ಗುರುವಾರ , ಜೂನ್ 24, 2021
29 °C

ಅಕ್ಷರ ವಂಚಿಸುವ ಸಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇತಿಹಾಸದಿಂದ ಇಂದಿನ ತನಕವೂ ಬಡವರು, ಹಿಂದುಳಿದವರು, ದಲಿತರಿಗೆ ಅಕ್ಷರವನ್ನು ವಂಚಿಸುವ ಸಂಚು ವ್ಯವಸ್ಥಿತವಾಗಿ ನಡೆದು ಬಂದಿದೆ ಎಂದು ಹಿರಿಯ ಸಾಹಿತಿ ಲಿಂಗಣ್ಣ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ಬಾಮ್‌ಸೇಫ್ ಜಿಲ್ಲಾ ಘಟಕವು ಗುಲ್ಬರ್ಗ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ `ಮಹಾ ಪುರುಷರ ಜನ್ಮದಿನಾಚರಣೆ ಹಾಗೂ ಅಧ್ಯಯನ ಶಿಬಿರ~ದಲ್ಲಿ ಅವರು ಮಾತನಾಡಿದರು.ಅಂದು ಶಿಕ್ಷಣವನ್ನು ಒಂದು ವರ್ಗದ ಸೊತ್ತನ್ನಾಗಿ ಮಾಡಿದ್ದರು. ಉಳಿದವರು ಕಲಿತರೆ ಅಕ್ಷರವೇ ನಾಶ ಎಂದಿದ್ದರು. ಮೆಟ್ರಿಕ್ ಪಾಸಾದ ಹಿಂದುಳಿದ ವರ್ಗದ ಯುವತಿಯ ಮುಂದಿನ ಶಿಕ್ಷಣಕ್ಕೆ ಅವಕಾಶ ನೀಡದ ಘಟನೆ 180 ವರ್ಷಗಳ ಹಿಂದೆ ನಡೆದಿತ್ತು. ದಲಿತರಿಗೆ ಶಿಕ್ಷಣ ನೀಡಿದ ಜ್ಯೋತಿಬಾಫುಲೆಯನ್ನು ಅವಮಾನಿಸಿದ್ದರು.

 

ಬಡವರು, ಹಿಂದುಳಿದವರು, ದಲಿತರ ಕೈಗೆಟಕುತ್ತಿದ್ದ 300ಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ರಾಜ್ಯದಲ್ಲಿ ಈಗ ಮುಚ್ಚಿದ್ದಾರೆ. ಮುಂದೊಂದು ದಿನ ಈ ದೇಶದ ಬಹುಸಮುದಾಯವನ್ನು ಶಿಕ್ಷಣದಿಂದ ವಂಚಿಸುತ್ತಾರೆ ಎಂದು ಆತಂಕವ್ಯಕ್ತಪಡಿಸಿದರು.ಅಧ್ಯಯನವೊಂದೇ ವ್ಯಕ್ತಿಯ ಬೆಳವಣಿಗೆಗೆ ಸಾಧನ ಎಂದ ಅವರು, ಜಾತಿ-ಧರ್ಮಕ್ಕೆ ಆದ್ಯತೆ ನೀಡದೇ ಎಲ್ಲರೂ `ಭಾರತೀಯರು~ ಎಂದು ಭಾವಿಸಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.ಶಿಬಿರ ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ವಿಭಾಗೀಯ ಆಯುಕ್ತ ಎಸ್.ಜಿ. ವಾಲಿ ಮಾತನಾಡಿ,

`ತಮ್ಮ ಹುಟ್ಟುಹಬ್ಬವನ್ನು ತಾವೇ ಆಚರಿಸಿಕೊಳ್ಳುವ ದುಸ್ಥಿತಿಗೆ ಇಂದಿನ ಜನ ತಲುಪಿಸಿದ್ದಾರೆ. ಆದರೆ ಬುದ್ಧ, ಗಾಂಧಿ, ಬಸವಣ್ಣನಂತಹ ಮಹಾಪುರಷರ ಹುಟ್ಟುಹಬ್ಬವನ್ನು ಜನತೆಯೇ ಸಂಭ್ರಮದಿಂದ ಆಚರಿಸುತ್ತಾರೆ. ಅಂತಹ ಉದಾತ್ತ ಬದುಕನ್ನು ನಡೆಸಬೇಕು. ಶಿಕ್ಷಿತರು, ಉದ್ಯೋಗಸ್ಥರು ತಾವು ಬಂದ ಹಾದಿಯನ್ನು ನೆನಪಿಸಿಕೊಂಡು ಸಮಾಜಕ್ಕೆ ನೆರವಾಗಬೇಕು~ ಎಂದರು.ಕಾಳಗಿ ಸರ್ಕಾರಿ ಕಾಲೇಜು ಪ್ರಾಂಶುಪಾಲ ಹಾಶ್ಮಿ ಎಸ್.ಎಸ್., ಬಾಮ್‌ಸೇಫ್ ಪೂರ್ಣಾವಧಿ ಕಾರ್ಯಕರ್ತ ಸುಧೀರ್‌ನಾಗ, ಸುಭಾಷ್ ಶೀಲವಂತ, ಎಂ. ಬಸವರಾಜ ರಾವೂರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.