ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಬೆ ಹಣ್ಣಿಗೆ ಸ್ಥಿರ ಮಾರುಕಟ್ಟೆ ಕೊರತೆ

ಮಾರಾಟಗಾರನಿಗೆ ಲಾಭ, ಬೆಳೆಗಾರನಿಗೆ ನಷ್ಟ
Last Updated 10 ಜೂನ್ 2022, 2:27 IST
ಅಕ್ಷರ ಗಾತ್ರ

ಚಳ್ಳಕೆರೆ: ಈರುಳ್ಳಿ, ಟೊಮೆಟೊ ಮತ್ತು ಇನ್ನಿತರ ತರಕಾರಿ ಬೆಳೆ ಬೆಳೆದು ಕುಗ್ಗಿ ಹೋಗಿದ್ದ ಬೆಳೆಗಾರರು, ಆರ್ಥಿಕವಾಗಿ ಚೇತರಿಸಿಕೊಳ್ಳುವ ಸಲುವಾಗಿ ಕಡಿಮೆ ಬಂಡವಾಳದಲ್ಲಿ ಕೊಳವೆ ಬಾವಿಯಲ್ಲಿ ಲಭ್ಯವಾದ ಅತ್ಯಲ್ಪ ನೀರಿಗೆ ಡ್ರಿಪ್ ಅಳವಡಿಸಿಕೊಂಡು ಉತ್ತಮ ಇಳುವರಿಯಲ್ಲಿ ಬೆಳೆದ ಸೀಬೆ ಬೆಳೆಗೆ ಸ್ಥಿರ ಮಾರುಕಟ್ಟೆಯ ಸಮಸ್ಯೆ ಎದುರಾಗಿದೆ.

ಹೀಗಾಗಿ ರಂಗವ್ವನ ಹಳ್ಳಿ, ಭರಮಸಾಗರ, ಜೋಗಿಹಟ್ಟಿ, ನಾಯಕನಹಟ್ಟಿ, ದೊಡ್ಡಉಳಾರ್ತಿ, ಕುರುಡಿಹಳ್ಳಿ, ಘಟಪರ್ತಿ, ದುರ್ಗಾವರ, ಹಿರೇಹಳ್ಳಿ ಮುಂತಾದ ಗ್ರಾಮದಲ್ಲಿ ಉತ್ಸುಕತೆಯಿಂದ ಬೆಳೆದ ಸೀಬೆಯನ್ನು ಮಾರಾಟ ಮಾಡಲು ತಾಲ್ಲೂಕಿನ ಸೀಬೆ ಬೆಳೆಗಾರರು ಪ್ರಯಾಸ ಪಡುವಂತಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಸೀಬೆ ಹಣ್ಣಿಗೆ ಬೇಡಿಕೆ ಹಾಗೂ ಉತ್ತಮ ಬೆಲೆಯೂ ಇದೆ. ಮಾರಾಟಕ್ಕೆ ಮಾರುಕಟ್ಟೆ ಸೌಲಭ್ಯ ಇಲ್ಲ. ಇದರಿಂದ ಬೆಳೆಗಾರರಿಗೆ ತೀರಾ ತೊಂದರೆಯಾಗಿದೆ.

₹ 10- ₹ 20ಕ್ಕೆ ರೈತರಿಂದ ಖರೀದಿಸಿದ ಸೀಬೆಯನ್ನು ಮಾರಾಟಗಾರರು ನಗರಪ್ರದೇಶ ಗಳಲ್ಲಿ ₹ 50-60ಕ್ಕೆ ಮಾರುತ್ತಾರೆ. ಮಾರಾಟಗಾರನಿಗೆ ಲಾಭ, ಬೆಳೆಗಾರನಿಗೆ ನಷ್ಟ ಎನ್ನುವಂತಾಗಿದೆ. ಹೀಗಾಗಿ ಕೆಲ ಬೆಳೆಗಾರರು, ಟೆಂಪೊ ವಾಹನವನ್ನು ದಿನದ ಬಾಡಿಗೆ ಪಡೆದು ಕೂಲಿಯಾಳುಗಳ ಮೂಲಕ ಬೆಳೆದ ಸೀಬೆ ಹಣ್ಣನ್ನು ನಗರಪ್ರದೇಶಕ್ಕೆ ತಂದು ನಿತ್ಯ ಮಾರಾಟ ಮಾಡಿಕೊಂಡು ಹೋಗುತ್ತಾರೆ. ಈ ಕೆಲಸ ಎಲ್ಲ ಬೆಳೆಗಾರರಿಗೆ ಸಾಧ್ಯವಾಗುವುದಿಲ್ಲ. ಹಣ್ಣುಗಳನ್ನು ನಗರಕ್ಕೆ ತಂದು ಮಾರಾಟ ಮಾಡಲು ಮನಸ್ಸು ಮಾಡಿದರೆ ಇನ್ನಿತರ ಕೃಷಿ ಚಟುವಟಿಕೆ ಕುಂಠಿತಗೊಳ್ಳುತ್ತದೆ ಎಂಬ ಆತಂಕ ಬೆಳೆಗಾರರನ್ನು ಕಾಡುತ್ತಿದೆ ಎನ್ನುತ್ತಾರೆ ತಾಲ್ಲೂಕಿನ ಹಿರೇಹಳ್ಳಿ ಗ್ರಾಮದ ಪ್ರಗತಿಪರ ರೈತ ರುದ್ರಮುನಿಯಪ್ಪ.

‘ಅಧಿಕ ಬಂಡವಾಳ ಹಾಕಿ ಮೂರು ಎಕರೆ ಪ್ರದೇಶದಲ್ಲಿ ಬೆಳೆದ ಸೀಬೆಗೆ ಉತ್ತಮ ಇಳುವರಿ ಇದ್ದುದರಿಂದ ಉತ್ತಮ ಆದಾಯ ನಿರೀಕ್ಷಿಸಲಾಗಿತ್ತು. ಬೆಳೆ ಮಾರಾಟ ಮಾಡಲು ಮಾರುಕಟ್ಟೆ ಇಲ್ಲದಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಜಿಲ್ಲೆಯ ಬಯಲುಸೀಮೆ ಭಾಗದಲ್ಲಿ ಬೆಳೆದ ಹಣ್ಣು ಮತ್ತು ತರಕಾರಿ ಬೆಳೆಗೆ ಸ್ಥಿರವಾದ ಮಾರುಕಟ್ಟೆ ಸ್ಥಾಪಿಸುವ ಮೂಲಕ ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ತೋಟಗಾರಿಕಾ ಸಚಿವರನ್ನು ಒತ್ತಾಯಿಸಿದರು.

...

ಹಣ್ಣು ಉತ್ಪಾದಕ ಸಂಸ್ಥೆ ಸ್ಥಾಪಿಸಿದರೆ ಅನುಕೂಲ

ತಾಲ್ಲೂಕಿನಲ್ಲಿ ಒಟ್ಟು 80 ಹೆಕ್ಟೆರ್ ಪ್ರದೇಶದಲ್ಲಿ ಸೀಬೆ ಬೆಳೆಯಲಾಗಿದೆ. ಸೀಬೆ ಹಣ್ಣಿಗೆ ಬೇಡಿಕೆ ಹಾಗೂ ಉತ್ತಮ ಬೆಲೆ ಇರುವ ಕಾರಣ ಬೆಳೆಗಾರರೇ ಮಾರಾಟಕ್ಕೆ ಇಳಿದರೆ ಅನುಕೂಲವಾಗುತ್ತದೆ. ನಾಯಕನಹಟ್ಟಿ ಹೋಬಳಿಯಲ್ಲಿ ಸ್ಥಾಪಿತವಾಗಿರುವ ಮಹಿಳಾ ರೈತ ಉತ್ಪಾದಕ ಸಂಸ್ಥೆ ಮಾದರಿಯಲ್ಲಿ ಹಣ್ಣು ಉತ್ಪಾದಕ ಸಂಸ್ಥೆ ಸ್ಥಾಪಿಸಿದರೆ ಜಿಲ್ಲೆಯ ಹಣ್ಣಿನ ಬೆಳೆಗಾರರಿಗೆ ಹೆಚ್ಚು ಉಪಯೋಗವಾಗುತ್ತದೆ.

****

ಬೆಳೆಗಾರರಿಂದ ಸಂಗ್ರಹಿಸಿದ ಷೇರಿನಲ್ಲಿ ಕಂಪನಿಯವರು, ಉತ್ತಮ ಗುಣಮಟ್ಟದ ಬೀಜ-ಗೊಬ್ಬರ, ಔಷಧ ಹಾಗೂ ಬೇಕಾದ ಪರಿಕರಗಳನ್ನು ಕಡಿಮೆ ದರಲ್ಲಿ ನೇರವಾಗಿ ಒದಗಿಸುತ್ತಾರೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ.

– ಡಾ.ವಿರೂಪಾಕ್ಷಪ್ಪ, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT