ಕೈ- ಕಮಲ ಹೋರಾಟ: ಜೆಡಿಎಸ್ ದೂಳೀಪಟ

7

ಕೈ- ಕಮಲ ಹೋರಾಟ: ಜೆಡಿಎಸ್ ದೂಳೀಪಟ

Published:
Updated:

ಗುಲ್ಬರ್ಗ: ನಗರ ಪ್ರದೇಶದಲ್ಲಷ್ಟೇ ಪ್ರಬಲವಾಗಿರುವ ಬಿಜೆಪಿಯ ಬಂಡವಾಳ ಜಿಲ್ಲಾಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಯಲಾಗುತ್ತದೆ ಎಂಬ ವಿರೋಧ ಪಕ್ಷಗಳ ನಿರೀಕ್ಷೆ ಹುಸಿಯಾಗಿದೆ. ಗುಲ್ಬರ್ಗ ಜಿಲ್ಲಾಪಂಚಾಯಿತಿಯ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಸ್ವಲ್ಪದರಲ್ಲಿ ಎಡವಿರುವ ಬಿಜೆಪಿ ಏಕೈಕ ದೊಡ್ಡಪಕ್ಷವಾಗಿ ಹೊರಹೊಮ್ಮಿದೆ. ನಿರೀಕ್ಷೆಯಂತೆ ಮತ್ತೆ ಅತಂತ್ರ ಜಿಲ್ಲಾಪಂಚಾಯಿತಿ ರಚನೆಯಾಗಿದೆ.ಕಳೆದ ಚುನಾವಣೆಯಲ್ಲಿ ಕೇವಲ ಏಳು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದ್ದ ಬಿಜೆಪಿ ಈ ಬಾರಿ 20 ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿದೆ. ಕಳೆದ ಬಾರಿ 19 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಪಕ್ಷ ಹೆಚ್ಚುಕಡಿಮೆ ಯಥಾಸ್ಥಿತಿ ಕಾಪಾಡಿಕೊಂಡಿದ್ದು, ಒಂದು ಸ್ಥಾನವನ್ನು ಹೆಚ್ಚಾಗಿ ಗಳಿಸಿಕೊಂಡಿದೆ.ಆದರೆ 12 ಸ್ಥಾನಗಳನ್ನು ಹೊಂದಿದ್ದ ಜೆಡಿಎಸ್ ಕೇವಲ ಮೂರು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಗುಲ್ಬರ್ಗ ದಕ್ಷಿಣ ಕ್ಷೇತ್ರದ ವಿಧಾನಸಭಾ ಉಪಚುನಾವಣೆ ಬಳಿಕ ಜೆಡಿಎಸ್ ಅಲೆ ಜಿಲ್ಲೆಯಲ್ಲಿ ದಟ್ಟವಾಗಿದೆ ಎಂಬ ನಿರೀಕ್ಷೆ ಸುಳ್ಳಾಗಿದೆ.ಜಿಲ್ಲಾಪಂಚಾಯಿತಿಗೆ ಆಯ್ಕೆಯಾಗಿರುವ ಏಕೈಕ ಪಕ್ಷೇತರ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಜೇವರ್ಗಿ ತಾಲ್ಲೂಕು ನೆಲೋಗಿ ಕ್ಷೇತ್ರದ ಶೋಭಾ ಶಂಕರ ಬಾಣಿ ಪಾತ್ರರಾಗಿದ್ದಾರೆ. 26 ಸ್ಥಾನಗಳಲ್ಲಿ ಕಣದಲ್ಲಿದ್ದ ಬಿಎಸ್ಪಿ, ತಲಾ ಎರಡು ಸ್ಥಾನಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಸಿಪಿಐ ಹಾಗೂ ಸಿಪಿಎಂ ಖಾತೆ ತೆರೆಯುವಲ್ಲಿ ವಿಫಲವಾಗಿವೆ. ವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದ ಮೂರೂ ಪಕ್ಷಗಳಿಗೆ ಮತದಾರ ತಕ್ಕ ಪಾಠ ಕಲಿಸಿದ್ದಾನೆ. ಮರು ಆಯ್ಕೆ ಬಯಸಿದ್ದ ಏಳು ಸದಸ್ಯರ ಪೈಕಿ ಒಬ್ಬರು ಮಾತ್ರ ಗೆದ್ದಿದ್ದಾರೆ.ಸರಣಿ ಅವಿಶ್ವಾಸ ನಿರ್ಣಯ, ಐದು ವರ್ಷದಲ್ಲಿ ಹನ್ನೊಂದು ಮಂದಿ ಅಧ್ಯಕ್ಷರು, ಉದ್ಯೋಗ ಖಾತರಿ ಅವ್ಯವಹಾರ, ಪಕ್ಷಾಂತರ, ಅಪವಿತ್ರ ಮೈತ್ರಿ ಮತ್ತಿತರ ಕಾರಣದಿಂದಾಗಿ ಸದಾ ಸುದ್ದಿಯಲ್ಲಿದ್ದ ಗುಲ್ಬರ್ಗ ಜಿಲ್ಲಾ ಪಂಚಾಯಿತಿ ಮತ್ತೆ ‘ಅತಂತ್ರ’ವಾಗಿದ್ದು, ಹೊಂದಾಣಿಕೆ ರಾಜಕೀಯ ಅನಿವಾರ್ಯವಾಗಿದೆ. 20 ಸ್ಥಾನಗಳನ್ನು ಹೊಂದಿರುವ ಬಿಜೆಪಿಗೆ ನಾಲ್ವರು ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್ ಸದಸ್ಯರ ಮತಗಳು ಲಭಿಸಲಿದ್ದು, ಒಟ್ಟು ಸಂಖ್ಯಾಬಲ 26ಕ್ಕೆ ಏರಲಿದೆ.ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯಬಲ 22 ಆಗಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ಇಬ್ಬರು ಶಾಸಕರು, ವಿಧಾನ ಪರಿಷತ್ ಸದಸ್ಯ ಹಾಗೂ ಇಬ್ಬರು ಸಂಸದರ ಬೆಂಬಲವಿದೆ. ಜೆಡಿಎಸ್ ಪಕ್ಷಕ್ಕೂ ಇಬ್ಬರು ಶಾಸಕರ ಬೆಂಬಲ ಇದ್ದು, ಒಟ್ಟು ಸದಸ್ಯಬಲ 29 ಆಗಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಅಧಿಕಾರ ಸಿಗುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ.ಜಿಲ್ಲೆಯಲ್ಲಿ ನಾಲ್ವರು ಶಾಸಕರನ್ನು ಹೊಂದಿರುವ ಬಿಜೆಪಿ, ಗದ್ದುಗೆ ಹಿಡಿಯುವ ಹೊಸ್ತಿಲಲ್ಲಿ ಎಡವಿದೆ. ತನ್ನದೇ ಶಾಸಕರನ್ನು ಹೊಂದಿರುವ ಜೇವರ್ಗಿ ತಾಲ್ಲೂಕಿನಲ್ಲಿ ಪಕ್ಷ ನೆಲಕಚ್ಚಿದೆ. ತಾಲ್ಲೂಕಿನ ಆರು ಜಿಲ್ಲಾಪಂಚಾಯಿತಿ ಕ್ಷೇತ್ರಗಳ ಪೈಕಿ ಕೇವಲ ಒಂದು ಸ್ಥಾನ ಆ ಪಕ್ಷಕ್ಕೆ ಲಭಿಸಿದೆ. ತಾಲ್ಲೂಕುಪಂಚಾಯಿತಿಯಲ್ಲೂ ಬಿಜೆಪಿ ಮುಖಭಂಗ ಅನುಭವಿಸಿದೆ.ಶಾಸಕರ ಸಹೋದರ ಕೂಡಾ ಪರಾಭವಗೊಂಡಿದ್ದಾರೆ. ನಾಲ್ಕು ಜಿಲ್ಲಾಪಂಚಾಯಿತಿ ಹಾಗೂ 12 ತಾಲ್ಲೂಕುಪಂಚಾಯಿತಿ ಕ್ಷೇತ್ರಗಳನ್ನು ಗೆದ್ದು ಸ್ಪಷ್ಟ ಮುನ್ನಡೆ ಸಾಧಿಸಿರುವ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆ ಸೋಲಿನ ಸೇಡು ತೀರಿಸಿಕೊಂಡಿದೆ.ಚಿತ್ತಾಪುರ ತಾಲ್ಲೂಕಿನ ಫಲಿತಾಂಶ ಬಿಜೆಪಿ ಪಾಳಯದಲ್ಲಿ ಭ್ರಮನಿರಸನಕ್ಕೆ ಕಾರಣವಾಗಿದೆ. ಜಿಲ್ಲಾಪಂಚಾಯಿತಿಯ ಆರು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದು, ಶಾಸಕ ವಾಲ್ಮೀಕಿ ನಾಯಕ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ತಾಲ್ಲೂಕುಪಂಚಾಯಿತಿಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಬಿಟ್ಟುಕೊಟ್ಟಿದೆ. ಉಳಿದಂತೆ ಶಾಸಕ ಸುನೀಲ ವಲ್ಯ್‌ಪುರ ಮತ್ತು ರೇವುನಾಯಕ ಬೆಳಮಗಿ ಗೆಲುವಿನ ನಗೆಬೀರಿದ್ದಾರೆ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ನಡುವಿನ ಪ್ರತಿಷ್ಠೆಯ ಕಣವಾಗಿದ್ದ ಸೇಡಂ ತಾಲ್ಲೂಕಿನಲ್ಲಿ ಸಮಬಲದ ಹೋರಾಟ ಕಂಡುಬಂದಿದೆ. ಜಿಲ್ಲಾಪಂಚಾಯಿತಿಯ ಐದು ಸ್ಥಾನಗಳ ಪೈಕಿ ಮೂರು ಕಾಂಗ್ರೆಸ್ ಪಾಲಾಗಿದ್ದರೆ, ತಾಲ್ಲೂಕುಪಂಚಾಯಿತಿಯಲ್ಲಿ 10 ಸ್ಥಾನಗಳನ್ನು ಗಳಿಸಿರುವ ಬಿಜೆಪಿ ಮೇಲುಗೈ ಸಾಧಿಸಿದೆ.ಜಿಲ್ಲಾ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷ ಶರಣಪ್ರಕಾಶ ಪಾಟೀಲ ಅವರಿಗೆ ಅಗ್ನಿಪರೀಕ್ಷೆಯಾಗಿದ್ದ ಚುನಾವಣೆಯಲ್ಲಿ ಪಕ್ಷ ತೃಪ್ತಿಕರ ಪ್ರದರ್ಶನ ನೀಡಿದೆ. ಆದರೆ ಖರ್ಗೆ ಹಾಗೂ ಧರ್ಮಸಿಂಗ್ ವಿರುದ್ಧ ಬಹಿರಂಗ ಸಮರ ಸಾರಿದ್ದ ಶಾಸಕ ಮಾಲೀಕಯ್ಯ ಗುತ್ತೇದಾರರ ಕ್ಷೇತ್ರದಲ್ಲಿ ಮಾತ್ರ ಮತದಾರರು ಕಾಂಗ್ರೆಸ್‌ಗೆ ‘ಕೈ’ ಕೊಟ್ಟಿದ್ದಾರೆ. ಅಫಲಜಪುರ ತಾಲ್ಲೂಕಿನ ಐದು ಜಿ.ಪಂ. ಸ್ಥಾನಗಳ ಪೈಕಿ ಕೇವಲ ಒಂದು ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದೆ. ಉಳಿದ ನಾಲ್ಕು ಬಿಜೆಪಿ ಪಾಲಾಗಿದ್ದು, ಶಾಸಕರು ಪರೋಕ್ಷವಾಗಿ ಬಿಜೆಪಿ ಜತೆ ಕೈಜೋಡಿಸಿರುವುದು ಬಹಿರಂಗವಾಗಿದೆ.ವಿಚಿತ್ರವೆಂದರೆ ಜಿಲ್ಲಾಪಂಚಾಯಿತಿ ಅಧ್ಯಕ್ಷರ ಆಯ್ಕೆಯಲ್ಲಿ, ಕೇವಲ ಮೂರು ಸದಸ್ಯರನ್ನು ಹೊಂದಿರುವ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry