ಶುಕ್ರವಾರ, ಏಪ್ರಿಲ್ 16, 2021
28 °C

ಕರ್ನಾಟಕದ ಹಾಕಿಯಲ್ಲಿ ಉದಯಿಸಿದ ‘ಸೂರ್ಯ’

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ಹಾಕಿಯ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಅಲ್ಲಿ  ಕರ್ನಾಟಕದ ಆಟಗಾರರ ಹೆಸರುಗಳು ಸಾಧನೆಯ ದೃಷ್ಟಿಯಿಂದ ಎದ್ದು ಕಾಣುತ್ತವೆ. ಮುನಿಸ್ವಾಮಿ ರಾಜಗೋಪಾಲ್‌, ಎಂ.ಪಿ.ಗಣೇಶ್‌, ಬಿ.ಪಿ.ಗೋವಿಂದ, ಆಶಿಶ್‌ ಬಲ್ಲಾಳ್‌, ಎ.ಬಿ.ಸುಬ್ಬಯ್ಯ, ಅರ್ಜುನ್‌ ಹಾಲಪ್ಪ, ವಿಕ್ರಂ ಕಾಂತ್‌, ಸಂದೀಪ್‌ ಮೈಕಲ್‌ ಹೀಗೆ ಅನೇಕ ದಿಗ್ಗಜರು ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿ ದೇಶದ ಕೀರ್ತಿ ಬೆಳಗಿದ್ದಾರೆ.‌

ಎಸ್‌.ವಿ.ಸುನಿಲ್‌, ವಿ.ಆರ್‌.ರಘುನಾಥ್‌, ಎಸ್‌.ಕೆ. ಉತ್ತಪ್ಪ ಹಾಗೂ ನಿಕಿನ್‌ ತಿಮ್ಮಯ್ಯ ಕೂಡಾ ಹೆಜ್ಜೆಗುರುತು ಮೂಡಿಸಿದ್ದಾರೆ. ಇವರ ನಂತರ ರಾಜ್ಯದ ಹಾಕಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸೋಮವಾರಪೇಟೆಯ ಎನ್‌.ಎಂ.ಸೂರ್ಯ ರಾಷ್ಟ್ರೀಯ ಜೂನಿಯರ್‌ (19 ವರ್ಷದೊಳಗಿನ) ತಂಡದ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.

ಎಳವೆಯಿಂದಲೇ ಹಾಕಿ ಬಗ್ಗೆ ಒಲವು ಹೊಂದಿದ್ದ ಸೂರ್ಯ, ಬದ್ಧತೆ ಮತ್ತು ಕಠಿಣ ಪರಿಶ್ರಮದ ಮೂಲಕ ಗುರಿಯೆಡೆಗೆ ಮುನ್ನುಗ್ಗುತ್ತಿದ್ದಾರೆ. ಅವರು ‘ಪ್ರಜಾವಾಣಿ’ ಜೊತೆ ತಮ್ಮ ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

* ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗಿದ್ದೀರಿ. ಮುಂದಿನ ಗುರಿ ಏನು?

ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗಿರುವುದು ಖುಷಿ ನೀಡಿದೆ. ಇದು ನನ್ನ ಕನಸಾಗಿತ್ತು. ಶಿಬಿರದಲ್ಲಿ ಉತ್ತಮ ಸಾಮರ್ಥ್ಯ ತೋರಿ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಸದ್ಯದ ಗುರಿ. ಏಷ್ಯಾ ಕಪ್‌, ವಿಶ್ವಕಪ್‌ ಮತ್ತು ಚಾಂಪಿಯನ್ಸ್‌ ಟ್ರೋಫಿಗಳಲ್ಲಿ ಆಡಬೇಕು. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ತಂಡದ ಭಾಗವಾಗಿರಬೇಕು ಎಂಬ ಹೆಬ್ಬಯಕೆಯೂ ಇದೆ. ಇದಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ಗುರಿ ಸಾಧಿಸುವ ವಿಶ್ವಾಸ ಇದೆ.

* ರಾಷ್ಟ್ರೀಯ ಶಿಬಿರದ ಬಗ್ಗೆ ಹೇಳಿ?

ಬೆಂಗಳೂರಿನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಸಾಯ್‌) ಒಂದು ತಿಂಗಳ ಕಾಲ ಶಿಬಿರ ಆಯೋಜನೆಯಾಗಿದೆ. ಇದರಲ್ಲಿ ವಿಶೇಷ ತಂತ್ರಗಳನ್ನು ಹೇಳಿಕೊಡಲಾಗುತ್ತಿದೆ. ಫಿಟ್‌ನೆಸ್‌ ಕಾಪಾಡಿಕೊಳ್ಳುವ ಬಗ್ಗೆಯೂ ಮಾರ್ಗದರ್ಶನ ನೀಡಲಾಗುತ್ತಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ತಲಾ ಎರಡು ಗಂಟೆ ಅಭ್ಯಾಸ ನಡೆಸುತ್ತಿದ್ದೇವೆ. ವಾರದಲ್ಲಿ ಎರಡು ದಿನ ಜಿಮ್‌ನಲ್ಲಿ ಕಸರತ್ತು ಮಾಡುತ್ತೇವೆ. ಈಜು ಸೇರಿದಂತೆ ಇತರ ಚಟುವಟಿಕೆಗಳೂ ಇರುತ್ತವೆ.

* ಹಾಕಿಯಲ್ಲಿ ಉನ್ನತ ಸಾಧನೆ ಮಾಡುವ ಕನಸು ಚಿಗುರೊಡೆದದ್ದು ಹೇಗೆ?

ನನ್ನೂರು ಸೋಮವಾರಪೇಟೆ. ಊರಿನಲ್ಲಿ ಹಾಕಿ ಆಡುವವರ ಸಂಖ್ಯೆ ಗಣನೀಯವಾಗಿತ್ತು. ನಿತ್ಯವೂ ಶಾಲೆಗೆ ಹೋಗುವಾಗ ಮೈದಾನದಲ್ಲಿ ಹಿರಿಯರು ಆಡುವುದನ್ನು ನೋಡುತ್ತಿದ್ದೆ. ಆಟ ಬಲು ವಿಶೇಷ ಎನಿಸಿತು. ನಾನು ಕೂಡಾ ಅವರಂತೆ ಆಡಬೇಕು ಎಂದು ನಿರ್ಧರಿಸಿದೆ. ಹಾಕಿ ಹೆಚ್ಚು ದೈಹಿಕ ಶ್ರಮ ಬೇಡುವ ಆಟ. ಈ ಕ್ರೀಡೆಯಲ್ಲಿ ತೊಡಗಿಕೊಳ್ಳಲು ಇದು ಕೂಡಾ ಕಾರಣ.

* ಹಾಕಿ ಪಯಣ ಶುರುವಾಗಿದ್ದು ಹೇಗೆ?

ಆರನೇ ತರಗತಿಯಲ್ಲಿದ್ದಾಗ ಡಾಲ್ಫಿನ್‌ ಕ್ಲಬ್‌ಗೆ ಸೇರಿದೆ. ಅಲ್ಲಿ ಅಶೋಕ್‌ ಮತ್ತು ಅಭಿ ಅವರು ಆಟದ ಪಾಠ ಹೇಳಿಕೊಟ್ಟು ಪ್ರೋತ್ಸಾಹಿಸಿದರು. ಬಳಿಕ ಪೊನ್ನಂಪೇಟೆಯಲ್ಲಿರುವ ಕ್ರೀಡಾ ನಿಲಯಕ್ಕೆ ಆಯ್ಕೆಯಾದೆ. ಅಲ್ಲಿ ಮೂರು ವರ್ಷ ಇದ್ದೆ. ಓದಿನ ಜೊತೆಗೆ ಆಟದತ್ತಲೂ ಹೆಚ್ಚಿನ ಗಮನ ನೀಡುತ್ತಿದೆ. ಹೊಸ ತಂತ್ರಗಳನ್ನು ಕಲಿತು ಅವುಗಳನ್ನು ಮೈಗೂಡಿಸಿಕೊಂಡೆ. ವಿವಿಧ ವಯೋಮಾನದ ಟೂರ್ನಿಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿದೆ. ಇದು ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗಲು ನೆರವಾಯಿತು.

 * ಕರ್ನಾಟಕದಲ್ಲಿ ಹಾಕಿಯ ಪ್ರಾಬಲ್ಯ ಕಡಿಮೆಯಾಗು ತ್ತಿದೆ ಎಂಬ ಮಾತುಗಳಿವೆ. ಈ ಕುರಿತು ನಿಮ್ಮ ಅಭಿಪ್ರಾಯ?

ಹೌದು. ಆರಂಭದ ದಿನಗಳಲ್ಲಿ ಕರ್ನಾಟಕದ ಹಾಕಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಆಗ ಕನಿಷ್ಠ ಮೂರು ಮಂದಿಯಾದರೂ ಸೀನಿಯರ್‌ ತಂಡದಲ್ಲಿರುತ್ತಿದ್ದರು. ಆದರೆ ಈಗ ಯಾರೊಬ್ಬರೂ ತಂಡದಲ್ಲಿಲ್ಲ ಎನ್ನುವುದು ಬೇಸರದ ವಿಷಯ. ಜೂನಿಯರ್‌ ತಂಡದಲ್ಲೂ ರಾಜ್ಯದವರಿಲ್ಲ. ನಮ್ಮಲ್ಲಿ ಪ್ರತಿಭಾನ್ವಿತರಿಗೇನು ಕೊರತೆಯಿಲ್ಲ. ಆದರೆ ಬಹುತೇಕರು ವಿವಿಧ ಕಾರಣಗಳಿಂದಾಗಿ ಈ ಕ್ರೀಡೆಯಿಂದ ವಿಮುಖರಾಗುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟವರು ಗಮನ ಹರಿಸಬೇಕು. ಸರ್ಕಾರ ಹಾಕಿಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಹಾಗಾದಲ್ಲಿ ಮತ್ತೆ ರಾಜ್ಯದಲ್ಲಿ ಹಾಕಿ ವೈಭವ ಮರುಕಳಿಸುವುದು ನಿಶ್ಚಿತ.

* ನೀವು ಮಣ್ಣಿನಂಕಣದಲ್ಲಿ ಆಡಿ ಬೆಳೆದವರು. ಟರ್ಫ್‌ಗೆ ಹೊಂದಿಕೊಳ್ಳುವುದು ಕಷ್ಟವಾಗಲಿಲ್ಲವೇ?

ಆರಂಭದಲ್ಲಿ ತುಸು ಕಷ್ಟ ಅನಿಸಿತ್ತು. ಈಗ ಅಭ್ಯಾಸವಾಗಿದೆ. ನಿತ್ಯವೂ ಟರ್ಫ್‌ನಲ್ಲೇ ತಾಲೀಮು ನಡೆಸುತ್ತಿದ್ದೇನೆ.

* ಇಷ್ಟದ ಆಟಗಾರರು?

ಎಸ್‌.ವಿ.ಸುನಿಲ್‌, ಅರ್ಜುನ್‌ ಹಾಲಪ್ಪ ಮತ್ತು ಧನರಾಜ್‌ ಪಿಳ್ಳೈ ನನ್ನ ನೆಚ್ಚಿನ ಆಟಗಾರರು. ಇವರ ಆಟದಿಂದ ಪ್ರಭಾವಿತನಾಗಿದ್ದೇನೆ. ಸುನಿಲ್‌ ಅವರು ಸಾಯ್‌ನಲ್ಲೇ ಇದ್ದಾರೆ. ಹೀಗಾಗಿ ಆಗಾಗ ಅವರನ್ನು ಭೇಟಿ ಮಾಡುತ್ತಿರುತ್ತೇನೆ. ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಅಮೂಲ್ಯ ಸಲಹೆಗಳನ್ನೂ ನೀಡುತ್ತಾರೆ.

* ಕುಟುಂಬದವರ ಪ್ರೋತ್ಸಾಹದ ಬಗ್ಗೆ ಹೇಳಿ?

ಅಪ್ಪ ಮೋಹನ್‌, ಅಮ್ಮ ಶೋಭಾ. ನಮ್ಮದೇ ವೆಲ್ಡಿಂಗ್‌ ಶಾಪ್‌ ಇದೆ. ಅದರಲ್ಲಿ ಅಪ್ಪ ಕೆಲಸ ಮಾಡುತ್ತಾರೆ. ಅವರು ಮೊದಲಿನಿಂದಲೂ ನನ್ನ ಸಾಧನೆಗೆ ಬೆನ್ನೆಲುಬಾಗಿದ್ದಾರೆ. ಅಕ್ಕಂದಿರೂ ಪ್ರೋತ್ಸಾಹ ನೀಡುತ್ತಾ ಬೆಳೆಸಿದ್ದಾರೆ.

* ಮಿಡ್‌ಫೀಲ್ಡ್‌ ವಿಭಾಗದಲ್ಲಿ ಆಡುತ್ತೀರಿ. ತಂಡದ ಯಶಸ್ಸಿನಲ್ಲಿ ಮಿಡ್‌ಫೀಲ್ಡರ್‌ಗಳ ಪಾತ್ರವೇನು?

ಮಿಡ್‌ಫೀಲ್ಡರ್‌ಗಳು ತಂಡದ ಆಧಾರಸ್ಥಂಭವಿದ್ದ ಹಾಗೆ. ಅಂಗಳದಲ್ಲಿ ಸದಾ ಲವಲವಿಕೆಯಿಂದ ಇರಬೇಕು. ಎದುರಾಳಿ ಆಟಗಾರರಿಗೆ ಚಳ್ಳೆ ಹಣ್ಣು ತಿನ್ನಿಸಿ, ಸಹ ಆಟಗಾರರಿಗೆ ಚೆಂಡು ವರ್ಗಾಯಿಸಬೇಕು. ಅವಕಾಶ ಸಿಕ್ಕಾಗಲೆಲ್ಲಾ ಚೆಂಡನ್ನು ಗುರಿ ಮುಟ್ಟಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸುವ ಹೊಣೆ ನಮ್ಮ ಮೇಲಿರುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು