ಮಂಗಳವಾರ, ಆಗಸ್ಟ್ 20, 2019
21 °C
ಸಿಡಿಪಿಒ ಲತಾ ಅವರ ವಿರುದ್ಧ ಕಿರುಕುಳದ ಆರೋಪ

ಆ.29 ರಂದು ಅಂಗನವಾಡಿ ನೌಕರರ ಪ್ರತಿಭಟನೆ

Published:
Updated:

ಚಿಕ್ಕಬಳ್ಳಾಪುರ: ‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕಿರುಕುಳ ನೀಡುತ್ತಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಲತಾ ಅವರ ವರ್ಗಾವಣೆಗೆ ಒತ್ತಾಯಿಸಿ ಆಗಸ್ಟ್ 29 ರಂದು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾ ಮಂಡಲಿಯ ತಾಲ್ಲೂಕು ಘಟಕದ ಕಾರ್ಯದರ್ಶಿ ಬಿ.ನಾಗರತ್ನಮ್ಮ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಮರಳುಕುಂಟೆ ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರ್ಯಕರ್ತೆ ವರಲಕ್ಷ್ಮೀ ಅವರನ್ನು ಕಾರಣ ಇಲ್ಲದೇ ಹಾಗೂ ವರ್ಗಾವಣೆಗೆ ಅನುಮತಿ ಇಲ್ಲದಿದ್ದರೂ ಲತಾ ಅವರು ದುರುದ್ದೇಶದಿಂದ ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ’ ಎಂದು ಆರೋಪಿಸಿದರು.

‘ತಾಲ್ಲೂಕಿನ ಗುವ್ವಲಕಾನಹಳ್ಳಿಯಲ್ಲಿ ಸುಮಾರು 9 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದ ಹೇಮಾ ಅವರಿಗೆ ಹುನೇಗಲ್ ಅಂಗನವಾಡಿಯಲ್ಲಿ ಖಾಲಿ ಇರುವ ಹುದ್ದೆಗೆ ಮುಂಬಡ್ತಿ ನೀಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ. ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಯಾವುದೇ ಸಮಸ್ಯೆಗಳಿಗೂ ಸ್ಪಂದಿಸುತ್ತಿಲ್ಲ. ನಿರಂತರ ಕಿರುಕುಳ, ಬೆದರಿಕೆ ನಡುವೆ ನೌಕರರು ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಅಂಗನವಾಡಿ ಕೇಂದ್ರಗಳಿಗೆ ಅಡುಗೆ ಅನಿಲವನ್ನು 6 ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಇದೀಗ ಅಂಗನವಾಡಿ ಕಾರ್ಯಕರ್ತೆಯರೇ ಅಡುಗೆ ಅನಿಲವನ್ನು ಬುಕ್ ಮಾಡಿ ತರಿಸಿಕೊಳ್ಳಲು ಸಿಡಿಪಿಒ ಒತ್ತಡ ಹೇರುತ್ತಿದ್ದಾರೆ. ಈ ನಿರ್ಧಾರ ಕೈ ಬಿಟ್ಟು ಹಿಂದಿನ ಪದ್ಧತಿಯನ್ನೇ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.

‘ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಸ್ಥಳಾಂತರಿಸಬೇಕು. ಬಹುಧಾನ್ಯ ಮಿಶ್ರಿತ ಆಹಾರದ ಬದಲಿಗೆ ಕಾಳುಗಳನ್ನು ಪೂರೈಕೆ ಮಾಡಬೇಕು. ಸಿಡಿಪಿಒ ಕಚೇರಿಯಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲದಿಂದ ಇರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು.

Post Comments (+)