ಬುಧವಾರ, ನವೆಂಬರ್ 13, 2019
28 °C
ಕ್ಯಾನ್ಸರ್ ತಜ್ಞ ಡಾ. ವಿವೇಕ್ ಶೆಟ್ಟಿ ಎಚ್ಚರಿಕೆ

ತಂಬಾಕು ಸೇವನೆಯಿಂದ ಬದುಕು ಹಾಳು: ಡಾ.ಶೆಟ್ಟಿ

Published:
Updated:
Prajavani

ಬೆಂಗಳೂರು: ‘ತಂಬಾಕು ಉತ್ಪನ್ನಗಳನ್ನು ನಿರಂತರವಾಗಿ ಸೇವಿಸುವುದರಿಂದ ವ್ಯಕ್ತಿಯು ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ತುತ್ತಾಗಿ, ತನ್ನ ಬದುಕನ್ನೇ ಹಾಳು ಮಾಡಿಕೊಳ್ಳಬೇಕಾಗುತ್ತದೆ’ ಎಂದು ಕ್ಯಾನ್ಸರ್ ತಜ್ಞ ಡಾ. ವಿವೇಕ್ ಶೆಟ್ಟಿ ಎಚ್ಚರಿಸಿದರು. 

ರಾಜ್ಯ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ನಗರದಲ್ಲಿ ಬುಧವಾರ ಆಯೋಜಿಸಿದ್ದ ತಂಬಾಕು ನಿಯಂತ್ರಣ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

‘ತಂಬಾಕು ಉತ್ಪನ್ನಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ಜತೆಗೆ ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ರೋಗಗಳು ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇಂತಹ ಗಂಭೀರ ಕಾಯಿಲೆಗಳಿಗೆ ಯುವ ಜನತೆಯೇ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಇದರಿಂದ ದೇಶಕ್ಕೆ ಕೂಡಾ ನಷ್ಟವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್, ‘ತಂಬಾಕು ಉತ್ಪನ್ನಗಳ ತಯಾರಿಕೆಗೆ ಅವಕಾಶ ನೀಡಿ, ಅದನ್ನು ಬಳಸಬೇಡಿ ಎಂದು ಜನರಲ್ಲಿ ಅರಿವು ಮೂಡಿಸುವುದು ಸಮಂಜಸವಲ್ಲ. ಕಾನೂನಿನ ಮೂಲಕ ತಂಬಾಕು ಉತ್ಪನ್ನಗಳನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ತಂಬಾಕು ಸೇವನೆಯಿಂದ ಕ್ಯಾನ್ಸರ್‌ಗೆ ಒಳಗಾದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ತಂಬಾಕು ಹಾಗೂ ಸಂಬಂಧಿತ ಇತರೆ ಉತ್ಪನ್ನಗಳನ್ನು ಬಳಸುವುದಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದರು.

ಪ್ರತಿಕ್ರಿಯಿಸಿ (+)