ಬುಧವಾರ, ನವೆಂಬರ್ 13, 2019
21 °C
ಚಿನ್ನ, ಬೆಳ್ಳಿ ಆಭರಣ ಸೇರಿ ಒಟ್ಟು ₹ 39.53 ಲಕ್ಷ ಮೌಲ್ಯದ ವಸ್ತು ವಶ

ಕೆಲಸಕ್ಕಿದ್ದ ಮನೆಗೇ ಕನ್ನ: ದಂಪತಿ ಬಂಧನ!

Published:
Updated:

ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಗೇ ಕನ್ನ ಹಾಕಿದ ದಂಪತಿಯನ್ನು ಬಂಧಿಸಿರುವ ಆರ್‌.ಆರ್ ನಗರ ಠಾಣೆಯ ಪೊಲೀಸರು, ಆರೋಪಿಗಳಿಂದ ಚಿನ್ನ ಮತ್ತು ಬೆಳ್ಳಿ ಆಭರಣ ಸೇರಿ ಒಟ್ಟು ₹39.53 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಂಗೇರಿ ಗಾಣಕಲ್ಲು ಬಳಿಯ ನಿವಾಸಿಗಳಾದ ಆರ್‌.ವೈ. ವೆಂಕಟೇಶ್‌ (35) ಮತ್ತು ಆತನ ಪತ್ನಿ ಚಂದ್ರಮ್ಮ (26) ಬಂಧಿತರು. ಆರೋಪಿಗಳು ಕಳವು ಮಾಡಿದ್ದ ವಿವಿಧ ಮಾದರಿಯ 773 ಗ್ರಾಂ ತೂಕದ ಚಿನ್ನಾಭರಣ, 764 ಗ್ರಾಂ ತೂಕದ ಬೆಳ್ಳಿ ಆಭರಣ, ಕಳವು ಮಾಡಿದ ಹಣದಲ್ಲಿ ಖರೀದಿಸಿದ್ದ ಕಾರು, ರಾಯಲ್‌ ಎನ್‌ಫೀಲ್ಡ್‌ ಬೈಕ್‌, ‌‌‌ವಾಷಿಂಗ್‌ ಮೆಷಿನ್‌, ಗೀಸರ್‌, ನಾಲ್ಕು ಮೊಬೈಲ್‌ ಜಪ್ತಿ ಮಾಡಲಾಗಿದೆ.

ಆರ್.ಆರ್. ನಗರದಲ್ಲಿರುವ ಸೆಂಚುರಿ ಇಂಡಸ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿ ಶಶಿರೇಖಾ ಎಂಬುವರು ವರಮಹಾಲಕ್ಷ್ಮಿ ಪೂಜೆ ದಿನ ಧರಿಸಲು ಆಭರಣಗಳಿಗೆ ಹುಡುಕಾಡಿದಾಗ, ಮನೆಯಲ್ಲಿದ್ದ 1,293 ಗ್ರಾಂ ಚಿನ್ನಾಭರಣ ಮತ್ತು ₹ 10 ಲಕ್ಷ ಕಳವು ಆಗಿರುವ ಬಗ್ಗೆ ಗೊತ್ತಾಗಿದೆ. ಈ ಬಗ್ಗೆ ಅವರು ಸೆ. 9ರಂದು ರಾಜರಾಜೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು. ‘ಮನೆ ಕೆಲಸಕ್ಕಿದ್ದ ಚಂದ್ರಮ್ಮ ಕಳವು ಮಾಡಿರುವ ಬಗ್ಗೆ ಬಲವಾದ ಶಂಕೆಯಿದೆ’ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಚಂದ್ರಮ್ಮ ಮತ್ತು ಆಕೆಯ ಗಂಡನನ್ನು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿರುವುದು ಬಯಲಾಗಿದೆ.

ಪ್ರತಿಕ್ರಿಯಿಸಿ (+)