ಗುರುವಾರ , ಮೇ 13, 2021
24 °C

ಸಾಹಿತ್ಯ, ಸಂಗೀತ, ಲಲಿತಕಲೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಗರ ಹಾಗೂ ಗ್ರಾಮೀಣ ಮಕ್ಕಳ ಮಧ್ಯದ ಬಹುದೊಡ್ಡ ಕಂದರವೆಂದರೆ ಸಂಕುಚಿತ ಮನಸ್ಥಿತಿ. ನಗರ ಪ್ರದೇಶದ ಮಕ್ಕಳು ಹೊಸ ಬದಲಾವಣೆಗೆ ಬಹುಬೇಗನೆ ತೆರೆದುಕೊಂಡಷ್ಟು ಗ್ರಾಮೀಣ ಮಕ್ಕಳು ತೆರೆದುಕೊಳ್ಳುವುದು ಕಷ್ಟಸಾಧ್ಯ. ಇಂತಹ ಸಮಸ್ಯೆಗಳ ನಡುವೆಯೂ ನಗರ ಪ್ರತಿಭೆಗಳಿಗೆ ಸಮಾನಾಂತರವಾಗಿ ಗ್ರಾಮೀಣ ಪ್ರತಿಭೆಗಳು ಸಾಧನೆ ಮಾಡಿದ ಉದಾಹರಣೆಗಳಿವೆ. ಈಚೆಗೆ ಚಿತ್ತಾಪುರ ತಾಲ್ಲೂಕು ಹೊನಗುಂಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 8 ರಿಂದ 10 ನೆ ತರಗತಿ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ದಿನದ ವ್ಯಕ್ತಿತ್ವ ವಿಕಸನ ಶಿಬಿರ ನಡೆಯಿತು. ಸರ್ಕಾರಿ ಶಾಲೆಗಳಲ್ಲಿ ಇಂತಹ ಶಿಬಿರಗಳೆ ಅಪರೂಪ. ಕ್ರಿಯಾಶೀಲ ಮನಸ್ಸಿನ ಶಿಕ್ಷಕರಿದ್ದರೆ ಇಂತಹ ಶಿಬಿರಗಳನ್ನು ವ್ಯವಸ್ಥೆ ಮಾಡಿ ಅಲ್ಲಿನ ಮಕ್ಕಳ ಮನಸ್ಸನ್ನು ಸ್ವಲ್ಪವಾದರೂ ಅರಳಿಸುವ ಪ್ರಯತ್ನ  ಸಾಧ್ಯ ಎಂಬುದಕ್ಕೆ ಈ ಶಿಬಿರ ಸಾಕ್ಷಿಯಾಯಿತು.ಶಿಬಿರಕ್ಕೆ ಆಸಕ್ತಿ ತೋರಿದವರು ಮುಖ್ಯೋಪಾಧ್ಯಾಯಿನಿ ಪ್ರತಿಭಾ ಪ್ರಿಯದರ್ಶಿನಿ. ಮೂಲತಃ ವಿಜ್ಞಾನದ ಶಿಕ್ಷಕಿಯಾಗಿದ್ದರೂ ಲಲಿತ ಕಲೆಗಳು ಮಕ್ಕಳಿಗೆ ಹೇಗೆ ಅಗತ್ಯ ಎನ್ನುವ ಕುರಿತು ಯೋಚಿಸಿ, ಅಕ್ಷರಧಾಮ ತರಬೇತಿ ಸಂಸ್ಥೆಯ ಸಹಕಾರದೊಂದಿಗೆ ತರಬೇತಿಯ ವ್ಯವಸ್ಥೆ ಮಾಡಿದರು. ಇದಕ್ಕೆ ಬೆನ್ನೆಲುಬಾಗಿ ನಿಂತವರು ಕನ್ನಡ ಶಿಕ್ಷಕ ಪೂಜಪ್ಪ ಮೇತ್ರಿ. ಶಿಬಿರದಲ್ಲಿ ಸಾಹಿತ್ಯ, ಸಂಗೀತ, ಲಲಿತ ಕಲೆಗಳ ಪರಿಚಯ, ವ್ಯಕ್ತಿತ್ವ ವಿಕಸನಕ್ಕೆ ಸಹಾಯವಾಗಬಲ್ಲ ಕ್ರೀಡೆ, ನೃತ್ಯ, ಕಂಪ್ಯೂಟರ್, ಮಹಾನ್ ವ್ಯಕ್ತಿಗಳ ಪರಿಚಯ ಕುರಿತು ಮಾಹಿತಿ ಮತ್ತು ಮಹತ್ವದ ವಿಚಾರಗಳನ್ನು ತಿಳಿಸಿಕೊಡಲಾಯಿತು. ಬರಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ಯಾವುದೆ ತರಹದ  ಭಯ, ಆತಂಕ ತಾರದಂತೆ, ಓದುವ ಬಗೆ, ಪತ್ರಿಕೆ ಬಿಡಿಸುವ ವಿಧಾನ ಸೇರಿದಂತೆ ಹಲವು ವಿಷಯ ಕುರಿತು ಚರ್ಚಿಸಲಾಯಿತು.ಬೆಳವಣಿಗೆ

`ಗ್ರಾಮೀಣ ಪ್ರದೇಶದಲ್ಲಿ ಶಿಬಿರ ನಡೆಸುವುದು ತುಂಬ ಕಷ್ಟ. ಹೊಸದೇನನ್ನೋ ಮಾಡಬೇಕೆಂಬ ಹಂಬಲದಿಂದ ಈ ಕೆಲಸಕ್ಕೆ ಕೈ ಹಾಕಿರುವುದು ಶ್ಲಾಘನೀಯ~ ಎನ್ನುತ್ತಾರೆ ಸಂಪನ್ಮೂಲ ವ್ಯಕ್ತಿಗಳಲ್ಲಿ ಒಬ್ಬರಾದ ಬಸವರಾಜ ಮದ್ರಿಕಿ. ಸಂಯೋಜಕ ಪೂಜಾರಿ ಎಸ್.ಮೇತ್ರಿ, `ಮಕ್ಕಳ ಮನೋವಿಕಾಸದ ಬೆಳವಣಿಗೆ ಇದೊಂದು ಸಣ್ಣ ಪ್ರಯತ್ನ~ ಎಂದು ಸಂತಸ ಹಂಚಿಕೊಂಡರು. ಗಣಿತ ವಿಷಯವನ್ನು ಸರಳವಾಗಿ, ಆಟದ ಮೂಲಕ ಮಕ್ಕಳಿಗೆ ಹೇಳಿಕೊಟ್ಟರು ಪರಶುರಾಮ ಮುತ್ತಗಿ.ನಿತ್ಯವೂ ಆದೆ ಪಾಠ, ಬಿಸಿಯೂಟದ ಮಧ್ಯೆ ಹೊಸತನವನ್ನು ಮೂಡಿಸಿದ ಹೊನಗುಂಟಿ ಸರ್ಕಾರಿ ಪ್ರೌಢಶಾಲೆಯ ಈ ಪ್ರಯೋಗ ಎಲ್ಲ ಶಾಲೆಗಳಿಗೆ ಮಾದರಿ ಎನ್ನಬಹುದು. ವ್ಯವಸ್ಥಿತ ರೀತಿಯಲ್ಲಿ ಪರೀಕ್ಷೆಗಳು ಆರಂಭವಾಗುವ ಮೊದಲೆ ಪ್ರತಿವರ್ಷ ಇಂತಹ ಶಿಬಿರಗಳು ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಆಯೋಜಿಸಿದರೆ ಗ್ರಾಮೀಣ ಪ್ರತಿಭೆಗಳಿಗೆ ಇದರಿಂದ ಖಂಡಿತ ಉಪಯುಕ್ತ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.