ಭಾನುವಾರ, ಏಪ್ರಿಲ್ 11, 2021
31 °C

ಲಿಂಗನಮಕ್ಕಿ: ನೀರಿನ ಸಂಗ್ರಹದಲ್ಲಿ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಗಲ್: ‘ಲಿಂಗನಮಕ್ಕಿ ಜಲಾಶಯದ ನೀರಿನ ಸಂಗ್ರಹದಲ್ಲಿ ಕಳೆದ ಸಾಲಿಗಿಂತ ಈ ಸಲ ಭಾರಿ ಪ್ರಮಾಣದ ಇಳಿಕೆ ಆಗಿದೆ’ ಎಂದು ಕೆಪಿಸಿ ವಿದ್ಯುತ್ ವಿಭಾಗದ ಪ್ರಭಾರ ಮುಖ್ಯ ಎಂಜಿನಿಯರ್‌ ಚೈತನ್ಯ ಪ್ರಭು ಆತಂಕ ವ್ಯಕ್ತಪಡಿಸಿದ್ದಾರೆ.

‘2018ರ ಸಾಲಿನಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಜುಲೈ ತಿಂಗಳಿನಲ್ಲಿ 1,773.75ರಷ್ಟು ಸಂಗ್ರಹವಾಗಿತ್ತು. ಆದರೆ ಪ್ರಸಕ್ತ ಸಾಲಿನ ಜುಲೈ ತಿಂಗಳಿನಲ್ಲಿ ಸಂಗ್ರಹವಾಗಿರುವ ನೀರು 1747.95ಅಡಿಗಳಷ್ಟು ಮಾತ್ರ. ಸುಮಾರು 26 ಅಡಿಗಳಷ್ಟು ನೀರು ಅಣೆಕಟ್ಟೆಯಲ್ಲಿ ಕಡಿಮೆಯಿದೆ. ಅಣೆಕಟ್ಟೆಯ ಒಟ್ಟು ಸಾಮರ್ಥ್ಯದಲ್ಲಿ ಕೇವಲ ಶೇಕಡ 10.95 ಇದೆ’ ಎಂದು ಮಾಹಿತಿ ನೀಡಿದರು.

‘ಹಿಂದಿನ ಸಾಲಿನಲ್ಲಿ ಜುಲೈ ತಿಂಗಳಿನಲ್ಲಿ ಒಳಹರಿವಿನ ಪ್ರಮಾಣ 50 ಸಾವಿರ ಕ್ಯುಸೆಕ್‌ಗಿಂತ ಅಧಿಕವಾಗಿತ್ತು. ಆದರೆ ಪ್ರಸಕ್ತ ಕೇವಲ 7 ಸಾವಿರದಿಂದ 8 ಸಾವಿರ ಕ್ಯುಸೆಕ್ ನೀರಿನ ಒಳಹರಿವು ಜಲಾಶಯದಲ್ಲಿ ಕಂಡುಬರುತ್ತಿದೆ. ಭವಿಷ್ಯದಲ್ಲಿ ವಿದ್ಯುತ್ ಉತ್ಪಾದನೆಯ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ’ ಎಂದು ಅಭಿಪ್ರಾಯಪಟ್ಟರು.

‘1,030 ಮೆಗಾ ವಾಟ್ ಸಾಮರ್ಥ್ಯದ ಶರಾವತಿ ಜಲವಿದ್ಯುದಾಗಾರದಲ್ಲಿ ಹಾಲಿ 130 ಮೆ.ವಾಟ್ ವಿದ್ಯುತ್ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ. ಲಿಂಗನಮಕ್ಕಿ ಜಲ ವಿದ್ಯುದಾಗರದಲ್ಲಿರುವ ಎರಡು ಘಟಕಗಳಲ್ಲಿ ಒಂದು ಮಾತ್ರ 8 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದೆ. ಮಹಾತ್ಮ ಗಾಂಧಿ ಜಲವಿದ್ಯುದಾಗಾರದಲ್ಲಿರುವ 8 ಘಟಕಗಳ ಪೈಕಿ 2ರಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಉಳಿದ 6 ಘಟಕಗಳನ್ನು ನಿರ್ವಹಣಾ ಕಾರ್ಯಕ್ಕಾಗಿ ಸ್ಥಗಿತಗೊಳಿಸಲಾಗಿದೆ’ ಎಂದು ತಿಳಿಸಿದರು.

‘ಶರಾವತಿ, ಮಹಾತ್ಮ ಗಾಂಧಿ, ಅಂಬತೀರ್ಥ ಜಲವಿದ್ಯುದಾಗಾರಗಳಿಂದ ಹೊರಬರುವ ನೀರು ಮತ್ತು ಶರಾವತಿ ಟೈಲ್ ರೇಸ್ ಯೋಜನಾ ಪ್ರದೇಶದಲ್ಲಿ ದೊರೆಯುವ ಮಳೆನೀರನ್ನು ಗೇರುಸೊಪ್ಪ ಅಣೆಕಟ್ಟೆಯಲ್ಲಿ ಸಂಗ್ರಹ ಮಾಡಿ ಕೇಂದ್ರ ಗ್ರಿಡ್ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿಯಬಹುದು ಎಂಬ ನಿರೀಕ್ಷೆಯ ಆಶಾಭಾವನೆ ಇದೆ’ ಎಂದು ಚೈತನ್ಯ ಪ್ರಭು ಹೇಳಿದರು.

ಆಲಮಟ್ಟಿಗೆ ಒಳಹರಿವು: ದಕ್ಷಿಣ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ನೀರಿನ ಹರಿವು ಹೆಚ್ಚಿದೆ. ಕೃಷಿ ಚಟುವಟಿಕೆಗಳು ಗರಿಗೆದರತೊಡಗಿವೆ. ಕೃಷ್ಣಾ ನದಿಯೂ ಮೈದುಂಬಿಕೊಳ್ಳುತ್ತಿದ್ದು, ಆಲಮಟ್ಟಿ ಜಲಾಶಯಕ್ಕೆ ಈ ವರ್ಷದ ಮೊದಲ ಒಳಹರಿವು ಬುಧವಾರದಿಂದ ಆರಂಭವಾಗಿದೆ. ಪ್ರತಿವರ್ಷ ಆಲಮಟ್ಟಿ ಜಲಾಶಯಕ್ಕೆ ಜೂನ್‌ನಲ್ಲಿಯೇ ಒಳಹರಿವು ಆರಂಭವಾಗುತ್ತಿತ್ತು. 16,875 ಕ್ಯುಸೆಕ್ ನೀರು ಹರಿದು ಬರುತ್ತಿದೆ. 123.081 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಮಂಗಳವಾರ 21.080 ಟಿಎಂಸಿ ಅಡಿ ನೀರಿತ್ತು. ಬುಧವಾರ 22.538 ಟಿಎಂಸಿ ಅಡಿಗೆ ಏರಿಕೆಯಾಗಿದೆ.

ಸಂಚಾರಕ್ಕೆ ಮುಕ್ತ: ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆ ಕ್ಷೀಣಿಸಿದ್ದು, ಅಲ್ಲಿಂದ ಹರಿದುಬರುತ್ತಿದ್ದ ನೀರಿನ ಪ್ರಮಾಣ ಕಡಿಮೆಯಾ
ಗಿದೆ. ಮುಳುಗಡೆಯಾಗಿದ್ದ, ಚಿಕ್ಕೋಡಿ ತಾಲ್ಲೂಕಿನ ಮಲಿಕವಾಡ– ದತ್ತವಾಡ ಹಾಗೂ ನಿಪ್ಪಾಣಿ ತಾಲ್ಲೂಕಿನ ಕಾರದಗಾ– ಭೋಜ ಗ್ರಾಮಗಳ ನಡುವಿನ ಸೇತುವೆಗಳ ಮೇಲಿನ ನೀರು ಇಳಿದಿದ್ದು, ವಾಹನ ಸಂಚಾರ ಆರಂಭವಾಗಿದೆ. ಹುಬ್ಬಳ್ಳಿ, ಹೊಸಪೇಟೆ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ಶಿರಸಿಯಲ್ಲಿ ಮಳೆಗೆ ಮೂರು ಜಾನುವಾರು ಸತ್ತಿವೆ.

ವೈಭವ ಪಡೆದುಕೊಳ್ಳದ ಜೋಗ ಜಲಪಾತ

ಬೇಸಿಗೆಯಲ್ಲಿ ಬತ್ತಿದ್ದ ವಿಶ್ವ ವಿಖ್ಯಾತ ಜೋಗ ಜಲಪಾತವು ಜಲಾನಯನದ ಸುತ್ತಲಿನ ಪ್ರದೇಶಗಳಲ್ಲಿ ನಾಲ್ಕೈದು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದು, ಜಲಪಾತ ಇನ್ನೂ ತನ್ನ ವೈಭವ ಪಡೆದುಕೊಂಡಿಲ್ಲ.

ಸಾಗರ ತಾಲ್ಲೂಕಿನ ಕಾರ್ಗಲ್‌ ಸುತ್ತ ಮಳೆಯಾಗುತ್ತಿರುವುದರಿಂದ ಜಲಪಾತಕ್ಕೆ ನೀರು ಹರಿದುಬರುತ್ತಿದೆ. ಜಲಪಾತದ ಕವಲುಗಳಾದ ‘ರಾಜಾ’, ‘ರೋರರ್‌’, ‘ರಾಕೆಟ್‌’ ಹಾಗೂ ‘ಲೇಡಿ’ಯಲ್ಲಿ ನೀರು ಬೀಳಲು ಶುರುವಾಗಿದೆ. ಜಲಾಯನ ಪ್ರದೇಶಗಳಲ್ಲಿ ಮಳೆ ಚುರುಕು ಪಡೆದರೆ ಜೋಗ ಜಲಪಾತವು ಪ್ರವಾಸಿಗರನ್ನು ಸೆಳೆಯಲಿದೆ.

ಶಿವಮೊಗ್ಗ ನಗರ, ಶಿಕಾರಿಪುರ, ಸಾಗರ, ಸೊರಬ, ಭದ್ರಾವತಿ, ತೀರ್ಥಹಳ್ಳಿ, ಕೋಣಂದೂರು, ಹೊಸನಗರ ಹೋಬಳಿ ನಗರದಲ್ಲಿ ಸಾಧಾರಣ ಮಳೆಯಾಗಿದೆ. ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ ಬುಧವಾರ 56.8 ಮಿ.ಮೀ ಮಳೆಯಾಗಿದೆ. ತೀರ್ಥಹಳ್ಳಿಯಲ್ಲಿ 88.6 ಮಿ.ಮೀ ಮಳೆ ಬಿದ್ದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು