ಗುರುವಾರ , ನವೆಂಬರ್ 21, 2019
20 °C

ಭಾರತಕ್ಕೆ ಭಯೋತ್ಪಾದನೆ ವಿರುದ್ಧ ಏಕಾಂಗಿಯಾಗಿ ಹೋರಾಡುವ ಶಕ್ತಿ ಇದೆ -ನರೇಂದ್ರ ಮೋದಿ

Published:
Updated:

 ಉತ್ತರಪ್ರದೇಶ: ಭಯೋತ್ಪಾದನೆ ಎಂಬುದು ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಂಡಿರುವ ಸಮಸ್ಯೆ. ನಮ್ಮ ನೆರೆ ರಾಷ್ಟ್ರವಾದ ಪಾಕಿಸ್ತಾನದಲ್ಲಿಯೇ ಇದರ ಬೇರು ಹೊಂದಿದೆ ಎಂಬುದು ಆತಂಕದ ವಿಷಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ. 

ಅಮೆರಿಕಾದ ಎರಡು ಗೋಪುರಗಳನ್ನು ವಿಮಾನಗಳ ಮೂಲಕ ಧ್ವಂಸ ಮಾಡಿದ 9/11 ದುರಂತಗಳನ್ನು ನೆನಪಿಸಿಕೊಳ್ಳುತ್ತಾ ಈ ವಿಷಯ ಪ್ರಸ್ತಾಪಿಸಿದರು. 

ಉತ್ತರಪ್ರದೇಶದಲ್ಲಿ ಇಂದು 'ಸ್ವಚ್ಚತಾ ಹಿ ಸೇವಾ' ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಇಂದು ಭಯೋತ್ಪಾದನೆ ಎಂಬುದು ಯಾವುದೋ ಒಂದು ದೇಶದ ಸಮಸ್ಯೆಯಾಗಿ ಉಳಿದಿಲ್ಲ. ಇಡೀ ವಿಶ್ವಕ್ಕೆ ವ್ಯಾಪಿಸಿದೆ. ಇದಕ್ಕೆ ಕುಮ್ಮಕ್ಕು ನೀಡುವವರು ನೆರೆಯ ಪಾಕಿಸ್ತಾನದಲ್ಲಿಯೇ ಅಭಿವೃದ್ಧಿ ಹೊಂದುತ್ತಿದ್ದಾರೆ ಎಂದಿದ್ದಾರೆ. 

ಭಾರತ ಭಯೋತ್ಪಾದನೆ ವಿರುದ್ಧ ಏಕಾಂಗಿಯಾಗಿ ಹೋರಾಡುವ ಶಕ್ತಿ ಹೊಂದಿದೆ. ಭಯೋತ್ಪಾದನೆ ಮಟ್ಟ ಹಾಕಲು ಹಿಂದೆ ಪ್ರಮುಖ ಹೆಜ್ಜೆಗಳನ್ನು ಇರಿಸಿದ್ದೇವೆ. ಇದು ಮುಂದೆಯೂ ಮುಂದುವರಿಯುತ್ತದೆ. ಯಾರು ಭಯೋತ್ಪಾದನೆಗೆ ಸಹಕಾರ ನೀಡುವುದು ಮತ್ತು ತರಬೇತಿ ನೀಡುವುದು ಮಾಡುತ್ತಾರೋ ಅಂತಹ ವ್ಯಕ್ತಿಗಳ ವಿರುದ್ಧ ಇಡೀ ವಿಶ್ವವೇ ಹೋರಾಡಬೇಕು ಎಂದಿದ್ದಾರೆ.

ಕಳೆದ ವಾರ ಪಾಕಿಸ್ತಾನ ಮೂಲದ ಭಯೋತ್ಪಾದಕರಾದ ಜೈಷ್ ಎ ಮೊಹಮದ್ ಸಂಘಟನೆಯ ಮಸೂದ್ ಅಜರ್, ಲಷ್ಕರ್ ಎ ತಯಿಬಾ ಸಂಘಟನೆಯ ಹಫೀದ್ ಸಯೀದ್, ಜಾಕಿರ್ ಉರ್ ರೆಹಮಾನ್ ಲಖ್ವಿ, 2008ರ ಮುಂಬೈ ಬಾಂಬ್ ಸ್ಫೋಟದ ರುವಾರಿ ಹಾಗೂ 1993ರ ಮುಂಬೈ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್  ದಾವುದ್ ಇಬ್ರಾಹಿಂರನ್ನು ಜಾಗತಿಕ ಉಗ್ರರೆಂದು ಘೋಷಿಸಿತು.

ಇದನ್ನೂ ಓದಿ...ಉಗ್ರಪಟ್ಟಕ್ಕೆ ಪುಲ್ವಾಮಾ ದಾಳಿಯೂ ಕಾರಣ

ಈ ನಾಲ್ಕು ಮಂದಿಯಲ್ಲಿ ಇಬ್ಬರು ಉಗ್ರರನ್ನು ಅಮೆರಿಕಾ ಜಾಗತಿಕ ಉಗ್ರರ ಪಟ್ಟಿಯಲ್ಲಿ ಈಗಾಗಲೆ ಸೇರಿಸಿದೆ. ಕಳೆದ ಏಪ್ರಿಲ್‌ನಲ್ಲಿ ಅಮೆರಿಕಾ ಸೆಕ್ಯುರಿಟಿ ಕೌನ್ಸಿಲ್ ತನ್ನ ಉಗ್ರರ ಪಟ್ಟಿಯಲ್ಲಿ ಮಸೂದ್ ಅಜರ್ ನನ್ನು ಸೇರಿಸಿತು. ಇದಕ್ಕೆ ಚೀನಾ ತನ್ನ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಕಳೆದ ವಾರ ಈ ನಾಲ್ಕು ಮಂದಿಯನ್ನೂ ಭಾರತ ಜಾಗತಿಕ ಉಗ್ರರ ಪಟ್ಟಿಯಲ್ಲಿ ಸೇರಿಸಿದೆ.

ಕೇಂದ್ರ ಗುಪ್ತದಳದ ಮಾಹಿತಿಯಂತೆ ಪಾಕಿಸ್ತಾನ ಗೌಪ್ಯವಾಗಿ ಜೈಷ್ ಎ ಮೊಹಮದ್ ಮುಖ್ಯಸ್ಥ ಮಸೂದ್ ಅಜರ್‌ನನ್ನು ಬಿಡುಗಡೆ ಮಾಡಿ, ಭಾರತದಲ್ಲಿ ದುಷ್ಕೃತ್ಯ ಎಸಗುವ ಯೋಜನೆ ರೂಪಿಸಿದೆ ಎನ್ನಲಾಗಿದೆ. ಆದರೆ ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿ ನಡೆದ ನಂತರ ಮಸೂದ್ ಅಜರ್‌ನನ್ನು ಬಂಧಿಸಿ ಗೃಹ ಬಂಧನದಲ್ಲಿ ಇರಿಸುವ ಮೂಲಕ ತಾನು ಭಯೋತ್ಪಾದನೆ ವಿರುದ್ಧ ಇರುವುದಾಗಿ ಹೇಳಿಕೊಂಡಿದೆ.

ಅಧಿಕೃತ ಮಾಹಿತಿಗಳ ಪ್ರಕಾರ, ಭಾರತ ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದ್ದರ ವಿರುದ್ದ ಪಾಕಿಸ್ತಾನ ತಕ್ಕ ಉತ್ತರ ನೀಡಲು ರಾಜಸ್ಥಾನ-ಜಮ್ಮು ಸೆಕ್ಟರ್‌ನಲ್ಲಿ ಅಧಿಕ ಪ್ರಮಾಣದ ಸೇನಾ ತುಕಡಿಗಳನ್ನು ನಿಯೋಜಿಸಿದೆ ಎನ್ನಲಾಗಿದೆ. ಪಾಕಿಸ್ತಾನ ತನ್ನ ನೆಲದಲ್ಲಿ ಭಯೋತ್ಪಾದನೆಗೆ ನೆರವು ನೀಡುವುದಿಲ್ಲವಾದರೆ, ಭಾರತ ಯಾವಾಗಲೂ ಮಾತುಕತೆ ಸಿದ್ಧವಿರುವುದಾಗಿ ತಿಳಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಪ್ರತಿಕ್ರಿಯಿಸಿ (+)