ಶುಕ್ರವಾರ, ಜೂನ್ 18, 2021
20 °C

ಸಮಾಜದಲ್ಲಿ ಸಂಘರ್ಷ ಸೃಷ್ಟಿಗೆ ಕೇಸರೀಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸಮಾಜದಲ್ಲಿ ಜಾತಿ, ಕೋಮು, ವರ್ಣ, ಜನಾಂಗ, ಧರ್ಮಗಳ ಮಧ್ಯೆ ಸಂಘರ್ಷ ಸೃಷ್ಟಿಸುವುದೇ ಶಿಕ್ಷಣದ ಕೇಸರೀಕರಣದ ಹುನ್ನಾರ ಎಂದು ಭಾರತೀಯ ಜನ ಕಲಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಸಿದ್ದನಗೌಡ ಪಾಟೀಲ ಹೇಳಿದರು.



`ಶಿಕ್ಷಣದ ಕೇಸರೀಕರಣದ ಹುನ್ನಾರಗಳು~ ಎಂಬ ವಿಷಯದ ಕುರಿತು ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (ಎಐಎಸ್‌ಎಫ್) ಕನ್ನಡಭವನದಲ್ಲಿ ಶುಕ್ರವಾರ ಆಯೋಜಿಸಿದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.



`ಪೂಜೆ ಮಾಡಿಸಿ ಪಾಸ್ ಆಗಲು ಸಾಧ್ಯವಿದ್ದರೆ, ಅರ್ಚಕರು ಐಎಎಸ್ ಮಾಡುತ್ತಿದ್ದರು~ ಎಂದು ವ್ಯಂಗ್ಯವಾಡಿದ ಅವರು, ವೈಚಾರಿಕ, ವೈಜ್ಞಾನಿಕ ಮನೋಭಾವವನ್ನು ಹತ್ತಿಕ್ಕಿ ಧಾರ್ಮಿಕ ಮೌಢ್ಯಗಳನ್ನು `ಮೌಲ್ಯ~ದ ರೂಪದಲ್ಲಿ ಬಿತ್ತುವ ಹುನ್ನಾರವನ್ನು `ಕೇಸರೀಕರಣ~ ಹೊಂದಿದೆ. ಆ ಮೂಲಕ ಆತ್ಮಸ್ಥೈರ್ಯ ಕುಂದಿಸಿ, ಮೇಲು- ಕೀಳರಿಮೆಯನ್ನು ಮೂಡಿಸಿ, ಸಮಾಜದಲ್ಲಿ ಸಂಘರ್ಷ ಸೃಷ್ಟಿಸಲಾಗುತ್ತದೆ ಎಂದರು. 



ಸುಂದರ ಭವಿಷ್ಯ ರೂಪಿಸಲು ಇತಿಹಾಸವನ್ನು ಕಲಿಯಬೇಕು ಎಂದ ಅವರು, ಟಿಪ್ಪು ಮತ್ತು ಕಿತ್ತೂರ ಚೆನ್ನಮ್ಮರ ದೇಶಭಕ್ತಿಗೆ ವಿರುದ್ಧವಾಗಿ ಗಜೇಂದ್ರಗಢದ ಹಿಂದೂ ರಾಜರು ಮತ್ತು ಹೈದರಾಬಾದ್ ನಿಜಾಮರು  ದೇಶದ್ರೋಹ ಮಾಡಿದರು. ಆದರೆ ಟಿಪ್ಪುವನ್ನು ತುಚ್ಛೀಕರಿಸುತ್ತಾರೆ ಎಂದು `ಹುನ್ನಾರ~ಗಳನ್ನು ವಿವರಿಸಿದರು.



ಶಿಕ್ಷಣವು ಕನಿಷ್ಠ 20ವರ್ಷ ಮುಂದಕ್ಕೆ ಸ್ಪಂದಿಸಬೇಕು. ಆದರೆ `ಸಂಸ್ಕೃತಿ~ಯ ವೈಭವೀಕರಣದಲ್ಲಿ  ಹಿನ್ನಡೆಸಲಾಗುತ್ತಿದೆ. ಮಾತೆ, ದೇವಿ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ವಿಧಾನ ಸೌಧದಲ್ಲಿ ನೋಡಿದ `ಮಹಿಳೆಯ ಚಿತ್ರ~, ಗೆಳೆಯನ ಹೆಂಡತಿಗೇ ಹಾಕಿದ ಕನ್ನ ಇವರು ಬೋಧಿಸುವ ಸಂಸ್ಕೃತಿಯ ಪ್ರತೀಕವೇ ಎಂದು ಪ್ರಶ್ನಿಸಿದರು.



ಎಲ್ಲ ಧರ್ಮಗಳಲ್ಲಿಯೂ ಮೌಢ್ಯಗಳನ್ನು ಬಿತ್ತಲಾಗುತ್ತದೆ. ಆದರೆ ನಾವು ವಿಶ್ವಮಾನವ ಪಥದಲ್ಲಿ ಸಾಗಬೇಕು ಎಂದರು. ಭವಿಷ್ಯತ್ತಿನ ಬಗ್ಗೆ ಚಿಂತನೆಯಿಲ್ಲದೇ, ವರ್ತಮಾನದ ನೀಚತನವನ್ನು ಮುಚ್ಚಿಡಲು ಗತವನ್ನು ವೈಭವೀಕರಿಸಲಾಗುತ್ತಿದೆ. ಇದರಲ್ಲಿ ಜನಮಾನಸ ಸೂರೆಗೊಂಡು ಅಧಿಕಾರ ಪಡೆದುಕೊಂಡು ವರ್ಣಾಶ್ರಮ ತರುವ ಹುನ್ನಾರ ಅಡಗಿದೆ ಎಂದು ಸಮುದಾಯದ ರಾಜ್ಯಾಧ್ಯಕ್ಷ ಆರ್.ಕೆ.ಹುಡಗಿ ಹೇಳಿದರು.



`ಹೊಲಸು~ ಕೆಲಸ ಮಾಡಿದ ಸಚಿವ ಉದ್ಘಾಟಿಸಿದ ಕಟ್ಟಡಕ್ಕೆ `ಅಮೃತ ಹಸ್ತ~ದಿಂದ ಉದ್ಘಾಟಿಸಲಾಯಿತು ಎಂದು ಇಂದಿನ ಕಾಲದಲ್ಲೇ ಬರೆಯುತ್ತಾರೆ. ಇನ್ನು ಇವರು ವೈಭವೀಕರಿಸುವ ಗತ, ಶಿಲಾಶಾಸನ, ಮೌಲ್ಯಗಳು ಎಷ್ಟು ಹೊಲಸಾಗಿರಬಹುದು ಎಂದು ನೀವೇ ನಿರ್ಧರಿಸಿ ಎಂದರು.



1909ರಲ್ಲಿ ಸಾವರ್ಕರ್ ಎರಡು ದೇಶಗಳ ಸಿದ್ಧಾಂತವನ್ನು ನೀಡಿದರು. ಆದರೆ ಇಂದು ಜಿನ್ನಾ, ಮೌಂಟ್ ಬ್ಯಾಟನ್‌ನಿಂದಾಗಿ ದೇಶ ಒಡೆದು ಹೋಯಿತು ಎಂದು ಧರ್ಮಗಳ ಮಧ್ಯೆ ಹುಳಿ ಹಿಂಡುತ್ತಾರೆ. ಸತ್ಯವನ್ನು ತಿರುಚುವ ಮೂಲಕ ದೇಶವನ್ನು ಒಡೆಯುವ ಕೆಲಸ ಮಾಡಬಾರದು ಎಂದರು.



ಮಹಿಳೆಯರಿಗೆ ಸ್ವಾತಂತ್ರ್ಯ ನಿರಾಕರಿಸಿದ `ಮನುಸ್ಮೃತಿ~ಯಲ್ಲಿ ಮಾನವೀಯತೆ ಎಂದು ಬರೆಯುತ್ತಾರೆ. ಅಂಬೇಡ್ಕರ್ ಪರಿನಿರ್ವಾಣ (ಡಿ.6)ದಂದು ಬಾಬರಿ ಮಸೀದಿ ಒಡೆಯುತ್ತಾರೆ. ಶಾಂತಿ ಸಾರಿದ ಬುದ್ಧನ ಪೂರ್ಣಿಮೆಯಂದು ಬಾಂಬ್ ಪ್ರಯೋಗಿಸುತ್ತಾರೆ. ಪ್ರೇಮಿಗಳು ನೆಮ್ಮದಿಯಾಗಿರುವ ದಿನವೇ ಭಗತ್ ಸಿಂಗ್ ಗಲ್ಲಿಗೇರಿಸದ ದಿನ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ವಿಚಾರಗಳನ್ನು ವೈಚಾರಿಕ- ವಿಶ್ಲೇಷಣಾತ್ಮಕ- ಚಿಂತನೆಯಿಂದ ಅರಿತುಕೊಳ್ಳಿ ಎಂದು ಎಚ್ಚರಿಸಿದರು.



ಪ್ರಾಂಶುಪಾಲ ಪ್ರೊ. ಮಹೇಶ ಕುಮಾರ ರಾಠೋಡ, ಭೀಮಾಶಂಕರ ಮಡಿಯಾಳ, ಎಐಎಸ್‌ಎಫ್ ಸಂಚಾಲಕ ಎಚ್.ಎಂ.ಸಂತೋಷ, ರಾಜೇಂದ್ರ ರಾಜವಾಳ ಮತ್ತಿತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.