ಗಿಡ ನೆಟ್ಟು ಪೋಷಿಸಿ, ಆದಾಯವನ್ನೂ ಪಡೆಯಿರಿ

ಸೋಮವಾರ, ಜೂನ್ 17, 2019
28 °C
ರೈತರಿಗೆ ನೆರವಾಗಲಿದೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ, ಸಸಿಗಳನ್ನು ನೆಡಲು ಈಗ ಸಕಾಲ

ಗಿಡ ನೆಟ್ಟು ಪೋಷಿಸಿ, ಆದಾಯವನ್ನೂ ಪಡೆಯಿರಿ

Published:
Updated:
Prajavani

ಗುಂಡ್ಲುಪೇಟೆ: ರೈತರು, ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಲಭ್ಯವಿರುವ ಜಮೀನಿನಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿದರೆ ಪ್ರೋತ್ಸಾಹಧನ ನೀಡುವಂತಹ ಅರಣ್ಯ ಇಲಾಖೆಯ ‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ’ ಅನುಷ್ಠಾನಕ್ಕೆ ಇದು ಸಕಾಲ.

ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವುದರಿಂದ ಈಗ ಗಿಡಗಳನ್ನು ನೆಟ್ಟರೆ ಅವು ಬದುಕುಳಿಯಬಹುದು. ಅರಣ್ಯೇತರ ಪ್ರದೇಶಗಳಲ್ಲಿ ಹಸಿರು ಬೆಳೆಸುವ ಉದ್ದೇಶದಿಂದ 2011ರಲ್ಲಿ ಜಾರಿಗೆ ಬಂದಿರುವ ಈ ಯೋಜನೆ ರೈತರಿಗೆ ಆರ್ಥಿಕವಾಗಿ ಸಹಕಾರಿಯಾಗಬಲ್ಲದು.  

ಅರಣ್ಯ ಇಲಾಖೆಯಿಂದ ರೈತರು ರಿಯಾಯಿತಿ ದರದಲ್ಲಿ ಗಿಡಗಳನ್ನು ಖರೀದಿಸಿ, ತಮ್ಮ ಜಮೀನಿನಲ್ಲಿ ಕೃಷಿಯ ಜೊತೆಗೆ ಸಸಿಗಳನ್ನೂ ನೆಟ್ಟು ಪೋಷಿಸಿದರೆ ಇಲಾಖೆ ಅವರಿಗೆ ಪ್ರೋತ್ಸಾಹಧನ ನೀಡುತ್ತದೆ. ನೆಟ್ಟ ಗಿಡಗಳನ್ನು ಸಂರಕ್ಷಣೆ ಮಾಡಿದರೆ ವರ್ಷದ ಲೆಕ್ಕದಲ್ಲಿ ಹಣವನ್ನು ರೈತರ ಖಾತೆಗೆ ನೇರವಾಗಿ ಹಾಕಲಾಗುತ್ತದೆ.

1.25 ಲಕ್ಷ ಗಿಡ ಲಭ್ಯ: ಯೋಜನೆಯ ಅಡಿಯಲ್ಲಿ ಗಿಡಗಳನ್ನು ವಿತರಿಸಲು ಗುಂಡ್ಲುಪೇಟೆ ವಲಯದ ಕಚೇರಿಯಲ್ಲಿ 1.25 ಲಕ್ಷ ಗಿಡಗಳು ಲಭ್ಯವಿವೆ. ಮುಂದಿನ ದಿನಗಳಲ್ಲಿ ರೈತರಿಗೆ ಉತ್ತಮ ಆದಾಯ ಬರುವಂತಹ ಗಿಡಗಳನ್ನೇ ಇಲಾಖೆ ಬೆಳೆಸಿದೆ. ಹೆಬ್ಬೇವು, ಶ್ರೀಗಂಧ, ನಲ್ಲಿ, ಹುಣಸೆ, ತೇಗ ಮೊದಲಾದ ಗಿಡಗಳು ಇವೆ. ರೈತರು ದಾಖಲೆಗಳನ್ನು ಸಲ್ಲಿಸಿ, ರಿಯಾಯಿತಿ ದರದಲ್ಲಿ ಖರೀದಿಸಬಹುದು. ಒಬ್ಬರಿಗೆ ಗರಿಷ್ಠ  440 ಗಿಡಗಳನ್ನು ನೀಡಲಾಗುತ್ತದೆ.

6ರಿಂದ 9 ಇಂಚಿನವರೆಗೆ ಬೆಳೆದಿರುವ ಗಿಡಕ್ಕೆ ₹ 1, 8ರಿಂದ 12 ಇಂಚುಗಳಷ್ಟು ಎತ್ತರದ ಸಸಿಗೆ ₹ 3 ನಿಗದಿ ಮಾಡಲಾಗಿದೆ.

‘ಸಸಿಯನ್ನು ನೆಟ್ಟು ಬೆಳೆಸಿದರೆ ಮೊದಲ ವರ್ಷ ಪ್ರತಿ ಸಸಿಗೆ ₹ 30, ಎರಡನೇ ವರ್ಷ ₹ 30 ಮತ್ತು ಮೂರನೇ ವರ್ಷ ಪ್ರತಿ ಗಿಡಕ್ಕೆ ₹ 40 ನೀಡಲಾಗುತ್ತದೆ. ಅಂದರೆ, ಒಂದು ಗಿಡವನ್ನು ಮೂರು ವರ್ಷ ಕಾಪಾಡಿದರೆ ಇಲಾಖೆ ₹ 100 ಪ್ರೋತ್ಸಹಧನ ನೀಡುತ್ತದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.

‘ಯೋಜನೆಯ ಅಡಿಯಲ್ಲಿ ರೈತರಿಗೆ ಸಸಿಗಳನ್ನು ವಿತರಣೆ ಮಾಡಿ ಅವುಗಳನ್ನು ಪೋಷಿಸುವಂತೆ ಮನವೊಲಿಸಲು ಅಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಲಾಗಿದೆ. ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಎಲ್ಲ ಇಲಾಖೆಯ ಸಹಕಾರವನ್ನೂ ಕೋರಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ರಾಜೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಣ್ಣಿನ ಸವಕಳಿ ತಡೆಯಬಹುದು,‌ ಆದಾಯವೂ ಬರುತ್ತದೆ’

ಮಳೆ ಆರಂಭವಾಗಿರುವುದರಿಂದ ಸಸಿಗಳನ್ನು ನೆಡಲು ಇದು ಒಳ್ಳೆಯ ಸಮಯ. ಜಮೀನುಗಳ ಬದಿಗಳಲ್ಲಿ ಈಗ ಗಿಡಗಳನ್ನು ನೆಟ್ಟರೆ, ಅವುಗಳನ್ನು ಬೆಳೆಸುವುದು ಸುಲಭ. ಈ ಸಸಿಗಳು ಏಳೆಂಟು ವರ್ಷಗಳಲ್ಲಿ ಉತ್ತಮ ಆದಾಯವನ್ನೂ ತಂದುಕೊಡುತ್ತದೆ. ಇದು ಮಾತ್ರವಲ್ಲದೆ ಗಿಡಗಳಿಂದಾಗಿ ಮಣ್ಣಿನ ಸವೆತವನ್ನು ತಡೆಯಬಹುದು. ಪರಿಸರ ಸಮಲೋಲನವನ್ನೂ ಕಾಯ್ದುಕೊಳ್ಳಬಹುದು’ ಎಂದು ರಾಜೇಶ್‌ ಮಾಹಿತಿ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !