ಗುರುವಾರ , ಜೂನ್ 24, 2021
23 °C

ಅಪಾಯ ತರದಿರಲಿ ಬಣ್ಣದೋಕುಳಿ

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಅಪಾಯ ತರದಿರಲಿ ಬಣ್ಣದೋಕುಳಿ

ಗುಲ್ಬರ್ಗ: ಪರಸ್ಪರ ಬಣ್ಣ ಎರಚುವ ಸಂಭ್ರಮದ ಬಣ್ಣದೋಕುಳಿ ಮತ್ತೆ ಬಂದಿದೆ. ಬೆಳಿಗ್ಗೆಯಿಂದಲೇ ಡ್ರಮ್‌ಗಳಲ್ಲಿ ತರಹೇವಾರಿ ಬಣ್ಣ ತುಂಬಿಟ್ಟುಕೊಂಡು, ಸ್ನೇಹಿತರು, ಬಂಧು-ಬಾಂಧವರ ಮೇಲೆ ಸುರಿದು ಕೇಕೆ ಹಾಕುವ ಸಮಯ...!... ಆದರೆ ಹುಷಾರು! ಸಂತಸ ತರುವ ಬಣ್ಣಗಳು ರೋಗಗಳಿಗೂ ಕಾರಣವಾಗಬಲ್ಲವು!

ಬಣ್ಣಗಳ ಉತ್ಪಾದನೆಯಲ್ಲಿ ಬಳಸುವ ಅಪಾಯಕಾರಿ ರಾಸಾಯನಿಕಗಳು ಹಲವು ಬಗೆಯ ರೋಗ ಉಂಟುಮಾಡುತ್ತವೆ. ಕೇವಲ ಚರ್ಮವಷ್ಟೇ ಅಲ್ಲ; ಶ್ವಾಸಕೋಶ, ಕಣ್ಣು ಇತ್ಯಾದಿ ಅಂಗಗಳಿಗೂ ಧಕ್ಕೆ ಉಂಟು ಮಾಡುತ್ತವೆ.ಹೋಳಿ ಹಬ್ಬ ಬರುತ್ತಿದ್ದಂತೆ ಬಣ್ಣಗಳ ಉತ್ಪಾದನೆ ಹಲವು ಪಟ್ಟು ಹೆಚ್ಚಾಗುತ್ತದೆ. ಅದರಲ್ಲೂ ದೇಶದ ಬಹುತೇಕ ಕಡೆ ಬಣ್ಣದೋಕುಳಿ ಆಡುವುದರಿಂದ, ಬಣ್ಣದ ಪುಡಿಗಳಿಗೆ ಅಧಿಕ ಬೇಡಿಕೆ ಸೃಷ್ಟಿಯಾಗುತ್ತದೆ. ಅಪಾಯಕಾರಿ ರಾಸಾಯನಿಕ ಮಿಶ್ರಣವುಳ್ಳ ಬಣ್ಣದಪುಡಿ ಉತ್ಪಾದನೆ ಅಥವಾ ಬಳಕೆಗೆ ಕಠಿಣ ಕಾನೂನು ಇಲ್ಲದೇ ಇರುವುದರಿಂದ, ಸುರಕ್ಷಿತ ಬಣ್ಣದ ಉತ್ಪಾದನೆ ದೂರವೇ ಉಳಿಯುತ್ತದೆ.ಬಣ್ಣ ಆಡುವ ಮುನ್ನ:

ಹಾಗೆಂದು, ಬಣ್ಣದೋಕುಳಿ ಆಡಬೇಡಿ ಎನ್ನುವದಿಲ್ಲ. ಕೆಲವು ಸುರಕ್ಷತಾ ವಿಧಾನಗಳನ್ನು ಅನುಸರಿಸಿದರೆ, ಇದರಿಂದೇನೂ ತೊಂದರೆಯಾಗದು ಎಂದು ಸಲಹೆ ಮಾಡುತ್ತಾರೆ, ವೈದ್ಯರು. ನಗರದ ಖ್ಯಾತ ಚರ್ಮರೋಗ ತಜ್ಞ ಡಾ. ಪಿ.ಎಂ.ಬಿರಾದಾರ ಅವರು `ಸುರಕ್ಷಿತ ಹೋಳಿ~ಗೆ ಕೆಲವು ಸಹಲೆ ನೀಡುತ್ತಾರೆ. ಅವು ಹೀಗಿವೆ:* ಬಣ್ಣದೋಕುಳಿಯಲ್ಲಿ ಅತ್ಯಂತ ಹೆಚ್ಚು ಅಪಾಯಕ್ಕೆ ಈಡಾಗುವ ಅಂಗ- ಕಣ್ಣು. ಹಾಗಾಗಿ, ಯಾವುದೇ ಕಾರಣಕ್ಕೂ ಕಣ್ಣಿನೊಳಗೆ ನೇರವಾಗಿ ಬಣ್ಣದ ಪುಡಿ ಬೀಳದಂತೆ ಎಚ್ಚರವಹಿಸಿ.* ಸಾಧ್ಯವಾದಷ್ಟೂ ದೇಹದ ಎಲ್ಲ ಭಾಗ ಬಟ್ಟೆಯಿಂದ ಆವೃತವಾಗುವಂತೆ ನೋಡಿಕೊಳ್ಳಿ.* ತಲೆಗೂದಲಿಗೆ ಸಾಕಷ್ಟು ಎಣ್ಣೆ ಹಚ್ಚಿಕೊಳ್ಳಿ. ಇದರಿಂದ ಬಣ್ಣ ಅಲ್ಲಿ ನಿಲ್ಲದೇ ಜಾರಿ ಹೋಗುತ್ತದೆ.* ಅಧಿಕ ರಾಸಾಯನಿಕ ಅಂಶ ಇರುವ ಹಳದಿ, ಹಸಿರು ಅಥವಾ ಕಪ್ಪು ಬಣ್ಣಕ್ಕಿಂತ, ಕಡಿಮೆ ರಾಸಾಯನಿಕ ಹೊಂದಿರುವ ಕೆಂಪು ಹಾಗೂ ಗುಲಾಬಿ ಬಣ್ಣ ಬಳಸಿ.* ಶರೀರಕ್ಕೆ ಎಣ್ಣೆ ಲೇಪಿಸಿ, ಕೆಲವು ನಿಮಿಷಗಳ ಕಾಲ ಬಿಟ್ಟರೆ ಚರ್ಮ ಅದನ್ನು ಹೀರುತ್ತದೆ. ನಂತರ ಸಾಧ್ಯವಿದ್ದರೆ ವಾಟರ್‌ಪ್ರೂಫ್ ಸನ್‌ಸ್ಕ್ರೀನ್ ಲೇಪಿಸಿ. ಇದರಿಂದ ರಾಸಾಯನಿಕಗಳು ಚರ್ಮಕ್ಕೆ ಹಾನಿ ಮಾಡುವ ಸಾಧ್ಯತೆ ಕಡಿಮೆ.ಬಣ್ಣದೋಕುಳಿ ಬಳಿಕ:

ಬಣ್ಣದೋಕುಳಿ ಆಡಿದ ಎರಡು- ಮೂರು ದಿನಗಳ ಬಳಿಕ ಚರ್ಮರೋಗ ತಜ್ಞರಲ್ಲಿಗೆ ಬರುವವರ ಪೈಕಿ ಹಲವರು ಅಲರ್ಜಿ ಸಂಬಂಧಿ ರೋಗಕ್ಕೆ ಈಡಾಗಿರುತ್ತಾರೆ. ಇದು ಬಣ್ಣದೋಕುಳಿ ಪ್ರಭಾವ! ಸ್ವಲ್ಪ ಮುಂಜಾಗ್ರತೆ ವಹಿಸಿದರೆ, ಅಲರ್ಜಿ ಸಂಬಂಧಿ ರೋಗಗಳನ್ನು ದೂರವಿಡಬಹುದು ಎಂಬುದು ವೈದ್ಯರ ಅಭಿಮತ.* ಚರ್ಮಕ್ಕೆ ಅಂಟಿದ ಬಣ್ಣ ತೆಗೆಯಲು, ಮಾಯಿಶ್ಚರೈಸರ್ ಸೋಪಿನಲ್ಲಿ ಬೆಚ್ಚಗಿನ ನೀರಿನೊಂದಿಗೆ ತಿಕ್ಕಿ. ಒರಟು ಬ್ರಶ್ ಬಳಸಬೇಡಿ.* ಯಾವುದೇ ಕಾರಣಕ್ಕೂ ಪೆಟ್ರೋಲ್, ಸೀಮೆ ಎಣ್ಣೆ ಬಳಸಲೇ ಬೇಡಿ. ಇವು ಚರ್ಮಕ್ಕೆ ಇನ್ನಷ್ಟು ಹಾನಿ ಉಂಟು ಮಾಡುತ್ತವೆ.* ಮೊದಲು ನಿಂಬೆಹಣ್ಣಿನ ಸಿಪ್ಪೆಯಿಂದ, ನಂತರ ಗೋಧಿ ಹಿಟ್ಟು ಹಾಗೂ ಕಡಲೆ ಎಣ್ಣೆಯಿಂದ ಹದವಾಗಿ ಉಜ್ಜಿದರೆ ಚರ್ಮ ಸಾಮಾನ್ಯ ಸ್ಥಿತಿಗೆ ಬರುತ್ತದೆ.ಆರೋಗ್ಯದ ಕುರಿತು ಜಾಗೃತಿ ಮೂಡುತ್ತಿರುವ ಹಿನ್ನೆಲೆಯಲ್ಲಿ, ಕೆಲವು ಪರಿಸರಸೇವಾಸಕ್ತ ಸಂಸ್ಥೆಗಳು `ಸುರಕ್ಷಿತ ಹೋಳಿ~ ಪರಿಕಲ್ಪನೆ ರೂಪಿಸಿವೆ. ಆರೋಗ್ಯಕ್ಕೆ ಮಾರಕ ಆಗದ ವಿಧಾನಗಳನ್ನು ಜನಪ್ರಿಯಗೊಳಿಸುತ್ತಿವೆ.ಬಣ್ಣದೋಕುಳಿ ಸಂಭ್ರಮಕ್ಕೆ ಇನ್ನಷ್ಟು ಮೆರುಗು ಬರಲು, ಪರಿಸರ ಸ್ನೇಹಿ ಬಣ್ಣ ಬಳಸಬಹುದು. ಇಲ್ಲವೇ ಮನೆಯಲ್ಲೇ ಬಣ್ಣದ ಪುಡಿಗಳನ್ನು ತಯಾರಿಸಿಕೊಂಡು, ಆಡಬಹುದು. ಇದರಿಂದ ಪರಿಸರ- ಆರೋಗ್ಯಕ್ಕೂ ಧಕ್ಕೆಯಿಲ್ಲ; ಮನೋರಂಜನೆಯೂ ಕಡಿಮೆಯಾಗುವುದಿಲ್ಲ.ಏನೇನಿರುತ್ತವೆ?

ಬಣ್ಣದ ಪುಡಿ ತಯಾರಿಕೆಯಲ್ಲಿ ಅಪಾಯಕಾರಿ ರಾಸಾಯನಿಕ ಬಳಕೆಯಾಗುತ್ತವೆ. ಅವುಗಳಲ್ಲಿ, ಲೆಡ್ ಆಕ್ಸೈಡ್, ಕಾಪರ್ ಸಲ್ಫೇಟ್, ಅಲ್ಯೂಮಿನಿಯಂ ಬ್ರೊಮೈಡ್, ಕ್ರೋಮಿಯಂ ಅಯೊಡೈಡ್, ಮರ್ಕ್ಯುರಿ ಸಲ್ಫೇಟ್ ಸೇರಿವೆ.ಹೆಚ್ಚು ಹೊತ್ತು ಬಣ್ಣ ಆಡಿದರೆ, ಅದರಲ್ಲಿನ ಅಂಶಗಳು ಚರ್ಮ ಹಾಗೂ ಶ್ವಾಸಕೋಶಕ್ಕೆ ಧಕ್ಕೆ ತಂದೊಡ್ಡಬಲ್ಲವು ಎಂಬುದು ವೈದ್ಯರ ಮುನ್ನೆಚ್ಚರಿಕೆ. ಇದರ ಬದಲಿಗೆ ಪರಿಸರ ್ನüೇಹಿ ಬ್ಣü ಬಳಸುವುದು ಒ್ಳüೆಯದು ಎಂಬುದು ಅವರ ಕಿವಿಮಾತು.

ಮನೆಯಲ್ಲೇ ತಯಾರಿಸಿ..!

`ಮಾರುಕಟ್ಟೆಯಲ್ಲಿ ಸಿಗುವ ಬಣ್ಣದಲ್ಲಿ ಏನೇನಿರುತ್ತದೆಯೋ?~ ಎಂಬ ಹೆದರಿಕೆಯೇ? ಹಾಗಿದ್ದರೆ ನಿಮಗೆ ಬೇಕೆನಿಸುವ ಬಣ್ಣದ ನೀರು ತಯಾರಿಸಿಕೊಳ್ಳುವ ಬಗೆ ಹೇಗೆ? ಕೆಲವು `ಟಿಪ್ಸ್~ ಇಲ್ಲಿವೆ:

ಹಳದಿ: ಅರಿಷಿಣ ಪುಡಿಯನ್ನು ಕಡಲೆ ಹಿಟ್ಟಿನ ಜತೆ ಬೆರೆಸಿ.

 ಸೇವಂತಿಗೆ ಹೂವನ್ನು ನೀರಿನಲ್ಲಿ ಕುದಿಸಿ.

 ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ರಾತ್ರಿಯಿಡೀ ನೀರಿನಲ್ಲಿ   ನೆನೆಸಿಟ್ಟರೆ, ಬೆಳಿಗ್ಗೆ ಹೊತ್ತಿಗೆ ಹಳದಿ ನೀರು ಸಿದ್ಧ.

ನೀಲಿ: ಬೀಟ್‌ರೂಟ್ ಸಣ್ಣಗೆ ಕತ್ತರಿಸಿ, ನೀರಿನಲ್ಲಿ ಕೆಲವು ಗಂಟೆ ನೆನೆಸಿಡಿ.

ಕೆಂಪು: ಶ್ರೀಗಂಧದ ಪುಡಿಯನ್ನು ಕಡಲೆ ಹಿಟ್ಟಿನೊಂದಿಗೆ ಮಿಶ್ರ ಮಾಡಿ,   ನೀರಿಗೆ ಬೆರೆಸಿ.

 ದಾಸವಾಳ ಹೂವುಗಳ ಪಕಳೆಗಳನ್ನು ನೆರಳಿನಲ್ಲಿ ಒಣಸಿ, ಪುಡಿ   ಮಾಡಿ ನೀರಿನೊಂದಿಗೆ ಬೆರೆಸಿ.

 ಗಜ್ಜರಿ ಅಥವಾ ಟೊಮ್ಯಾಟೊಗಳನ್ನು ಗ್ರೈಂಡರ್‌ನಲ್ಲಿ ರುಬ್ಬಿ,   ಸೋಸಿ ಬಣ್ಣ ತಯಾರಿಸಬಹುದು.

ಹಸಿರು: ಮೆಹಂದಿ ಪುಡಿ ಕಡಲೆ ಹಿಟ್ಟಿನೊಂದಿಗೆ ಬೆರೆಸಿ, ನೀರಿಗೆ ಹಾಕಿ.

 ಗೋಧಿ ಹುಲ್ಲನ್ನು ಮಿಕ್ಸರ್‌ನಲ್ಲಿ ಹಾಕಿ, ರುಬ್ಬಿ ಸೋಸಿ ನೀರಿಗೆ   ಬೆರೆಸಿದರೂ ಹಸಿರು ಬಣ್ಣವಾಗುತ್ತದೆ.

ನೇರಳೆ: ಬಕೆಟ್ ನೀರಿಗೆ ಅತ್ಯಲ್ಪ `ಪೊಟ್ಯಾಶಿಯಂ ಪರಮಾಂಗನೇಟ್~   ದ್ರಾವಣ ಹಾಕಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.