ಬುಧವಾರ, ಏಪ್ರಿಲ್ 21, 2021
30 °C
ರಾಷ್ಟ್ರೀಯ ಮಟ್ಟದ ಆರ್ಚಕ ಪುರೋಹಿತರ ಮತ್ತು ಆಗಮಿಕರ ಕಾರ್ಯಾಗಾರ

ಸಂಸ್ಕೃತ ವಿವಿಯಿಂದ ಶೈವಶಾಸ್ತ್ರ ಬೋಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇಂದಿನ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಯಲು ಪ್ರೋತ್ಸಾಹ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಶೈವಶಾಸ್ತ್ರ ಎಂಬ ಹೊಸ ವಿಷಯ ಬೋಧನೆ ಆರಂಭಿಸಲಾಗುತ್ತಿದೆ’ ಎಂದು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಡಾ. ಪ್ರಕಾಶ್ ಆರ್.ಪಾಗೋಜಿ ಹೇಳಿದರು. 

ವೈದಿಕ ಚಾರಿಟಬಲ್ ಟ್ರಸ್ಟ್ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವತಿಯಿಂದ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ‘ದ್ವಿತೀಯ ರಾಷ್ಟ್ರೀಯ ಮಟ್ಟದ ಆರ್ಚಕ ಪುರೋಹಿತರ ಮತ್ತು ಆಗಮಿಕರ ಕಾರ್ಯಾಗಾರ’ದಲ್ಲಿ ಮಾತನಾಡಿದ ಅವರು, ‘ವೇದಶಾಸ್ತ್ರ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗೆ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ನೀಡಲಾಗುವುದು’ ಎಂದರು. 

ವಿಭೂತಿಪುರದ ಮಹಾಸಂಸ್ಥಾನ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ‘ಅನುಭವ ಮಂಟಪದ ಮೂಲಕ 12ನೇ ಶತಮಾನದಲ್ಲಿಯೇ ಬಸವಣ್ಣ ಅಧಿಕಾರ ವಿಕೇಂದ್ರೀಕರಣ ಮಾಡಿದ್ದರು’ ಎಂದು ಹೇಳಿದರು.

‘ಅನುಭವ ಮಂಟಪದಂತೆಯೇ, ಪಂಚಪೀಠ ಮಠಗಳು ಹಾಗೂ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಿರುವ ಪುರೋಹಿತರವರೆಗೂ ಅಧಿಕಾರ ಹಂಚಿಕೆಯಾಗಿದೆ’ಎಂದರು.  

ಇದೇ ಸಂದರ್ಭದಲ್ಲಿ, ಚಿತ್ರನಟ ಶಿವಕುಮಾರ ಆರಾಧ್ಯ ಅವರಿಗೆ `ಕಲಾ ತಪಸ್ವಿ' ಪ್ರಶಸ್ತಿ ಹಾಗೂ ಚಿಕ್ಕಪೇಟೆ ಮಹಾಂತರ ಮಠದ ನಾಗೇಂದ್ರಮೂರ್ತಿ ಅವರಿಗೆ ಕಾಂತಿ ಕಾಯಕಯೋಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದಾನಚಿಂತಾಮಣಿ ಲಿಂ.ಶಿವಪ್ಪ ಶೆಟ್ಟಿ ಕಮಲಮ್ಮ ಫೌಂಡೇಷನ್‍ನ ಅಧ್ಯಕ್ಷ ಬಿ.ಎಸ್. ವಾಗೀಶ್ ಪ್ರಸಾದ್, ಮಹಾರಾಷ್ಟ್ರದ ಸೊಲ್ಲಾಪುರದ ಅಖಿಲ ಭಾರತ ವೀರಶೈವ ಜಂಗಮ ಆರ್ಚಕ ಪರಿಷತ್ತಿನ ಮಹಾಸಭಾಧ್ಯಕ್ಷ ಡಾ.ಶಿವಯೋಗಿಸ್ವಾಮಿ ಹೊಳಿಮಠ, ಕೋಡಿಮಠದ ಪ್ರಧಾನ ಅರ್ಚಕ ಜಾವಗಲ್ ಹೊನ್ನಪ್ಪಾಜಿ ಶಾಸ್ತ್ರಿ, ಷಡಕ್ಷರಿ ಶಾಸ್ತ್ರಿ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.