ಸೋಮವಾರ, ಜನವರಿ 20, 2020
19 °C

ಪ್ರಥಮ ಘಟಿಕೋತ್ಸವ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಇಂದು (ಜ.28) ತನ್ನ ಮೊದಲ ಘಟಿಕೋತ್ಸವ ಆಚರಿಸುತ್ತಿದೆ. ಭಾರತ ಸರ್ಕಾರ 2009ರಲ್ಲಿ ಸ್ಥಾಪಿಸಿರುವ 16 ಕೇಂದ್ರೀಯ ವಿಶ್ವವಿದ್ಯಾಲಗಳ ಪೈಕಿ ಗುಲ್ಬರ್ಗದಲ್ಲಿ ಮಾರ್ಚ್ 1, 2009ರಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಒಂದು.ಉನ್ನತ ಶಿಕ್ಷಣದ ಪ್ರವೇಶಾವಕಾಶ ಶೇ 11ಕ್ಕಿಂತ ಕಡಿಮೆಯಿರುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ 2020ರಷ್ಟೊತ್ತಿಗಾಗಲೇ ಉನ್ನತ ಶಿಕ್ಷಣದ ನೋಂದಣಿ ಅನುಪಾತ ಶೇ 21ಕ್ಕೆ ಬರಬೇಕು ಎಂಬ ಕೇಂದ್ರ ಸರ್ಕಾರದ ಆಶಯದೊಂದಿಗೆ ಆರಂಭವಾಗಿರುವ ಕರ್ನಾಟಕದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯ ಇದಾಗಿದೆ. ಅದು ಹಿಂದುಳಿದ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಉತ್ತಮ ಮತ್ತು ಉನ್ನತ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿದೆ. ಕನ್ನಡ, ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಮನಶಾಸ್ತ್ರ, ಭೂಗೋಳ, ವಾಣಿಜ್ಯ ಶಾಸ್ತ್ರ ಮುಂತಾದ ಕೋರ್ಸ್‌ಗಳ ಜೊತೆಯಲ್ಲಿ ಆಯ್ಕೆಯಾಧಾರಿತ ಶಿಕ್ಷಣವನ್ನೂ ನೀಡಲಾಗುತ್ತಿದೆ.ಇಂಟೆಗ್ರೇಟೆಡ್ ಕೋರ್ಸ್:  ಪಿಯುಸಿ ನಂತರ 3 ವರ್ಷ ಅವಧಿಯ ಬಿ.ಎ. ಹಾಗೂ ಎರಡು ವರ್ಷ ಅವಧಿಯ ಎಂ.ಎ. ಸೇರಿ ಒಟ್ಟು ಐದು ವರ್ಷದ ಇಂಟೆಗ್ರೇಟೆಡ್ ಕೋರ್ಸ್ (ಸಂಯೋಜಕ ಪದವಿ) ಆರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ಓದಿನ ಬಗ್ಗೆ ಭದ್ರ ಬುನಾದಿ ನಿರ್ಮಿಸುತ್ತಿದೆ. ಸಾಂಪ್ರದಾಯಿಕ ಮಾದರಿಯನ್ನು ನವೀಕರಿಸಿ ಇನ್ನೂ ಅತ್ಯಾಧುನಿಕ ಶಿಕ್ಷಣ ಕ್ರಮವನ್ನು ಅಳವಡಿಸಿಕೊಂಡಿರುವ ಈ ಕೋರ್ಸ್‌ನಲ್ಲಿ ಸಮಾಜದ ಎಲ್ಲ ಸ್ತರದ ಜ್ಞಾನ ಒಳಗೊಂಡಿರುವ ಮೂಲ ವಿಜ್ಞಾನ, ಸಮಾಜ ವಿಜ್ಞಾನ, ಸ್ಪೋಕನ್ ಇಂಗ್ಲಿಷ್, ಕಂಪ್ಯೂಟರ್ ಸ್ಕಿಲ್ಸ್, ಕಾಪಿ ಎಡಿಟಿಂಗ್, ಬರವಣಿಗೆಯ ವಿವಿಧ ಮಾದರಿ ಹೀಗೆ ಬಹು ಆಯ್ಕೆಯ ವಿಷಯಗಳನ್ನು ಇಲ್ಲಿ ಬೋಧಿಸಲಾಗುತ್ತದೆ.ಸ್ವಂತ ಕಟ್ಟಡ: ಆಳಂದ ತಾಲ್ಲೂಕಿನ ಕಡಗಂಚಿ ಬಳಿ 654 ಎಕರೆ ಜಾಗದಲ್ಲಿ ಕೇಂದ್ರೀಯ ವಿವಿಯ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಆಡಳಿತ ಕಚೇರಿ ಕಟ್ಟಡ, ಕುಲಪತಿ ಮತ್ತು ಸಮ ಕುಲಪತಿಗಳ ಕಟ್ಟಡ ಕಾಮಗಾರಿ ಮುಗಿದಿದೆ. ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡ ಕಾಮಗಾರಿಗಳು ಆರಂಭವಾಗಿವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕಡಗಂಚಿಯ ಸ್ವತಂತ್ರ ಕಟ್ಟಡದಲ್ಲೇ ತರಗತಿಗಳು ಆರಂಭವಾಗಲಿವೆ ಎಂದು ಕುಲಪತಿ ಎ.ಎಂ. ಪಠಾಣ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

 

ಪ್ರಥಮ ಘಟಿಕೋತ್ಸವ: ಎಂ.ಎ. ಇಂಗ್ಲಿಷ್ 25, ಇಂಗ್ಲಿಷ್ ಎಂಫಿಲ್ 9, ಅರ್ಥಶಾಸ್ತ್ರ ಎಂಫಿಲ್ 2, ಮನಶಾಸ್ತ್ರ ಎಂಫಿಲ್ 05 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಿದ್ದು, ಎಂ.ಎ. ಇಂಗ್ಲಿಷ್‌ನಲ್ಲಿ ಅತಿಹೆಚ್ಚು ಅಂಕ ಪಡೆದ  ರತ್ನಾಬಾಯಿ ಪಾಟೀಲ ಅವರಿಗೆ ಚಿನ್ನದ ಪದಕ, ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ, ವಿಜ್ಞಾನಿ ಪ್ರೊ. ಗೋವರ್ಧನ ಮೆಹ್ತಾ ಹಾಗೂ ತಂತ್ರಜ್ಞಾನಿ ನಂದನ ನಿಲೇಕಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ.ಹಲವಾರು ಹೊಸ ಹೆಜ್ಜೆಗಳನ್ನು ಇಡುವ ಮೂಲಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಈ ಭಾಗದ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸುತ್ತಿದೆ.

 

ಪ್ರತಿಕ್ರಿಯಿಸಿ (+)