ಗುರುವಾರ , ಏಪ್ರಿಲ್ 22, 2021
29 °C

ಮನಸ್ಸುಗಳ ಸಂಪಾದನೆ ದೊಡ್ಡದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಸರ್ಕಾರಿ ನೌಕರರು ಸೇವೆಯುದ್ದಕ್ಕೂ ಜನರ ಮನಸ್ಸುಗಳ ಸಂಪಾದನೆ ಮಾಡುವುದು ಬಹುದೊಡ್ಡ ಕಾರ್ಯವಾಗಿದೆ ಎಂದು ಆಳಂದ ತಹಸೀಲ್ದಾರ ಡಾ. ನಾಗೇಂದ್ರ ಹೊನ್ನಳ್ಳಿ ಅಭಿಪ್ರಾಯಪಟ್ಟರು. ಆಳಂದ ತಾಲ್ಲೂಕು ಸರ್ವೇ ಇಲಾಖೆಯ ಸೂಪರ್‌ವೈಸರ್ ಹುದ್ದೆಯಿಂದ ನಿವೃತ್ತಿ ಹೊಂದಿದ ದೇವಪ್ಪ ರೋಣದ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರಿ ನೌಕರ ಸೇವೆ ಸಂದರ್ಭದಲ್ಲಿ ದುಡ್ಡು ಸಂಪಾದನೆ ಮಾಡಬಹುದು. ಆದರೆ ಸಾರ್ವಜನಿಕರ ಮನಸ್ಸು ಗೆಲ್ಲುವುದು ಸುಲಭದ ಮಾತಲ್ಲ. ರೋಣದ ಅವರು ಅತ್ಯಂತ ದಕ್ಷತೆಯ ಸೇವಾ ನಿಷ್ಟೆ ಮಾಡಿ ಹಣ ಸಂಪಾದನೆ ಮಾಡದೆ ಮನಸ್ಸುಗಳನ್ನು ಸಂಪಾದನೆ ಮಾಡಿ ಮಾರ್ಗದರ್ಶಿಯಾಗಿದ್ದಾರೆ ಎಂದು ಶ್ಲಾಘಿಸಿದರು.ಸರ್ಕಾರಿ ಕಚೇರಿಗಳಿಗೆ ಇಂದು ಕೆಲಸ ಇಲ್ಲದವರೇ ಬರುವವರು ಜಾಸ್ತಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನೌಕರ ಒತ್ತಡದಲ್ಲಿ ಸೇವೆ ಸಲ್ಲಿಸುವಂತಾಗಿದೆ. ಕೆಲವರು ಅಧಿಕಾರ ದುರ್ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಕಳಂಕ ಬರುತ್ತಿದೆ. ಆದರೆ ಕೆಲವರು ಪ್ರಾಮಾಣಿಕತೆ ಹಾಗೂ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ನೌಕರರಿಗೆ ಉತ್ತಮ ಹೆಸರೂ ಬರುತ್ತದೆ. ಈ ಎರಡನೇ ಸಾಲಿಗೆ ದೇವಪ್ಪ ರೋಣದ ಸೇರಿದ್ದಾರೆ ಎಂದು ತಹಸೀಲ್ದಾರ ಬಣ್ಣಿಸಿದರು.ನಿವೃತ್ತ ಅಧಿಕಾರಿ ಚಂದ್ರಕಾಂತ ಪಾಟೀಲ ಚೆಲಗೇರಾ, ಸೂಪರ್‌ವೈಸರ್ ದಿಗಂಬರ ಪೋದ್ದಾರ, ಆಹಾರ ನಿರೀಕ್ಷಕ ಶಂಕರಸಿಂಗ ಮಾತನಾಡಿದರು. ಉಪ ತಹಸೀಲ್ದಾರ್ ನಾಗಪ್ಪಾ ಹಾಗೂ ಕಾಶಿನಾಥ, ತಾಲ್ಲೂಕು ಅಧಿಕಾರಿಗಳು, ಜಿಲ್ಲಾ ಸರ್ವೇ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ರೋಣದ ಅವರನ್ನು ಸನ್ಮಾನಿಸಿದರು.ಬಸಪ್ಪ, ವೀರಣ್ಣ ಗಣಜಲಖೇಡ ಧುತ್ತರಗಾಂವ, ನಾಗಪ್ಪಾ ಭಜಂತ್ರಿ, ಸೂರ್ಯಕಾಂತ ಚರಪಳ್ಳಿ, ಸಂಜೀವಕುಮಾರ ಕಣ್ಣಿ, ವಿನಯಕುಮಾರ ಕುಲಕರ್ಣಿ ಇತರರು ಇದ್ದರು. ಶಿರಸ್ತೇದಾರ ಶಿವಕುಮಾರ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.