ಗುರುವಾರ , ಆಗಸ್ಟ್ 22, 2019
26 °C

‍ಮಗನ ರಾಜಕೀಯ ಭವಿಷ್ಯಕ್ಕಾಗಿ ಜಿ.ಟಿ.ದೇವೇಗೌಡ ಪ್ರಯತ್ನ

Published:
Updated:

ಬೆಂಗಳೂರು: ಜೆಡಿಎಸ್‌ ಹಿರಿಯ ನಾಯಕ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ನಾನಾ ಬಗೆಯ ಚರ್ಚೆಗೆ ಗ್ರಾಸವಾಗಿದೆ.

ಹುಣಸೂರು ಕ್ಷೇತ್ರದ ಉಪಚುನಾವಣೆಯಲ್ಲಿ ತಮ್ಮ ಪುತ್ರ ಜಿ.ಡಿ.ಹರೀಶ್‌ಗೌಡಗೆ ಟಿಕೆಟ್ ಖಚಿತಪಡಿಸಿಕೊಳ್ಳುವ ಪೀಠಿಕೆಯಾಗಿ ಈ ಬೆಳವಣಿಗೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

ಈಚಿನ ದಿನಗಳಲ್ಲಿ ಜಿ.ಟಿ.ದೇವೇಗೌಡ, ಬಿಜೆಪಿ ಬಗ್ಗೆ ಮೃದು ಧೋರಣೆ ತಳೆದಿರುವುದು ಅವರ ಮಾತುಗಳಿಂದಲೇ ಬಹಿರಂಗಗೊಂಡಿದೆ. ಕೆಲವು ದಿನಗಳ ಹಿಂದೆ ರಾಜಕೀಯದಿಂದಲೇ ನಿವೃತ್ತಿಯಾಗುವ ಮಾತುಗಳನ್ನೂ ಆಡಿದ್ದಾರೆ. ಹುಣಸೂರು ಕ್ಷೇತ್ರಕ್ಕೆ ಉಪಚುನಾವಣೆ ಎದುರಾದರೆ ತಮ್ಮ ಪುತ್ರ ಹರೀಶ್‌ಗೌಡಗೆ ಜೆಡಿಎಸ್‌ನಿಂದ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದರು. ಆದರೆ ಈವರೆಗೂ ಪಕ್ಷದ ವರಿಷ್ಠರು ಯಾವುದೇ ಭರವಸೆ ನೀಡಿಲ್ಲ. ಈ ಹಿನ್ನೆಲೆ ಇಟ್ಟುಕೊಂಡು ಬಿಜೆಪಿಯಿಂದ ಮಗನಿಗೆ ಟಿಕೆಟ್ ಗಿಟ್ಟಿಸುವುದು ಅಥವಾ ಬಿಜೆಪಿ ಕಡೆಗೆ ಹೋಗುತ್ತಿದ್ದಾರೆ ಎಂಬ ಸಂದೇಶ ರವಾನಿಸಿ ಟಿಕೆಟ್‌ಗಾಗಿ ಜೆಡಿಎಸ್ ಮುಖಂಡರ ಮೇಲೆ ಪರೋಕ್ಷವಾಗಿ ಒತ್ತಡ ಹಾಕುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ಹುಣಸೂರಿನಲ್ಲಿ ಹರೀಶ್‌ಗೌಡರನ್ನು ಕಣಕ್ಕಿಳಿಸಲು ಜಿ.ಟಿ.ದೇವೇಗೌಡ ಬಯಸಿದ್ದರು. ಮೊದಲಿಗೆ ಪ್ರಜ್ವಲ್‌ ಹೆಸರು ತೇಲಿಬಿಟ್ಟ ಜೆಡಿಎಸ್‌ ವರಿಷ್ಠರು, ಬಳಿಕ ಎಚ್‌.ವಿಶ್ವನಾಥ್‌ ಅವರನ್ನು ಕರೆತಂದು ನಿಲ್ಲಿಸಿದರು. ಹೀಗಾಗಿ ಹರೀಶ್‌ಗೌಡಗೆ ಅವಕಾಶ ತಪ್ಪಿತು. ಲೋಕಸಭೆ ಚುನಾವಣೆಯಲ್ಲಿ ಮಗನಿಗೆ ಟಿಕೆಟ್ ಸಿಗಬಹುದು ಎಂಬ ಅವರ ನಿರೀಕ್ಷೆಯೂ ಹುಸಿಯಾಯಿತು. ಪುತ್ರನಿಗೆ ರಾಜಕೀಯ ಭವಿಷ್ಯ ರೂಪಿಸಲು ಸಾಧ್ಯವಾಗದ ಕಾರಣ ತೀವ್ರ ಅಸಮಾಧಾನಗೊಂಡಿದ್ದ ಅವರು, ಮೈತ್ರಿ ಸರ್ಕಾರದಲ್ಲಿ ತಮಗೆ ಇಷ್ಟವಿಲ್ಲದ ಉನ್ನತ ಶಿಕ್ಷಣ ಖಾತೆ ನೀಡಿದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಮೈಸೂರಿನ ಉಸ್ತುವಾರಿ ಸಚಿವರಾಗಿದ್ದರೂ ಅಲ್ಲಿ ಸಾ.ರಾ.ಮಹೇಶ್ ಮಾತೇ ನಡೆಯುತ್ತದೆ, ತಮ್ಮ ಮಾತು ನಡೆಯುತ್ತಿಲ್ಲ ಎಂಬ ಕಾರಣಕ್ಕೆ ಸಿಟ್ಟಾಗಿದ್ದೂ ಉಂಟು.

ಉಪಚುನಾವಣೆಯಲ್ಲೂ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಇರುತ್ತದೆಯೋ, ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಹುಣಸೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಂದು ಈಗಾಗಲೇ ಬಿಂಬಿಸಿಕೊಂಡಿರುವ ಎಚ್.ಪಿ. ಮಂಜುನಾಥ್‌, ಕಾರ್ಯತಂತ್ರಗಳನ್ನೂ ರೂಪಿಸತೊಡಗಿದ್ದಾರೆ. ಅನರ್ಹತೆ ವಿಚಾರ ಇತ್ಯರ್ಥಗೊಳ್ಳದೆ ಎಚ್‌.ವಿಶ್ವನಾಥ್‌ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. 

ಹುಣಸೂರಿನಲ್ಲಿ ಬಿಜೆಪಿಗೆ ಬಲಿಷ್ಠ ಅಭ್ಯರ್ಥಿ ಕೊರತೆ ಇದೆ. ಹಾಗಾಗಿ ಹರೀಶ್‌ಗೌಡ ಅವರನ್ನು ಬಿಜೆಪಿಯಿಂದ ಸ್ಪರ್ಧೆಗೆ ಇಳಿಸುವ ಪ್ರಯತ್ನವನ್ನು ಜಿ.ಟಿ.ದೇವೇಗೌಡ ನಡೆಸಿದ್ದಾರೆ ಎಂದು ಜೆಡಿಎಸ್ ನಾಯಕರೊಬ್ಬರು ತಿಳಿಸಿದರು.

ತಮ್ಮ ಪುತ್ರ ಅಮಿತ್‌ ದೇವರಟ್ಟಿ ಅವರನ್ನು ಹುಣಸೂರಿನಿಂದ ಕಣಕ್ಕೆ ಇಳಿಸುವುದು ಎಚ್‌.ವಿಶ್ವನಾಥ್ ಆಲೋಚನೆಯಾಗಿತ್ತು. ಮಂಜುನಾಥ್‌ ಎದುರು ಅಮಿತ್ ಸಮರ್ಥ ಅಭ್ಯರ್ಥಿಯಾಗಲಾರರು ಎಂಬ ಲೆಕ್ಕಾಚಾರದಲ್ಲಿ ಹರೀಶ್‌ಗೌಡಗೆ ವಿಶ್ವನಾಥ್ ಸಹ ಬೆಂಬಲವಾಗಿ ನಿಂತಿರಬಹುದು ಎಂದು ಹೇಳಲಾಗುತ್ತಿದೆ.

 

Post Comments (+)