ಸೋಮವಾರ, ಜೂನ್ 21, 2021
28 °C

ಮೆಟ್ರಿಕ್ ಫೇಲಾಗಿದ್ದ ವೀರೇಂದ್ರ ಪಾಟೀಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂಚೋಳಿ: ಕರ್ನಾಟಕ ಕಂಡ ಅಪರೂಪದ ರಾಜಕಾರಣಿ, ನಿಷ್ಠುರವಾದಿ ಆಡಳಿತಗಾರ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರು ಅಗಲಿ ಇಂದಿಗೆ 15 ವರ್ಷಗಳಾದವು.ಹೂಡದಳ್ಳಿಯ ರೈತ ಕುಟುಂಬದಲ್ಲಿ 1924 ಫೆ. 28ರಂದು ತಾಯಿ ಚಿನ್ನಮ್ಮ, ತಂದೆ ಬಸಪ್ಪ ಗೌಡ ದಂಪತಿಯ ಎರಡನೇ ಮಗನಾಗಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ತಂದೆಯನ್ನು ಕಳೆದುಕೊಂಡ ಬಾಲಕ ವೀರೇಂದ್ರ ಹೂಡದಳ್ಳಿ, ಚಿಂಚೋಳಿ. ಹೈದರಾಬಾದಿನಲ್ಲಿ ಶಿಕ್ಷಣ ಪಡೆದಿದ್ದಾರೆ.ಜೀವನದ ಪರೀಕ್ಷೆಯಲ್ಲಿ ಸಾಕಷ್ಟು ಯಶಸ್ಸು ಕಂಡು ಉತ್ತೀರ್ಣರಾದ ಅವರು ಹೈದರಾಬಾದಿನ ವಿವೇಕ ವರ್ಧಿನಿ ಪ್ರೌಢ ಶಾಲೆಯಲ್ಲಿ (ಎಸ್‌ಎಸ್‌ಎಲ್‌ಸಿ) ಮೆಟ್ರಿಕ್‌ನಲ್ಲಿ ಅಭ್ಯಾಸ ಮಾಡುವಾಗ ಗಣಿತ ವಿಷಯದಲ್ಲಿ ಫೇಲಾಗಿದ್ದರು!.ಪರೀಕ್ಷೆಯಲ್ಲಿ ಫೇಲಾದೇವೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ವೀರೇಂದ್ರ ಪಾಟೀಲರ ಜೀವನ ಒಂದು ಪಾಠ. ಸೋಲೆ ಗೆಲುವಿನ ಸೋಪಾನ ಎನ್ನುವಂತೆ ಪರೀಕ್ಷೆಯಲ್ಲಿ ಫೇಲಾದರೂ ಕೈಕಟ್ಟಿ ಕುಳಿತುಕೊಳ್ಳದೇ ಮರು ಪ್ರಯತ್ನದಿಂದ ಪರೀಕ್ಷೆ ಬರೆದು ಪಾಸಾಗಿ ಉನ್ನತ ಹಂತಕ್ಕೆ ತಲುಪಿ ಮನೆ ಮಾತಾದರು.ಪ್ರಾಥಮಿಕ ಕನ್ನಡ, ಪ್ರೌಢ ಇಂಗ್ಲಿಷ್, ಪದವಿ ಉರ್ದುವಿನಲ್ಲಿ ಪಡೆದ ತ್ರಿಭಾಷಾಜ್ಞಾನಿಯಾದ ವೀರೇಂದ್ರರು ಗಣಿತದಲ್ಲಿ ಸ್ವಲ್ಪ ಹಿಂದೆ ಇದ್ದರು. ಎಲ್‌ಎಲ್‌ಬಿ ಪದವಿ ಪಡೆದ ನಂತರ ವಕೀಲಿ ವೃತ್ತಿ ಆಯ್ದುಕೊಂಡರು. ಆಗ ಇವರ ಬಳಿಗೆ ಕೇಸುಗಳು ಬಾರದಿದ್ದಾಗ ಅವರು ತಮ್ಮ ಗುರು ಮಹಾಗಾಂವನ ಚಂದ್ರಶೇಖರ ಪಾಟೀಲರ ಬಳಿ ತೆರಳಿ ತಮಗೆ ತಹಶೀಲ್ದಾರ ಇಲ್ಲವೇ ಯಾವುದಾದರೂ ಸರ್ಕಾರಿ ನೌಕರಿ ಕೊಡಿಸಿ ಎಂದು ಮನವಿ ಮಾಡಿದ್ದರು.ಚಂದ್ರಶೇಖರ ಪಾಟೀಲರಂತಹ ಯೋಗ್ಯರ ಮಾರ್ಗದರ್ಶನ ಮತ್ತು ತಮ್ಮ ಪರಿಶ್ರಮದಿಂದ ಮೇಲೆ ಬಂದ ವೀರೇಂದ್ರ ಪಾಟೀಲ ಮೊದಲ ಬಾರಿಗೆ ಆಳಂದ ಕ್ಷೇತ್ರದಿಂದ ಹೈದರಾಬಾದ ವಿಧಾನ ಸಭೆಗೆ ಆಯ್ಕೆಯಾಗಿ ನಂತರ ಚಿಂಚೋಳಿಯಿಂದ ನಾಲ್ಕು ಬಾರಿ ರಾಜ್ಯ ವಿಧಾನ ಸಭೆಗೆ ಹಾಗೂ ಬಾಗಲಕೋಟ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ, ಶಾಸಕ, ಸಚಿವ, ಲೋಕಸಭೆ, ರಾಜ್ಯಸಭೆ ಸದಸ್ಯರಾಗಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾದ ಹಿರಿಮೆ ಅವರಿಗಿದೆ.1968ರಲ್ಲಿ ನಿಜಲಿಂಗಪ್ಪನವರ ಉತ್ತರಾಧಿಕಾರಿಯಾಗಿ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಯಾದರು. ನಂತರ ಕವಲು ದಾರಿಯಲ್ಲಿ ಸಾಗಿ ಜನತಾ ಪಕ್ಷದಲ್ಲಿ ಗುರುತಿಸಿಕೊಂಡು ಪಕ್ಷದ ರಾಜ್ಯ ಅಧ್ಯಕ್ಷರಾದರು.

ಪುನ್ ಕಾಂಗ್ರೆಸ್ ಸೇರಿ ಕೇಂದ್ರದಲ್ಲಿ ಮಂತ್ರಿಗಳಾಗಿ, ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, ತಮ್ಮ ನೇತೃತ್ವದಲ್ಲಿ 1989ರಲ್ಲಿ ನಡೆದ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 224 ಸ್ಥಾನಗಳಲ್ಲಿ 179 ಸ್ಥಾನಗಳ ಐತಿಹಾಸಿಕ ಗೆಲುವು ತಂದುಕೊಟ್ಟು ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. ಹಲವು ನೀರಾವರಿ ಯೋಜನೆಗಳು, ರಸ್ತೆ, ವಿದ್ಯುತ್, ಕೆರೆಗಳನ್ನು ನಿರ್ಮಿಸಿದ ಪಾಟೀಲರು ದೂರದೃಷ್ಟಿಯಿಂದ ರಾಜ್ಯವನ್ನು ಮುನ್ನಡೆಸಿದ ಕೀರ್ತಿ ಹೊಂದಿದ್ದಾರೆ.1999ರ ವಿಧಾನ ಸಭೆ ಚುನಾವಣೆ ಪ್ರಚಾರದ ಸಾರಥ್ಯ ವಹಿಸಿದ್ದ ಎಸ್.ಎಂ ಕೃಷ್ಣ ವೀರೇಂದ್ರರ ಸಮಾಧಿ ಸ್ಥಳದಿಂದಲೇ ಪಾಂಚಜನ್ಯ ಯಾತ್ರೆ ಆರಂಭಿಸಿ ಕಾಂಗ್ರೆಸ್‌ಗೆ ಮತ್ತೆ ಗೆಲುವು ತಂದುಕೊಟ್ಟರು. ಅಂತೆಯೇ ಚಿಂಚೋಳಿಯ ನೆಲ ಕಾಂಗ್ರೆಸ್‌ನ ಪುಣ್ಯಭೂಮಿ ಎಂಬ ನಂಬಿಕೆಯಿದೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.