ಬೆಂಬಲ ಬೆಲೆ: ತೊಗರಿ ಕೇಂದ್ರಕ್ಕೆ ಬೀಗ

7

ಬೆಂಬಲ ಬೆಲೆ: ತೊಗರಿ ಕೇಂದ್ರಕ್ಕೆ ಬೀಗ

Published:
Updated:

ಗುಲ್ಬರ್ಗ: ತೊಗರಿ ಖರೀದಿ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಮತ್ತು ವಾರದೊಳಗೆ ಮಾರುಕಟ್ಟೆ ಪ್ರವೇಶಿಸಿ ಕ್ವಿಂಟಲ್‌ಗೆ 4,000 ರೂಪಾಯಿಯಂತೆ ತೊಗರಿ ಖರೀದಿಸಬೇಕು ಎಂದು ಆಗ್ರಹಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಸೋಮವಾರ ಗಂಜ್‌ನ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.ಮಾರುಕಟ್ಟೆ ಮಧ್ಯೆ ಪ್ರವೇಶಿಸಿ ಕ್ವಿಂಟಲ್‌ಗೆ 4,000 ರೂಪಾಯಿಯಂತೆ ತೊಗರಿ ಖರೀದಿಸಲಾಗುವುದು ಎಂದು ಕೃಷಿ ಮಂತ್ರಿ ಉಮೇಶ ಕತ್ತಿ ಜನವರಿ 23ರಂದು ಹಾಗೂ ಜಿಲ್ಲಾ ಉಸ್ತುವಾರಿ ಬಸವರಾಜ ಬೊಮ್ಮಾಯಿ ಜ.27ರಂದು ಹೇಳಿಕೆ ನೀಡಿದ್ದಾರೆ. ರೈತರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ. ಆದರೆ ಈ ತನಕ ಖರೀದಿ ಆರಂಭಿಸದೇ ರೈತರಿಗೆ ಮೋಸ ಮಾಡಿದ್ದಾರೆ ಎಂದು ವೇದಿಕೆ ಸಂಸ್ಥಾಪಕ ಅಧ್ಯಕ್ಷ ಅರುಣಕುಮಾರ ಎಸ್. ಪಾಟೀಲ ಆರೋಪಿಸಿದರು. ಈ ಭಾಗದ ರೈತರ ಪ್ರಮುಖ ಬೆಳೆಯಾದ ತೊಗರಿ ಬೆಲೆಯು ಮಾರುಕಟ್ಟೆಯಲ್ಲಿ ದಯನೀಯವಾಗಿ ಕುಸಿದು ಬಿದ್ದಿದೆ. ರೈತರ ಕಷ್ಟ, ನೋವುಗಳು ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ರೈತ ಜೀವನದ ಜೊತೆ ಸರ್ಕಾರ ಕಣ್ಣುಮುಚ್ಚಾಲೆ ಆಡುತ್ತಿದೆ ಎಂದು ಆರೋಪಿಸಿದ ಅವರು, ವಾರದೊಳಗೆ ಸರ್ಕಾರ ಖರೀದಿ ಆರಂಭಿಸದಿದ್ದಲ್ಲಿ ಗುಲ್ಬರ್ಗ ಬಂದ್‌ಗೆ ಕರೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಬರೆದ ಪತ್ರದಲ್ಲಿ ಎಚ್ಚರಿಸಿದ್ದಾರೆ.ಜಗನ್ನಾಥ ಪಟ್ಟಣಶೆಟ್ಟಿ, ಸಚಿನ್ ಎಸ್. ಫರಹತಾಬಾದ್, ಸತೀಶ ಫರಹತಾಬಾದ್, ಶರಣು ಬಾನೆಕರ್, ಕಾಶಿನಾಥ, ಸ್ಯಾಂಡಿ, ಶರಣು ಮಡಿವಾಳ, ಉದಯಕುಮಾರ, ವಾಜೀದ್ ಖಾನ್, ಆಲೀಂಖಾನ್, ಶ್ರೀಕಾಂತ ಆಲೂರ, ಶ್ರೀಕಾಂತ ಜಾಧವ, ಶರಣು ಸರಡಗಿ, ಲಕ್ಷ್ಮಣ ಶಿರವಾಳ, ವಿರೂಪಾಕ್ಷಯ್ಯಸ್ವಾಮಿ ಮತ್ತಿತರರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry