ಇ.ಡಿ, ಪರಾರಿಯಾಗಿರುವ ಮನ್ಸೂರ್‌
ಖಾನ್‌ ಪತ್ತೆಗೂ ಕ್ರಮ ಕೈಗೊಳ್ಳಲಿದೆ. ಇದಕ್ಕೆ ಪೂರಕವಾಗಿ ಹಲವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ’ ಎಂದೂ ಅಧಿಕಾರಿ ಹೇಳಿದರು.

ಜಯನಗರದಲ್ಲಿ ಪ್ರಧಾನ ಕಚೇರಿ, ಶಿವಾಜಿ ನಗರದ ಲೇಡಿ ಕರ್ಜನ್‌ ರಸ್ತೆಯಲ್ಲಿ ಶಾಖಾ ಕಚೇರಿ ಹೊಂದಿರುವ ಐಎಂಎ ಜ್ಯುವೆಲ್ಸ್‌ ಜೂನ್‌ 5ರಿಂದ ಬಾಗಿಲು ಮುಚ್ಚಿದೆ. ಮನ್ಸೂರ್‌ ಖಾನ್‌ ಅವರದ್ದು ಎಂದು ಹೇಳಲಾದ ಮುದ್ರಿತ ಸುರುಳಿ ವಾಟ್ಸ್ ಆ್ಯಪ್‌ನಲ್ಲಿ ಹರಿದಾಡಿದ ಬಳಿಕ ವಂಚನೆ ಪ್ರಕರಣ ಬಯಲಿಗೆ ಬಂದಿದೆ. 

ಆತಂಕಕ್ಕೊಳಗಾಗಿರುವ ಜನ ದೂರು ದಾಖಲಿಸುತ್ತಿದ್ದು, ಈವರೆಗೆ 32,000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಕಂಪನಿಯ ಎಂಟು ನಿರ್ದೇಶಕರನ್ನು ಪೊಲೀಸರು  ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಶಾಸಕ ರೋಷನ್‌ ಬೇಗ್‌ ಸೇರಿದಂತೆ ಕೆಲವು ಪ್ರಭಾವಿಗಳ ಹೆಸರು ಕೇಳಿಬಂದಿದೆ. ಆದರೆ, ಬೇಗ್‌ ಆರೋಪ ನಿರಾಕರಿಸಿದ್ದಾರೆ.

ಆಡಿಟರ್‌ ವಶಕ್ಕೆ

ಐಎಂಎ ಕಂಪನಿ ಆಡಿಟರ್‌, ಫ್ರೇಜರ್‌ ಟೌನ್‌ ನಿವಾಸಿ ಇಕ್ಬಾಲ್‌ ಖಾನ್‌ ಅವರನ್ನು ಎಸ್‌ಐಟಿ ವಶಕ್ಕೆ ಪಡೆದಿದೆ. ಇಕ್ಬಾಲ್‌ ಖಾನ್‌ ಹಲವು ವರ್ಷಗಳಿಂದ ಕಂಪನಿಯ ಲೆಕ್ಕ ತಪಾಸಣೆ ಮಾಡುತ್ತಿರುವು ದರಿಂದ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಿಬಿಐ ತನಿಖೆಗೆ ಮನವಿ

‘ಐಎಂಎ ಕಂಪನಿ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ನಿರ್ದೇಶಿಸಬೇಕು’ ಎಂದು ಕೋರಿ ಹೂಡಿಕೆದಾರರೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇದೇ 17ರಂದು ನಡೆಸಲಿದೆ.

ಚಿತ್ರದುರ್ಗ ನಿವಾಸಿ ಮೊಹಮ್ಮದ್ ಸಿರಾಜುದ್ದೀನ್ ಈ ಅರ್ಜಿ ಸಲ್ಲಿಸಿದ್ದು, ‘ಇದನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು‘ ಎಂದು ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್‌, ನ್ಯಾಯಮೂರ್ತಿ ಆಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಶುಕ್ರವಾರ ಮನವಿ ಮಾಡಿದರು.

‘ಮೊಹಮದ್‌ ಮನ್ಸೂರ್ ಖಾನ್ ಅವರನ್ನು ರಾಜ್ಯದ ಕೆಲ ಸಚಿವರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ, ಪೊಲೀಸರಿಂದ ಪ್ರಕರಣದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲದ್ದರಿಂದ ಸಿಬಿಐಗೆ ವಹಿಸಲು ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !