ಶುಕ್ರವಾರ, ಆಗಸ್ಟ್ 23, 2019
22 °C

ರೌಡಿಪಟ್ಟಿಗೆ ಹೊಸದಾಗಿ 368 ಹೆಸರು ಸೇರ್ಪಡೆ

Published:
Updated:
Prajavani

ಬೆಂಗಳೂರು: ‘ಉತ್ತರ ವಿಭಾಗದ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿರುವ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣದ 358 ಆರೋಪಿಗಳ ಹೆಸರನ್ನು ಈಗಾಗಲೇ ರೌಡಿಪಟ್ಟಿಗೆ ಸೇರಿಸಲಾಗಿದ್ದು, ಇನ್ನು 368 ಮಂದಿ ಹೆಸರನ್ನು ಪಟ್ಟಿಗೆ ಸೇರಿಸಲಾಗುವುದು’ ಎಂದು ಡಿಸಿಪಿ ಶಶಿಕುಮಾರ್ ಹೇಳಿದರು.

ನಗರದ ಮಲ್ಲೇಶ್ವರ ಆಟದ ಮೈದಾನದಲ್ಲಿ ಗುರುವಾರ ರೌಡಿ ಪರೇಡ್ ನಡೆಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

‘ಬಕ್ರೀದ್ ಹಬ್ಬ ಹಾಗೂ ಸ್ವಾತಂತ್ರ್ಯ ದಿನಾಚರಣೆ ಹತ್ತಿರವಿದೆ. ಇಂಥ ಸಂದರ್ಭದಲ್ಲಿ ಪ್ರತಿಯೊಂದು ಠಾಣೆ ವ್ಯಾಪ್ತಿಯ ರೌಡಿಗಳ ಪರೇಡ್ ನಡೆಸಿ, ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಉತ್ತರ ವಿಭಾಗದಲ್ಲಿ 2017ರಿಂದ 2019ರ ಅವಧಿಯಲ್ಲಿ 93 ಕೊಲೆ ಪ್ರಕರಣಗಳು ವರದಿಯಾಗಿದ್ದು, 81 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಬ್ಬರು ಆರೋಪಿಗಳು ಮೃತರಾಗಿದ್ದಾರೆ. ಕೊಲೆ ಯತ್ನ ಆರೋಪದಡಿ 313 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಭಾಗಿಯಾಗಿದ್ದ 87 ರೌಡಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದರು.

379 ರೌಡಿಗಳು ಭಾಗಿ: ಡಿಸಿಪಿ ಶಶಿಕುಮಾರ್ ನಡೆಸಿದ ಪರೇಡ್‌ನಲ್ಲಿ 18 ಪೊಲೀಸ್ ಠಾಣೆಯ 779 ರೌಡಿಗಳ ಪೈಕಿ 379 ರೌಡಿಗಳು ಮಾತ್ರ ಬಂದಿದ್ದರು. 142 ರೌಡಿಗಳು ನ್ಯಾಯಾಂಗ ಬಂಧನದಲ್ಲಿರುವುದಾಗಿ ಪೊಲೀಸರು ಹೇಳಿದರು.‌ 

ವಿಚಿತ್ರವಾಗಿ ತಲೆಗೂದಲು ಕತ್ತರಿಸಿಕೊಂಡಿದ್ದ ಹಾಗೂ ಕಿವಿಯಲ್ಲಿ ಒಲೆ ಹಾಕಿಕೊಂಡಿದ್ದ ರೌಡಿಗಳಿಗೆ ಬಿಸಿ ಮುಟ್ಟಿಸಿದ ಶಶಿಕುಮಾರ್, ‘ವಿಚಿತ್ರವಾಗಿ ಕಾಣಿಸಿಕೊಳ್ಳುವ ಮೂಲಕ ಜನರನ್ನು ಹೆದರಿಸೋಕೆ ಹೋದರೆ ಪರಿಣಾಮ ನೆಟ್ಟಗಿರಲ್ಲ. ಕೊದಲನ್ನು ಚೆನ್ನಾಗಿ ಕತ್ತರಿಸಿಕೊ’ ಎಂದು ಎಚ್ಚರಿಕೆ ನೀಡಿದರು. 

Post Comments (+)