ಭಾನುವಾರ, ನವೆಂಬರ್ 17, 2019
29 °C
ರಾಜೀನಾಮೆ ಕೊಟ್ಟ ಶಾಸಕರನ್ನು ಪ್ರಶ್ನಿಸುವ ನೈತಿಕ ಹಕ್ಕು ಮತ್ತು ದನಿ ಪ್ರಜೆಗಳ ಬಳಿ ಇಲ್ಲವಾಗಿರುವ ವಾಸ್ತವಿಕ ಸತ್ಯವನ್ನು ಒಪ್ಪಲೇಬೇಕಿದೆ

ಸಂಗತ | ರಾಜೀನಾಮೆ ಪ್ರಹಸನ ಮತ್ತು ಜನತಂತ್ರ

Published:
Updated:
Prajavani

ಕರ್ನಾಟಕದ ರಾಜಕಾರಣದಲ್ಲಿ ರಾಜೀನಾಮೆ ಎಂಬ ಸಾಂವಿಧಾನಿಕ ಹಕ್ಕು ಫ್ಯಾಷನ್ ಆಗಿ ಮಾರ್ಪಟ್ಟಿದೆ. ಇತಿಹಾಸವನ್ನು ಅವಲೋಕಿಸಿದಾಗ, ಈ ಹಿಂದೆ ಶಾಸಕರು ನೀಡಿದ ಬಹುಪಾಲು ರಾಜೀನಾಮೆಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ, ಸ್ವಹಿತಾಸಕ್ತಿಯ ಕುರುಹುಗಳನ್ನು ಬಿಚ್ಚಿಟ್ಟಿವೆ. ಸದನದ ಒಳಗೆ ಪ್ರಜಾಹಿತಕ್ಕಾಗಿ ವಿಶಿಷ್ಟ ಚರ್ಚೆ, ವಾಕ್ ಸ್ವಾತಂತ್ರ್ಯಕ್ಕೆ ಅವಕಾಶ ನೀಡಿದ ಸಂವಿಧಾನ ರಚನಾಕಾರರಿಗೆ ಅನೇಕ ಬಾರಿ ಅಪಮಾನವಾಗುವ ರೀತಿಯಲ್ಲಿ ಶಾಸಕರು ವರ್ತಿಸಿದ್ದನ್ನು ಪ್ರಜ್ಞಾವಂತ ನಾಗರಿಕ ವಲಯವು ಪ್ರತಿರೋಧಿಸದೇ ಒಪ್ಪಿದೆ.

ಶಾಸಕರನ್ನು ಪ್ರಜಾಪ್ರಭುತ್ವದ ರಾಜರೆಂಬಂತೆ ಮಾನ್ಯ ಮಾಡಿದ ಉಲ್ಲೇಖಗಳು ದೊರಕುತ್ತವೆ. ಜಗತ್ತಿನ ಒಟ್ಟು 193 ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಮಾದರಿಯ 167 ರಾಷ್ಟ್ರಗಳಿವೆ. ಅದರಲ್ಲಿ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ. ಪ್ರಜಾಪ್ರಭುತ್ವದ ಮೂಲ ಆಶಯವಾದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಲ್ಲಿ ಪ್ರಜಾ ಪಾಲ್ಗೊಳ್ಳುವಿಕೆ ಅತೀ ಕಡಿಮೆ ಪ್ರಮಾಣದಲ್ಲಿ ಇರುವುದು ನಮ್ಮಲ್ಲಿ ಮಾತ್ರ. ಪ್ರಪಂಚದ ಶ್ರೇಷ್ಠ ಸಂವಿಧಾನ ಎಂಬ ಹೆಗ್ಗಳಿಕೆ ಹೊಂದಿದ್ದರೂ ತನ್ನ ಮೂಲಭೂತ ಹಕ್ಕುಗಳ ಅರಿವೇ ಇಲ್ಲದೆ ಎಲ್ಲಾ ಮಾದರಿಯ ದೌರ್ಜನ್ಯಗಳನ್ನು, ಹಕ್ಕುಗಳ ಉಲ್ಲಂಘನೆಯನ್ನು ಸಹಿಸಿಕೊಳ್ಳುವುದು ದೇಶದ ದೌರ್ಭಾಗ್ಯ. ಪ್ರಶ್ನೆ ಮಾಡುವ, ಕಾನೂನಿನ ಚೌಕಟ್ಟಿಗೆ ಒಳಪಟ್ಟು ಪ್ರತಿರೋಧಿಸುವ ನಡಾವಳಿ ಹೊಂದದಿರುವುದು, ಹಿಂದುಳಿದ ರಾಷ್ಟ್ರ ಎಂಬ ಹಣೆಪಟ್ಟಿ ಪಡೆಯಲು ಕಾರಣೀಭೂತವಾದ ಅಂಶಗಳಲ್ಲಿ ಅಗ್ರಗಣ್ಯವಾದುದು.

ಶಾಸಕರ ಇಂದಿನ ರಾಜೀನಾಮೆಗೆ ಕೇವಲ ಅವರನ್ನೇ ಹೊಣೆ ಮಾಡುವುದು ಹೊಣೆಗೇಡಿತನ. ಪ್ರಜೆಗಳು ತಮ್ಮ ಹಕ್ಕು ಚಲಾವಣೆಯಲ್ಲಿ ಕಂಡ ವೈಫಲ್ಯವೇ ಈಗಿನ ಪ್ರಹಸನಕ್ಕೆ ಮೂಲ ಕಾರಣ. ಚುನಾವಣೆ ಎಂಬುದು ಕೇವಲ ಒಂದು ಪ್ರಕ್ರಿಯೆ ಎಂದು ಭಾವಿಸಿರುವುದು ಆಧುನಿಕ ಭಾರತದ ದುರದೃಷ್ಟಕರ ನಡೆ. ಚುನಾವಣೆಯ ಅಸ್ತಿತ್ವಕ್ಕಾಗಿ, ಹಕ್ಕುಗಳ ಅನುಷ್ಠಾನಕ್ಕಾಗಿ ನಡೆದ ಹೋರಾಟ, ತ್ಯಾಗಗಳ ಅರಿವು ನಮಗೆ ಸ್ಪಷ್ಟವಾಗಿ ಇಲ್ಲದಿರುವುದು ಈ ಎಲ್ಲಾ ದುರ್ನಡೆಗಳಿಗೆ ಮೂಲ.

ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದಿರುವುದು, ಲೋಭಗಳಿಗೆ ಮಣಿಯುವುದು, ಮೌಲ್ಯಮಾಪನ ಇಲ್ಲದೆ ಮತ ಚಲಾವಣೆಯು ರಾಜಕೀಯ ವಲಯವನ್ನು ಅಸ್ಥಿರ ನೆಲೆಗಟ್ಟಿನಲ್ಲಿ ನಿಲ್ಲಿಸಲು ಪ್ರಮುಖ ಕಾರಣಗಳಾಗಿವೆ. 1977ರ ನಂತರ ರಾಷ್ಟ್ರ ಮತ್ತು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಸಮ್ಮಿಶ್ರ ಸರ್ಕಾರಗಳು ಜನರ ಆಶಯಗಳು ಹಾಗೂ ರಾಷ್ಟ್ರದ ಅಭಿವೃದ್ಧಿಯ ಸ್ಥಿರತೆಗೆ ಪೂರಕವಾಗಿ ಆಡಳಿತ ನಡೆಸಲು ಸಾಧ್ಯವಾಗದ ಅನೇಕ ಜ್ವಲಂತ ಉದಾಹರಣೆಗಳು ಲಭ್ಯವಿವೆ. ಬಹಳ ಮುಖ್ಯವಾಗಿ, ಮತ ಚಲಾವಣೆಯಲ್ಲಿ ಸುಶಿಕ್ಷಿತರ ನಿರ್ಲಕ್ಷ್ಯವು ಅಸಮರ್ಥರ ಆಯ್ಕೆಗೆ ಇಂಬು ನೀಡಿದೆ. ಪ್ರಸ್ತುತ, ರಾಜೀನಾಮೆ ಕೊಟ್ಟ ಶಾಸಕರನ್ನು ಪ್ರಶ್ನಿಸುವ ನೈತಿಕ ಹಕ್ಕು ಮತ್ತು ದನಿ ಪ್ರಜೆಗಳ ಬಳಿ ಇಲ್ಲವಾಗಿರುವ ವಾಸ್ತವಿಕ ಸತ್ಯವನ್ನು ಒಪ್ಪಲೇಬೇಕಿದೆ.

ಶಾಸಕರಿಗೆ ಸ್ವಇಚ್ಛೆಯಿಂದ ರಾಜೀನಾಮೆ ನೀಡುವ ಸಾಂವಿಧಾನಿಕ ಹಕ್ಕು ಇದೆ. ಅವರು ಸ್ಪೀಕರ್ ಕಚೇರಿಗೆ ರಾಜೀನಾಮೆ ಸಲ್ಲಿಸಿ ಸ್ವೀಕೃತಿ ಪಡೆದ ನಂತರ, ಪಕ್ಷಗಳು ನೀಡುವ ವಿಪ್ ಅಥವಾ ಇತರ ನಿರ್ದೇಶನಗಳ ಉಲ್ಲಂಘನೆಗೆ ಶಿಸ್ತು ಕ್ರಮ ಜರುಗಿಸಲು ಅವಕಾಶ ಇರುವುದಿಲ್ಲ. ಸ್ಪೀಕರ್ ಅವರು ಇಂತಿಷ್ಟೇ ಸಮಯದಲ್ಲಿ ರಾಜೀನಾಮೆ ಅಂಗೀಕಾರ ಮಾಡಬೇಕೆಂಬ ನಿಯಮ ಇಲ್ಲದಿರುವುದು ಸಾಂವಿಧಾನಿಕ ನ್ಯೂನತೆ. ಆದಾಗ್ಯೂ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂಬುದು ರಾಜ್ಯಪಾಲರಿಗೆ ಮನವರಿಕೆಯಾದಲ್ಲಿ, ಸ್ಪೀಕರ್ ಅವರಿಂದ ವಿವರಣೆ ಕೇಳುವ ಮತ್ತು ಸೂಕ್ತ ಕ್ರಮ ಜರುಗಿಸುವ ಸಾಂವಿಧಾನಿಕ ಅಧಿಕಾರ ರಾಜ್ಯಪಾಲರಿಗೆ ಇರುತ್ತದೆ.

ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡುವ ಅಧಿಕಾರ ಮುಖ್ಯಮಂತ್ರಿಗೆ ಇರುತ್ತದೆ. ಆದರೆ ಇದನ್ನು ರಾಜ್ಯಪಾಲರು ಒಪ್ಪಲೇಬೇಕೆಂಬ ಕಡ್ಡಾಯ ನಿಯಮ ಇರುವುದಿಲ್ಲ. ಸಂವಿಧಾನದ 163(1)ನೇ ವಿಧಿಯ ಅನ್ವಯ ರಾಜ್ಯಪಾಲರು ಮುಖ್ಯಮಂತ್ರಿಯನ್ನು ಒಳಗೊಂಡ ಮಂತ್ರಿಮಂಡಲದ ಸಲಹೆ ಮೇರೆಗೆ ಕಾರ್ಯನಿರ್ವಹಿಸಬೇಕು. ಆದರೆ ಸರ್ಕಾರ ಬಹುಮತ ಕಳೆದುಕೊಂಡ ಸಂದರ್ಭದಲ್ಲಿ, ರಾಜ್ಯಪಾಲರು ಇದನ್ನು ಮೀರಿ ವಿವೇಚನಾ ಅಧಿಕಾರವನ್ನು ಬಳಸಬಹುದು. ಈ ಅಧಿಕಾರವನ್ನು ಸದನದಲ್ಲೂ ಪ್ರಶ್ನಿಸಲು ಅವಕಾಶ ಇರುವುದಿಲ್ಲ. ಜೊತೆಗೆ ಮುಖ್ಯಮಂತ್ರಿ ಅವರ ವಿಧಾನಸಭೆ ವಿಸರ್ಜನೆ ಶಿಫಾರಸು ಪತ್ರವನ್ನು ರಾಜ್ಯಪಾಲರು ಸಂವಿಧಾನದ 213ನೇ ವಿಧಿಯ ಅನ್ವಯ ಪಾಕೆಟ್ ವಿಟೊ ಅಧಿಕಾರದಡಿ ಅನಿರ್ದಿಷ್ಟ ಕಾಲ ತಮ್ಮ ಬಳಿಯೇ ಇರಿಸಿಕೊಳ್ಳಬಹುದಾಗಿದೆ. ಈ ಪರಮಾಧಿಕಾರವನ್ನು ಕೂಡ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿಲ್ಲ. ಈ ಹಿಂದೆ ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲೂ ಈ ಅಂಶ ನ್ಯಾಯಾಲಯದಲ್ಲಿ ಉಲ್ಲೇಖಿತವಾಗಿದೆ. ರಾಜ್ಯಪಾಲರು ಸರ್ಕಾರವನ್ನು ಅಮಾನತಿನಲ್ಲಿ ಇಡುವ ಹಾಗೂ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡುವ ಸಾಂವಿಧಾನಿಕ ಅಧಿಕಾರ ಹೊಂದಿರುತ್ತಾರೆ.

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಾದರೂ, ಪ್ರಜಾವಲಯ ಪ್ರಜ್ಞಾವಂತಿಕೆ ಪ್ರದರ್ಶಿಸಿ, ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವ ಮೂಲಕ, ಇಂಥ ಅನೈತಿಕ ರಾಜಕೀಯ ನಡೆಗಳಿಗೆ ತಡೆಯೊಡ್ಡಬೇಕಾದ ಜರೂರು ಇದೆ.

 

ಪ್ರತಿಕ್ರಿಯಿಸಿ (+)