ಸೋಮವಾರ, ಅಕ್ಟೋಬರ್ 21, 2019
22 °C
ಕೋಳ್ಯೂರು: ಸನ್ಮಾನ ಸ್ವೀಕರಿಸಿದ ಕುಂಬ್ಳೆ ಸುಂದರರಾವ್

ಬದುಕಿಗೆ ಅರ್ಥ ತುಂಬಿದ ಯಕ್ಷಗಾನ

Published:
Updated:
Prajavani

ಮಂಗಳೂರು: 'ಯಕ್ಷಗಾನ ತನ್ನ ಬದುಕಿಗೆ ಅರ್ಥ ತುಂಬಿದೆ. ಕಲಾಭಿಮಾನಿಗಳ ನಿರಂತರ ಪ್ರೋತ್ಸಾಹದಿಂದ ಎಲ್ಲ ಬಗೆಯ ಸ್ಥಾನಮಾನಗಳನ್ನು ಪಡೆದ ಧನ್ಯತೆ ಇದೆ ಎಂದು ಕುಂಬ್ಳೆ ಸುಂದರ ರಾವ್‌ ಹೇಳಿದರು.

ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜರುಗಿದ ಯಕ್ಷಗಾನ ನವಾಹ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ‘ಯಕ್ಷಗಾನ ವಾಚಿಕಾಭಿನಯದಲ್ಲಿ ಸಿದ್ಧಿಯ ಶಿಖರವೇರಿದ, ವಿರಳ ಪಂಕ್ತಿಯ ಕಲಾವಿದರಲ್ಲಿ ಕುಂಬ್ಳೆ ಸುಂದರರಾಯರು ಪ್ರಮುಖರು. ಅವರು ಯಕ್ಷರಂಗದಲ್ಲಿ ಕನ್ನಡದ ನುಡಿ ಗಾರುಡಿಗರಾಗಿ ಕುಂಬಳೆ ಸೀಮೆಗೆ ಹೆಸರು ತಂದವರು’ ಎಂದು ಹೇಳಿದರು.

'ಆಟ-ಕೂಟಗಳ ಮೇರು ಕಲಾವಿದರಾಗಿ ಅರ್ಧಶತಮಾನ ದುಡಿದ ಕುಂಬ್ಳೆಯವರು ಪ್ರಖರ ವಾಗ್ಮಿಯಾಗಿ ಧಾರ್ಮಿಕ, ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡವರು. ಸುರತ್ಕಲ್ ಕ್ಷೇತ್ರದ ಶಾಸಕರಾಗಿ, ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ, ಸಂಸ್ಕಾರ ಭಾರತಿಯ ರಾಜ್ಯಾಧ್ಯಕ್ಷರಾಗಿ ವಿವಿಧ ಆಯಾಮಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. 85ರ ಇಳಿವಯಸ್ಸಿನಲ್ಲಿಯೂ ಅವರು ಯಕ್ಷಗಾನ ತಾಳಮದ್ದಳೆಗಳಲ್ಲಿ ಸಕ್ರಿಯರು’ ಎಂದು ತಿಳಿಸಿದರು.

ಕೋಳ್ಯೂರು ಶ್ರೀ ಮಹಾಗಣಪತಿ ಶಂಕರನಾರಾಯಣ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ವತಿಯಿಂದ ಕುಂಬ್ಳೆ ಸುಂದರ ರಾವ್ ಅವರನ್ನು ಶಾಲು, ಸನ್ಮಾನ ಫಲಕ ಮತ್ತು ನಿಧಿ ಸಮರ್ಪಣೆ ಮಾಡಿ ಸನ್ಮಾನಿಸಲಾಯಿತು.

ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮುರಳೀಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕೊಡ್ಲಮೊಗರು ಶ್ರೀ ವಾಣಿ ವಿಜಯ ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ತಿರುಮಲೇಶ್ವರ ಭಟ್ ಕನಕೂರು, ಮೀಂಜ ಗ್ರಾಮಾಧಿಕಾರಿ ಕಿರಣ್ ಕುಮಾರ್ ಶೆಟ್ಟಿ, ಕಲಾ ಸಂಘಟಕ ಸತೀಶ್ ಅಡಪ್ಪ ಸಂಕಬೈಲ್, ಕುಂಪಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ವಿಶ್ವನಾಥ ಎಂ.ಕೆ., ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಮೊಕ್ತೇಸರ ಕೃಷ್ಣಕುಮಾರ್ ಭಟ್ ಉತ್ತಾರಕೊಡಂಗೆ, ಕಾರ್ಯನಿರ್ವಹಣಾಧಿಕಾರಿ ಉಮೇಶ್ ಮುಖ್ಯ ಅತಿಥಿಗಳಾಗಿದ್ದರು.

ಪ್ರತಿಷ್ಠಾನದ ಅಧ್ಯಕ್ಷ, ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ರವಿಶಂಕರ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗವತ ಜಿ.ಕೆ. ನಾವಡ ಯಕ್ಷಗಾನ ಪ್ರಾರ್ಥನೆ ಸಲ್ಲಿಸಿದರು. ಅವಿನಾಶ್ ಹೊಳ್ಳ ಪೆರ್ಮನಗರ ಸ್ವಾಗತಿಸಿದರು. ಗುರುರಾಜ ದೇವಾಡಿಗ ಕೋಳ್ಯೂರು ವಂದಿಸಿದರು. ದೀಕ್ಷಿತಾ ಕೋಳ್ಯೂರು ನಿರೂಪಿಸಿದರು. ಕೋಳ್ಯೂರು ಶ್ರೀಮಹಾಗಣಪತಿ ಶಂಕರನಾರಾಯಣ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ಸಂಚಾಲಕ ಕೋಳ್ಯೂರು ಭಾಸ್ಕರ ಮತ್ತು ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಅತಿಥಿಗಳನ್ನು ಗೌರವಿಸಿದರು.

ಪ್ರಸಿದ್ಧ ಹಿಮ್ಮೇಳ ಕಲಾವಿದರಿಂದ ‘ಯಕ್ಷ ಗಾನ ವೈಭವ’ ಮತ್ತು ಬಾಲ ಕಲಾವಿದರಿಂದ ‘ಶ್ರೀಕೃಷ್ಣಲೀಲೆ - ಕಂಸವಧೆ - ಬಬ್ರುವಾಹನ ಕಾಳಗ’ ಯಕ್ಷಗಾನ ಬಯಲಾಟ ಜರುಗಿತು.

Post Comments (+)