17ರಂದು ದೇಶವ್ಯಾಪಿ ವೈದ್ಯರ ಮುಷ್ಕರ

ಗುರುವಾರ , ಜೂನ್ 27, 2019
23 °C
ಮಮತಾ ಬ್ಯಾನರ್ಜಿ ಬೇಷರತ್‌ ಕ್ಷಮೆಗೆ ಆಗ್ರಹ, ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ: ಮಾತುಕತೆಗೆ ಆಹ್ವಾನ

17ರಂದು ದೇಶವ್ಯಾಪಿ ವೈದ್ಯರ ಮುಷ್ಕರ

Published:
Updated:
Prajavani

ನವದೆಹಲಿ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರ ಮುಷ್ಕರ 4ನೇ ದಿನದಲ್ಲಿ ಮುಂದುವರಿದಿದ್ದು, ಆರೋಗ್ಯ ಸೇವೆ ಅಸ್ತವ್ಯಸ್ತಗೊಂಡಿದೆ. ವೈದ್ಯರನ್ನು ಬೆಂಬಲಿಸಿ ಭಾರತೀಯ ವೈದ್ಯಕೀಯ ಸಂಸ್ಥೆಯು (ಐಎಂಎ) ಜೂನ್ 17ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. 

ಪ್ರತಿಭಟನಾನಿರತರಿಗೆ ಎಚ್ಚರಿಕೆ ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಧೋರಣೆಯನ್ನು ಖಂಡಿಸಿ 450ಕ್ಕೂ ಹೆಚ್ಚು ವೈದ್ಯರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಬೇಷರತ್‌ ಕ್ಷಮೆ ಕೇಳಬೇಕು’ ಎಂದು ವೈದ್ಯರು ಆಗ್ರಹಿಸಿದ್ದಾರೆ. ಮುಷ್ಕರದ ಬಿಸಿ ಇತರ ರಾಜ್ಯಗಳಿಗೂ ವ್ಯಾಪಿಸಿದ್ದು ದೆಹಲಿ, ಮುಂಬೈ, ಹೈದರಾಬಾದ್‌ ಸೇರಿದಂತೆ ಅನೇಕ ನಗರಗಳಲ್ಲಿ ವೈದ್ಯರು ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

ಕೋಲ್ಕತ್ತದಲ್ಲಿ 70 ವರ್ಷ ವಯಸ್ಸಿನ ರೋಗಿಯೊಬ್ಬರ ಸಾವಿನಿಂದಾಗಿ ಆಕ್ರೋಶಗೊಂಡ ಸಂಬಂಧಿಕರು, ಇಬ್ಬರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ಹಾಗೂ ರಕ್ಷಣೆ ಕೋರಿ ಪಶ್ಚಿಮ ಬಂಗಾಳದಲ್ಲಿ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ.

‘ಮುಖ್ಯಮಂತ್ರಿ ಬೇಷರತ್ ಕ್ಷಮೆ ಕೇಳಬೇಕು ಎಂದು ನಾವು ಬಯಸುತ್ತೇವೆ. ನಮ್ಮ ಮುಷ್ಕರದಿಂದ ತುರ್ತು ಚಿಕಿತ್ಸಾ ಸೇವೆಗೆ ಧಕ್ಕೆಯಾಗಿಲ್ಲ. ಇತರ ರೋಗಿಗಳಿಗೆ ಸಮಸ್ಯೆ ಆಗಲು ಮುಖ್ಯಮಂತ್ರಿಯವರ ವೈಫಲ್ಯವೇ ಕಾರಣ’ ಎಂದು ವೈದ್ಯರು ಆರೋಪಿಸಿದರು.

ಇತರೆಡೆಯೂ ಪ್ರತಿಭಟನೆ: ಧರಣಿ ನಿರತ ವೈದ್ಯರಿಗೆ ಬೆಂಬಲ ಸೂಚಿಸಿ ದೆಹಲಿಯ ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ, ಹೈದರಾಬಾದ್‌ನ ನಿಜಾಮ್‌ ವೈದ್ಯ ವಿಜ್ಞಾನ ಸಂಸ್ಥೆ, ರಾಯಪುರದ ಡಾ. ಭೀಮರಾವ್‌ ಅಂಬೇಡ್ಕರ್ ಸ್ಮಾರಕ ಆಸ್ಪತ್ರೆ, ಸಿಲಿಗುರಿಯ ವೈದ್ಯಕೀಯ ಕಾಲೇಜಿನ ಸೇವಾನಿರತ ವೈದ್ಯರು ಪ್ರತಿಭಟನೆ ನಡೆಸಿದರು. ಇತರ ರಾಜ್ಯಗಳಲ್ಲೂ ವೈದ್ಯರು ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ.

17ರಂದು ಮುಷ್ಕರ: ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ಜೂನ್‌ 17ರಂದು ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಪ್ರತಿಭಟನೆ ಬೆಂಬಲಿಸಿ ಶುಕ್ರವಾರದಿಂದಲೇ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲೂ ಸೂಚನೆ ನೀಡಿದೆ.

17ರಂದು ಬೆಳಿಗ್ಗೆ 6 ಗಂಟೆಯಿಂದ ಎಲ್ಲಾ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವಾ ಸಂಸ್ಥೆಗಳಲ್ಲಿ ತುರ್ತುಸೇವೆ ಘಟಕ ಮತ್ತು ಅಪಘಾತ ಚಿಕಿತ್ಸಾ ವಿಭಾಗಗಳಷ್ಟೇ ಕಾರ್ಯನಿರ್ವಹಿಸಲಿವೆ. ಹೊರರೋಗಿಗಳ ವಿಭಾಗ ಸೇರಿ ಉಳಿದ ಎಲ್ಲಾ ಸೇವೆಗಳು ಬಂದ್‌ ಆಗಲಿವೆ ಎಂದು ಐಎಂಎ ಹೇಳಿದೆ.

‘ವೈದ್ಯರು ಮತ್ತು ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣಗಳಿಗೆ ಕಡಿವಾಣ ಹಾಕಲು ಕಾನೂನು ಜಾರಿಗೆ ತರಬೇಕು. ಇದನ್ನು ಉಲ್ಲಂಘಿಸಿದವರಿಗೆ ಕನಿಷ್ಠ 7 ವರ್ಷ ಶಿಕ್ಷೆ ವಿಧಿಸಲು ಅವಕಾಶ ಇರಬೇಕು. ಕೋಲ್ಕತ್ತದಲ್ಲಿ ಡಾ.ಪ್ರತಿಭಾ ಮುಖರ್ಜಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಐಎಂಎ ಪ್ರಧಾನ ಕಾರ್ಯದರ್ಶಿ ಆರ್‌.ವಿ.ಅಶೋಕನ್‌ ಒತ್ತಾಯಿಸಿದರು.

ಪ್ರತಿಷ್ಠೆಯಾಗಿಸಬೇಡಿ– ಸಲಹೆ: ‘ವೈದ್ಯರ ಮುಷ್ಕರ ಪ್ರಕರಣವನ್ನು ಪ್ರತಿಷ್ಠೆಯಾಗಿ ಪರಿಗಣಿಸದೆ, ಸಮಸ್ಯೆಯನ್ನು ಸೌಹಾರ್ದದಿಂದ ಅಂತ್ಯಗೊಳಿಸಲು ಒತ್ತು ನೀಡಬೇಕು’ ಎಂದು ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಮಮತಾ ಅವರಿಗೆ ಸಲಹೆ ನೀಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ‘ಸೌಹಾರ್ದವಾಗಿ ಮುಷ್ಕರ ಕೊನೆಗೊಳಿಸಬೇಕು ಹಾಗೂ ವೈದ್ಯರಿಗೆ ಕೆಲಸ ನಿರ್ವಹಿಸಲು ಭದ್ರತೆಯ ಭಾವ ನೀಡುವ ವಾತಾವರಣವನ್ನು ಕಲ್ಪಿಸಬೇಕು’ ಎಂದಿದ್ದಾರೆ. ವೈದ್ಯರು ‘ಸಾಂಕೇತಿಕ ಪ್ರತಿಭಟನೆ ನಡೆಸಿ, ರೋಗಿಗಳ ಹಿತದೃಷ್ಟಿಯಿಂದ ಕರ್ತವ್ಯಕ್ಕೆ ಮರಳಬೇಕು’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !