ಸೋಮವಾರ, ಜೂನ್ 1, 2020
27 °C

ಮಂಗಟ್ಟೆಗಳ ಜಗಳ!

ಬೀರಣ್ಣ ನಾಯಕ ಮೊಗಟಾ Updated:

ಅಕ್ಷರ ಗಾತ್ರ : | |

ಅದು ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲ್ಲೂಕಿನ ಗಣೇಶಗುಡಿ ಸಮೀಪದ ಲಾವ್ಲಾ ಅರಣ್ಯ. ಹೊತ್ತು ನೆತ್ತಿಗೇರುವ ಹೊತ್ತು. ಮುಗಿಲತ್ತ ಮುಖಮಾಡಿರುವ ಬೃಹತ್ ಮರಗಳ ಗುಚ್ಛದಿಂದ ದೊಡ್ಡದಾದ ಶಬ್ಧ ಹೊರಹೊಮ್ಮಿತು. ಆಗಸದಲ್ಲಿ ಹಾರುತ್ತಿರುವ ವಾಹನವೊಂದು ದೊಪ್ಪೆಂದು ಧರೆಗುರುಳಿತೇನೋ ಎನ್ನುವಷ್ಟು ದೊಡ್ಡದಾಗಿತ್ತು ಆ ಶಬ್ಧ !

ದೊಡ್ಡ ಸಪ್ಪಳ ಕೇಳಿಸಿಕೊಂಡ ಅಕ್ಕಪಕ್ಕದವರು ಅರಣ್ಯದಲ್ಲೇ ಗಸ್ತು ತಿರುಗುತ್ತಿದ್ದ ಜಿಲ್ಲಾ ಅರಣ್ಯ ಸಂಚಾರಿ ವಿಚಕ್ಷಣಾ ದಳದ ಉಪ ಸಂರಕ್ಷಣಾಧಿಕಾರಿ ಉದಯ ನಾಯ್ಕಗೆ ಮಾಹಿತಿ ಕೊಟ್ಟರು. ತಕ್ಷಣ ಸ್ಪಂದಿಸಿದ ದಳದ ತಂಡ ಮಾಹಿತಿ ಸಿಕ್ಕ ಕಡೆಗೆ ಹೆಜ್ಜೆ ಹಾಕಿದರು.

ಎತ್ತರವಾದ ಮರಗಳ ಸುತ್ತಾ ನೋಡುತ್ತಿದ್ದಾಗ, ಉದ್ದ ಹಳದಿ ಕೊಕ್ಕಿನ ಬೃಹತ್ ಗಾತ್ರದ ಪಕ್ಷಿ ನೆಲಕ್ಕೆ ಉರುಳಿ, ರಕ್ತದ ಸುರಿಸುಕೊಂಡು ಬಿದ್ದು ಒದ್ದಾಡುತ್ತಿತ್ತು. ‘ಅರೆ ಇದು, ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ (ಮಂಗಟ್ಟೆ) ಅಲ್ವಾ’ ಎನ್ನುತ್ತಾ ಹುಬ್ಬೇರಿಸಿದ ತಂಡ, ಗಾಯಗೊಂಡಿದ್ದ ಪಕ್ಷಿಯನ್ನು ತೆಳುವಾದ ಬಟ್ಟೆಯಲ್ಲಿ ಸುತ್ತಿಕೊಂಡು, ತಮ್ಮ ವಾಹನದಲ್ಲೇ ಗಣೇಶಗುಡಿಗೆ ಕರೆದೊಯ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ಕರೆದೊಯ್ದರು. ಚಿಕಿತ್ಸೆ ನಂತರ, ಪಕ್ಷಿ ಚೇತರಿಸಕೊಂಡಿದೆ. ಅದನ್ನು ಕುಳಗಿಯ ನಿಸರ್ಗ ಧಾಮಕ್ಕೆ ಕರೆತರಲಾಗಿದೆ. ಸದ್ಯ ನಿಸರ್ಗಧಾಮದಲ್ಲಿ ಮಂಗಟ್ಟೆಗೆ ರಾಜಾತಿಥ್ಯ. ‘ಅದು ಪೂರ್ಣ ಗುಣಮುಖವಾದ ನಂತರ ಅದರ ಮೂಲ ವಾಸ ಸ್ಥಾನಕ್ಕೆ ಬಿಡಲಾಗುತ್ತದೆ’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

‘ಮಂಗಟ್ಟೆಗಳ ಕಾದಾಡುವುದು, ಗಾಯಗೊಳ್ಳುವುದು ಈ ಅರಣ್ಯ ಪ್ರದೇಶದಲ್ಲಿ ಹೊಸದಲ್ಲ. ಹಿಂದೆ ಕುಳುಗಿ ಅರಣ್ಯ ವ್ಯಾಪ್ತಿಯಲ್ಲೂ ಇಂಥ ಪ್ರಕರಣ ನೋಡಿದ್ದೆ. ಆದರೆ, ಅಲ್ಲಿ ಮಂಗಟ್ಟೆ ಸತ್ತು ಹೋಗಿತ್ತು’ ಎಂದು ಉದಯ ನಾಯ್ಕ ನೆನಪಿಸಿಕೊಂಡರು. ಇವುಗಳ ಕಾದಾಟಕ್ಕೆ ವೈಜ್ಞಾನಿಕವಾಗಿ ಕಾರಣ ಇಲ್ಲದಿದ್ದರೂ, ಸ್ಥಳೀಯರ ಪ್ರಕಾರ, ಹೆಣ್ಣು ಮಂಗಟ್ಟೆಗಾಗಿ ಗಂಡು ಮಂಗಟ್ಟೆಗಳು ಕಾದಾಡುತ್ತವಂತೆ. ಹಾಗೆಂದು ಸ್ಥಳೀಯ ಕುಡುಬಿ ಜನಾಂಗದವರು ಹೇಳುತ್ತಾರೆ. ಈ ಪ್ರಕರಣ ಕೂಡ ಅಂಥದ್ದೇ ಇರಬಹುದು ಎಂದು ಅಂದಾಜಿಸುತ್ತಾರೆ ಅಧಿಕಾರಿಗಳು.

‘ಗಂಡು - ಹೆಣ್ಣು ಮಂಗಟ್ಟೆಗಳು ಹಾರಾಡುತ್ತಿರುವಾಗಲೇ ಸರಸ ಆಡುತ್ತವೆ. ಕೊಕ್ಕಿನಲ್ಲೇ ಮುದ್ದಾಡುವಾಗಲೂ (Butting) ಹೀಗೆ ಗಾಯ ಮಾಡಿಕೊಂಡು ಬೀಳುವ ಸಾಧ್ಯತೆಗಳೂ ಇವೆ’ ಎಂದು ನಾಯ್ಕ ಅಭಿಪ್ರಾಯಪಡುತ್ತಾರೆ.

ಗ್ರೇಟ್ ಇಂಡಿಯನ್ ಹಾರ್ನ್ ಬಿಲ್

ಕನ್ನಡದಲ್ಲಿ ಮಂಗಟ್ಟೆ ಎಂದು ಕರೆಯುವ ಹಾರ್ನಬಿಲ್ ಗಳಲ್ಲಿ ಏಳು ಪ್ರಕಾರಗಳಿವೆ. ಪಶ್ಚಿಮ ಘಟ್ಟದ ಕಾಡುಗಳಲ್ಲಿ ನಾಲ್ಕು ಪ್ರಕಾರದ ಮಂಗಟ್ಟೆಗಳು ಕಾಣಸಿಗುತ್ತವೆ. ಇವುಗಳಲ್ಲಿ ಗ್ರೇಟ್ ಇಂಡಿಯನ್ ಹಾರ್ನಬಿಲ್ಲ್ ಗಳು ಅಪರೂಪದವು. ಇದರ ವೈಜ್ಞಾನಿಕ ಹೆಸರು ‘ಬುಸಿರೊಸ್ ಬಿಕೊರ್ನಿಸ್’.

ಸುಮಾರು ಆರು ಕೆಜಿವರೆಗೂ ಭಾರ ಇರುತ್ತದೆ. 95 ಸೆಂ.ಮೀ ನಿಂದ 120 ಸೆಂ.ಮೀವರೆಗೂ ಉದ್ದವಿರುತ್ತದೆ. ದೊಡ್ಡದಾದ ಹಳದಿ ಬಣ್ಣದ ಕೊಕ್ಕು, ಈ ಪಕ್ಷಿಯ ವಿಶೇಷ ಗುರುತು. ಇದು ಜೋಯ್ಡಾ ತಾಲ್ಲೂಕಿನ ಕುಳಗಿ ಅರಣ್ಯ ವಲಯದಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಇಲ್ಲಿ ಹೆಚ್ಚು ಒಣಮರಗಳಿದ್ದು, ಈ ಪಕ್ಷಿಗಳ ಗೂಡುಕಟ್ಟುವುದಕ್ಕೆ ಸೂಕ್ತವಾದ ತಾಣವಾಗಿದೆ. 2008ರಲ್ಲಿ ಕಾಳಿ ಅರಣ್ಯ ಸಂರಕ್ಷಿತ ಪ್ರದೇಶವನ್ನು ಹಾರ್ನಬಿಲ್ ಸಂರಕ್ಷಿತ ವಲಯ ಎಂದು ಘೋಷಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು