ಗುರುವಾರ , ನವೆಂಬರ್ 21, 2019
20 °C
ವರದಿ ಸಲ್ಲಿಸಲು 15 ದಿನಗಳ ಗಡುವು

ಪಚ್ಚನಾಡಿ: ಅಧ್ಯಯನಕ್ಕೆ ತಜ್ಞರ ಸಮಿತಿ

Published:
Updated:
Prajavani

ಮಂಗಳೂರು: ಪಚ್ಚನಾಡಿಯ ಘನ ತ್ಯಾಜ್ಯ ವಿಲೇವಾರಿ ಘಟಕದ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿರುವ ಕುರಿತು ಸಮಗ್ರ ಅಧ್ಯಯನ ನಡೆಸಲು ನಾಲ್ವರು ಸದಸ್ಯರ ತಜ್ಞರ ಸಮಿತಿಯನ್ನು ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.

ಚೆನ್ನೈನ ಸ್ವಚ್ಛ್ ಸಿಟ್ಸೆಜ್‌ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕ ಎಸ್‌.ಪಟ್ಟಾಭಿರಾಮನ್‌, ಮೈಸೂರಿನ ಜೆಎಂಎಸ್‌ ಸಮೂಹ ಕಂಪನಿಗಳ ನಿರ್ದೇಶಕ ಡಾ.ಪಿ.ಎಂ.ಕುಲಕರ್ಣಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಎಂಜಿನಿಯರ್‌ ರಮೇಶ್‌ ಮತ್ತು ತಮಿಳುನಾಡಿನ ಈರೋಡ್‌ನ ಝಿಗ್ಮಾ ಗ್ಲೋಬಲ್‌ ಎವ್ರಾನ್‌ಸಲ್ಯೂಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ನಿರ್ದೇಶಕ ನಾಗೇಶ್‌ ಪ್ರಭು ಸಿ. ಈ ಸಮಿತಿಯಲ್ಲಿದ್ದಾರೆ.

ಪಚ್ಚನಾಡಿ– ಮಂದಾರ ಪ್ರದೇಶದಲ್ಲಿರುವ ಮಂಗಳೂರು ನಗರದ ಘನ ತ್ಯಾಜ್ಯ ನೆಲಭರ್ತಿ ಘಟಕ ಹಾಗೂ ಲ್ಲಿ ಆಗಸ್ಟ್‌ ತಿಂಗಳಲ್ಲಿ ಭಾರಿ ಮಳೆಯಿಂದಾಗಿ ಸಂಭವಿಸಿರುವ ಭೂಕುಸಿತದ ಕುರಿತು ಸಮಿತಿ ಅಧ್ಯಯನ ನಡೆಸಲಿದೆ. ಭೂಕುಸಿತಕ್ಕೆ ಕಾರಣಗಳನ್ನು ಪತ್ತೆಮಾಡಿ, ಪರಿಹಾರ ಕ್ರಮಗಳ ಕುರಿತು ಸಲಹೆ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ. ವರದಿ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಮತ್ತೆ ಭೂಕುಸಿತ ಸಂಭವಿಸದಂತೆ ತಡೆಯಲು ಅಗತ್ಯ ಕ್ರಮಗಳನ್ನು ಸೂಚಿಸಬೇಕು. ಇದಕ್ಕಾಗಿ ಲಭ್ಯವಿರುವ ತಂತ್ರಜ್ಞಾನ ಮತ್ತು ಅದರ ಬಳಕೆಯ ವೆಚ್ಚವನ್ನು ತಿಳಿಸಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಘನ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆಯ ಗುತ್ತಿಗೆ ಹಾಗೂ ತ್ಯಾಜ್ಯ ಸಂಸ್ಕರಣೆಯ ಪದ್ಧತಿಯ ಕುರಿತು ಸ್ಥೂಲವಾಗಿ ಅಧ್ಯಯನ ನಡೆಸಿ, ವರದಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪಚ್ಚನಾಡಿ ಘಟಕದಲ್ಲಿ ಸಂಗ್ರಹವಾಗಿರುವ ತ್ಯಾಜ್ಯದಿಂದ ಪರಿಸರದ ಮೇಲಾಗುವ ಪರಿಣಾಮ ಹಾಗೂ ದುಷ್ಪರಿಣಾಮ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತೂ ಸಲಹೆ ನೀಡುವಂತೆ ತಜ್ಞರ ಸಮಿತಿಗೆ ಸೂಚಿಸಲಾಗಿದೆ. ಅಧ್ಯಯನಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಲಾಗಿದೆ.

ಜಿಲ್ಲಾಧಿಕಾರಿ ಭೇಟಿ: ನೂತನ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರು ಬುಧವಾರ ಪಚ್ಚನಾಡಿ, ಮಂದಾರದಲ್ಲಿ ಭೂಕುಸಿತ ಉಂಟಾದ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಮಂದಾರ ಸಂತ್ರಸ್ತರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಿರುವ ಗೃಹ ಮಂಡಳಿ ವಸತಿ ಸಮುಚ್ಚಯಕ್ಕೂ ಭೇಟಿನೀಡಿ, ಸಂತ್ರಸ್ತರ ಅಹವಾಲು ಆಲಿಸಿದರು. ಸಂತ್ರಸ್ತರಿಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.

ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿಯವರು, ಪಚ್ಚನಾಡಿ– ಮಂದಾರದ ಸಮಸ್ಯೆ ಕುರಿತು ಎರಡು ರೀತಿಯ ಯೋಜನೆ ರೂಪಿಸಬೇಕು. ಪಚ್ಚನಾಡಿಯಲ್ಲಿ ಸಂಗ್ರಹವಾಗಿರುವ ಘನ ತ್ಯಾಜ್ಯದ ವಿಲೇವಾರಿ ಮಾಡುವ ಕುರಿತು ವಿಸ್ತ್ರತ ಯೋಜನೆ ರೂಪಿಸಬೇಕು. ಮಂದಾರ ಸಂತ್ರಸ್ತರಿಗೆ ಪುನರ್ವಸತಿ ಸೇರಿದಂತೆ ಅಗತ್ಯ ಪರಿಹಾರ ಒದಗಿಸುವ ಬಗ್ಗೆಯೂ ಸಮಗ್ರ ವರದಿ ಸಲ್ಲಿಸಬೇಕು. ವರದಿಗಳು ಲಭ್ಯವಾದ ಬಳಿಕ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮಹಾನಗರಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್, ಜಂಟಿ ಆಯುಕ್ತೆ ಗಾಯತ್ರಿ ನಾಯಕ್, ಪರಿಸರ ಎಂಜಿನಿಯರ್‌ ಮಧು ಇದ್ದರು.

ಪ್ರತಿಕ್ರಿಯಿಸಿ (+)