ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

55 ದಿನಗಳಲ್ಲೇ ಚೆಂಡು ಹೂವು

Last Updated 16 ನವೆಂಬರ್ 2015, 19:30 IST
ಅಕ್ಷರ ಗಾತ್ರ

ರೈತನೆಂದರೆ ಸಾಲ ಎಂಬಂತೆ ಇಂದು ಬಿಂಬಿತವಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಸಾಲವನ್ನೇ ಮಾಡಿಕೊಳ್ಳದ ಚಿಕ್ಕ ರೈತನೊಬ್ಬ 55 ದಿನಗಳಲ್ಲೇ ಲಕ್ಷ ರೂಪಾಯಿ ಲಾಭ ಮಾಡಿಕೊಂಡಿದ್ದಾನೆ ಎಂದರೆ ಅತಿಶಯೋಕ್ತಿ ಎನ್ನಿಸುತ್ತದೆ. ಇಂಥ ಒಬ್ಬ ರೈತನನ್ನು ನೋಡಬೇಕೆಂದರೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ನರಸಾಪುರ ಗ್ರಾಮದ ರೈತ ಶೇಖರಗೌಡ ಪಾಟೀಲ ಅವರ ತೋಟಕ್ಕೆ ಬರಬೇಕು.

ಯಾವಾಗ ಏನು ಬೆಳೆಯಬೇಕು ಎಂಬ ಜ್ಞಾನವಿದ್ದರೆ ಅಲ್ಪ ಅವಧಿಯಲ್ಲಿ  ಲಾಭ ಗಳಿಸಬಹುದು, ಇದಕ್ಕೆ ಬರವೂ ಅಡ್ಡವಾಗುವುದಿಲ್ಲ ಎನ್ನುವ ಪಾಟೀಲರು, ಬರದನಾಡಿನಲ್ಲಿ 55 ದಿನಗಳಲ್ಲಿಯೇ ಚೆಂಡು ಬೆಳೆದು ಹೂನಗೆ ಬೀರುತ್ತಿದ್ದಾರೆ. ಕುಷ್ಟಗಿಯಿಂದ ಕೊಪ್ಪಳಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು 13 ಕಿ.ಮೀ. ಸಾಗಿದರೆ ಶೇಖರಗೌಡ ಅವರ 1.15 ಎಕರೆ ಚೆಂಡು ಹೂವಿನ ತೋಟ ಕಾಣಬಹುದು.

ಇಲ್ಲಿ ಮಳೆ ಇಲ್ಲವೆಂದೇ ಹೇಳಬಹುದು. ಆದ್ದರಿಂದ ಕೊಳವೆ ಬಾವಿಯಲ್ಲಿ ಕೂಡ ಸಾಕಷ್ಟು ನೀರು ಸಿಗುವುದಿಲ್ಲ. ಸಿಕ್ಕ ನೀರನ್ನು ಬೆಳೆಗೆ ಸಾಕಾಗುವಷ್ಟು ಹಾಯಿಸಲು ವಿದ್ಯುತ್ ಕೂಡ ಇಲ್ಲ. ಮೇಲಾಗಿ ಗೊಬ್ಬರ, ಕೀಟ ನಾಶಕಗಳಿಗೆ ಹಾಗೂ ಆಳುಗಳ ಕೂಲಿಗೆ ಸಾಲ ಮಾಡದೇ ವಿಧಿಯಿಲ್ಲ, ಇರುವ ಚಿಕ್ಕ ಹಿಡುವಳಿಯಲ್ಲಿ ಏನು ಸಾಧಿಸುವುದು ಎಂದು ಬರದ ನಾಡಿನ ರೈತರ ಪ್ರಶ್ನೆಗೆ ಉತ್ತರದಂತಿದ್ದಾರೆ ಶೇಖರಗೌಡ ಪಾಟೀಲ.

ಚೆಂಡು ಹೂವಿನ ಬೆಳೆ ಬೆಳೆಯುವ ಮುನ್ನ ಪಾಟೀಲರು ತಮ್ಮ ಕೃಷಿ ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಇದೀಗ ತಮ್ಮ ಅನುಭವ ಮತ್ತು ಜ್ಞಾನದಿಂದ ಚೆಂಡು ಹೂವಿನ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ. ದೀಪಾವಳಿ ಇನ್ನೂ 75 ದಿನಗಳಿರುವಾಗ ಕೊಪ್ಪಳ ತಾಲ್ಲೂಕಿನ ಬೂದಗುಂಪಾ ಸಸ್ಯಾಲಯ (ನರ್ಸರಿ)ದಲ್ಲಿ ಸುಮಾರು 25 ದಿನಗಳ 20ಸಾವಿರ ಚೆಂಡು ಹೂವಿನ ಸಸಿಗಳನ್ನು ಮೂರು ರೂಪಾಯಿಗೆ ಒಂದರಂತೆ ತಂದು ನಾಟಿ ಮಾಡಿದ್ದಾರೆ.

ಚೆಂಡು ಹೂವಿನ ಸಸಿಗಳನ್ನು ನಾಟಿ ಮಾಡಿ 55ನೇ ದಿನಕ್ಕೇ 1,37,500 ರೂಪಾಯಿಗಳನ್ನು ತಂದುಕೊಟ್ಟಿದೆ. ಈ ಹೂವಿಗೆ ಪ್ರತಿ ಕಿಲೋಗ್ರಾಂಗೆ 55ರೂಪಾಯಿ. ಮಹಾನವಮಿಯ ಆಯುಧ ಪೂಜೆಯ ಸಂದರ್ಭದಲ್ಲಿ 25 ಕ್ವಿಂಟಾಲ್‌, ದೀಪಾವಳಿಯ ಲಕ್ಷ್ಮಿ ಪೂಜೆಗಾಗಿ ಸುಮಾರು 15 ಕ್ವಿಂಟಾಲ್‌ಗೂ ಹೆಚ್ಚು ಚೆಂಡುಹೂವು ಮಾರಾಟ ಮಾಡಿದ್ದಾರೆ.

‘ಈ ಬೆಳೆಗೆ ಮುಟುರು ರೋಗ, ಕಿವುಡಿ (ಕೀಡೆ) ರೋಗ ಬಿಟ್ರ ಮತ್ಯಾವ ರೋಗನೂ ಬರೂದಿಲ್ರಿ, ಹಾಂಗ ಬಂದಾಗ ಅಡ್ಮೀರ್, ಕವಚ, ಕಾನ್ಫೀಟರ್ ತಂದು ಸಿಂಪಡಿಸ್ತೀವ್ರಿ, ಒಂದ್ಸಲ ಮಾತ್ರ 19:19:19, 20:20:20 ಮತ್ತ.. ಪೊಟ್ಯಾಷ್ ಗೊಬ್ಬರ ಹಾಕ್ತೀವ್ರಿ. ಒಂದೆರಡು ಸಲ ಕಳೆ ತೆಗೆಸೋದು ಬಿಟ್ರ ಖರ್ಚು ಭಾಳಾ ಕಮ್ಮೀ ಸರ.., ಲೋಡ್ ಶೆಡ್ಡಿಂಗ್ ಇದ್ರೂನೂ ನೀರ ಹಾಯಿಸಾಕ ತ್ರಾಸ ಆಗೂದಿಲ್ರಿ. ಈ ಬೆಳಿಯಿಂದ ಭಾಳಾ ಲಾಭ ಆಗೂದಿಲ್ಲ ಅಂದ್ರೂ ಸಾಲ ಮಾಡಿಸಿಗೊಡಾಂಗಿಲ್ರಿ, ಬರಗಾಲದಾಗ ಇಂಥಾ ಬೆಳಿಗಿಂತ ಚೊಲೋ ಬೆಳಿ ಇನ್ನೊಂದಿರಲಿಕ್ಕಿಲ್ಲ ಬಿಡ್ರಿ’  ಎಂದು ರೈತ ಶೇಖರಗೌಡ ಚೆಂಡು ಹೂವಿನ ಬೆಳೆಯನ್ನು ಬೆಳೆದಿದ್ದಕ್ಕೆ ಹೆಮ್ಮೆ ಪಡುತ್ತಾರೆ. ಈಗ ಕೆಂಪು ಚೆಂಡು ಹೂವಿನ ಬೀಜ ಹಾಕಿ ಬೆಳೆ ಬೆಳೆಯುವ ಪ್ರಯೋಗಕ್ಕೆ ಮುಂದಾಗಿ ಯಶಸ್ಸಿನತ್ತ ಮುನ್ನುಗ್ಗುತ್ತಿದ್ದಾರೆ.

ಕೇವಲ ಸಾಂಪ್ರದಾಯಿಕ ಬೆಳೆಗಳಿಗೇ ಅಂಟಿಕೊಳ್ಳದೇ ಕಾಲಕ್ಕೆ ತಕ್ಕಂತೆ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವಂತಹ ಕ್ರಮ ಬದ್ಧ ಆಲೋಚನೆ, ಸರಿಯಾದ ನಿರ್ವಹಣೆ, ಬೆಳೆಯ ಮೌಲ್ಯವರ್ಧನೆ ಇವರ ಯಶಸ್ಸಿನ ರಹಸ್ಯ ಎನ್ನಬಹುದು. ಹಬ್ಬಗಳ ಸಂದರ್ಭದಲ್ಲಿ ಹೂವಿನ ಬೆಲೆ ಏರುತ್ತದೆ. ಈ ಅವಕಾಶವನ್ನೇ ಬಳಸಿಕೊಂಡು ಇಂಥ ಹೂವಿನ ಕೃಷಿ ಮಾಡಿದರೆ  ಹೂವಿನ ಬೆಳೆಗಾರನಿಗೂ ಸ್ವರ್ಗ ಸುಖ.
ಇವರ ಸಂಪರ್ಕಕ್ಕೆ 9901135542.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT