ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ: ಬೆಲೆ ಇದ್ದರೂ ರೈತರಿಗೆ ಸಿಗದ ಲಾಭ

ಕಟಾವು ಮಾಡದೇ ಹೊಲದಲ್ಲೇ ಬಿಡುತ್ತಿರುವ ರೈತರು, ಮಧ್ಯವರ್ತಿಗಳ ಹಾವಳಿಯಿಂದ ನಷ್ಟ
Last Updated 19 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಾದ್ಯಂತ ರೈತರು ಉತ್ತಮ ಗುಣಮಟ್ಟದ ಟೊಮೆಟೊ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಟೊಮೆಟೊಗೆ ಉತ್ತಮ ಬೆಲೆ ಇದ್ದರೂ ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಲಾಭ ಸಿಗುತ್ತಿಲ್ಲ. ಹೀಗಾಗಿ ಬೆಳೆಗಾರರು ಫಸಲು ಕಟಾವು ಮಾಡದೆ ಹೊಲದಲ್ಲೇ ಬಿಟ್ಟುಬಿಡುತ್ತಿದ್ದಾರೆ.

ಕೆಆರ್‌ಎಸ್‌ ತುಂಬಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ತೇವಾಂಶ ವಾತಾವರಣವಿದೆ. ಕೊಳವೆ ಬಾವಿಗಳೂ ಮರುಪೂರಣಗೊಂಡಿವೆ. ಹೀಗಾಗಿ ಉತ್ತಮ ಗುಣಮಟ್ಟದ ಟೊಮೆಟೊ ಫಸಲು ಬಂದಿದೆ. ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊ ₹ 10–15ಕ್ಕೆ ಮಾರಾಟವಾಗುತ್ತಿದೆ. ಆದರೆ ಆ ಲಾಭ ವ್ಯಾಪಾರಿಗಳ ಪಾಲಾಗುತ್ತಿದ್ದು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಹಲವು ಸಂದರ್ಭದಲ್ಲಿ ಟೊಮೆಟೊ ಬೆಲೆ ₹ 1ಕ್ಕೆ ಇಳಿದಿದ್ದಿದೆ. ಆಗ ರಸ್ತೆಯಲ್ಲಿ ಸುರಿದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಾಪಾರಿಗಳ ಮೋಸದಾಟದಿಂದ ಈಗಲೂ ಅಂಥದೇ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ರೈತರು ಕಟಾವು ಮಾಡದೆ ಫಸಲನ್ನು ಹೊಲದಲ್ಲೇ ಬಿಡುತ್ತಿದ್ದಾರೆ.

‘20 ಕೆ.ಜಿ. ತೂಕದ ಕ್ರೇಟ್ ಟೊಮೆಟೊ ಕೀಳಲು ಕಾರ್ಮಿಕರಿಗೆ ₹ 20 ಕೊಡಬೇಕು. ಬೆಂಗಳೂರಿಗೆ ಸಾಗಿಸಲು ₹ 24, ಬೀಜ, ಔಷಧಿ, ಗೊಬ್ಬರ ಎಲ್ಲಾ ಸೇರಿ ಒಂದು ಕ್ರೇಟ್‌ಗೆ ₹ 80 ಖರ್ಚಾಗುತ್ತದೆ. ವ್ಯಾಪಾರಿಗಳು ಕೊಳ್ಳುವಾಗ ಒಂದು ಕ್ರೇಟ್‌ಗೆ ₹ 100 ಕೊಡುತ್ತಾರೆ. ಕೆಲವು ಸಂದರ್ಭದಲ್ಲಿ ಅಷ್ಟಕ್ಕೂ ಕೊಳ್ಳುವುದಿಲ್ಲ. ಕ್ರೇಟ್‌ಗೆ ಕೇವಲ ₹ 20 ಅಥವಾ ಅದಕ್ಕಿಂತಲೂ ಕಡಿಮೆ ಹಣ ನಮ್ಮ ಕೈ ಸೇರುತ್ತದೆ. ಮಾರುಕಟ್ಟೆಯಲ್ಲಿ ಅದೇ ಟೊಮೆಟೊ ಕೊಳ್ಳಲು ಕೆ.ಜಿಗೆ ₹ 10–15 ಕೊಡಬೇಕು. ಇದರಿಂದ ರೈತರಿಗೆ ಏನೂ ಸಿಗುವುದಿಲ್ಲ. ಹೀಗಾಗಿ ನಾನು ಈ ಬಾರಿ ಹಣ್ಣು ಕಟಾವು ಮಾಡದೇ ಹೊಲದಲ್ಲೇ ಬಿಟ್ಟಿದ್ದೇನೆ. ಜಮೀನಿಗೆ ಗೊಬ್ಬರವಾದರೂ ಆಗುತ್ತದೆ’ ಎಂದು ತಾಲ್ಲೂಕಿನ ಮಾರನಹಳ್ಳಿ ಗ್ರಾಮದ ಎಂ.ಕೆ.ಶಿವರಾಜು ಹೇಳಿದರು.

ಅರ್ಧಬೆಲೆಗೆ ಕೊಳ್ಳುವ ವ್ಯಾಪಾರಿಗಳು:
ಜಿಲ್ಲೆಯಲ್ಲಿ ನಾಟಿ, ಚೆರ್ರಿ ಹಾಗೂ ಬೇಲಿ ಮೇಲೆ ಬೆಳೆಯುವ ಗೋಲಿ ಗಾತ್ರದ ಟೊಮೆಟೊ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಈ ಬಾರಿ ಉತ್ತಮ ಬೆಳೆ ಬಂದಿದ್ದು ಸೇಬು ಗಾತ್ರದ ಟೊಮೆಟೊ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಉತ್ತಮ ಬೆಲೆ ಇದ್ದಾಗಲೂ ರೈತರಿಗೆ ಲಾಭ ಸಿಗುತ್ತಿಲ್ಲ ಎಂಬುದು ಬಲುದೊಡ್ಡ ಕೊರಗು. ವೈಜ್ಞಾನಿಕ ಬೆಲೆ ನಿಗದಿ ಮಾಡದಿರುವುದು ಸಮಸ್ಯೆಯ ಮೂಲವಾಗಿದೆ. ಮಾರುಕಟ್ಟೆ ಬೆಲೆಯ ಅರ್ಧಕ್ಕೆ ವರ್ತಕರು ರೈತರಿಂದ ಕೊಳ್ಳುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಗುಣಮಟ್ಟದ ಟೊಮೆಟೊ ಕೆ.ಜಿಗೆ ₹ 15 ಇದೆ. ಆದರೆ ವರ್ತಕರು ಎಲ್ಲವನ್ನೂ ₹ 10ರ ದರದಲ್ಲಿ ನಿಗದಿ ಮಾಡಿ ಅದರ ಅರ್ಧ ₹ 5ಕ್ಕೆ ರೈತರಿಂದ ಕೊಳ್ಳುತ್ತಿದ್ದಾರೆ. ಇದರಿಂದ ಎಷ್ಟೇ ಗುಣಮಟ್ಟದ ಹಣ್ಣು ತಂದರೂ ₹ 5ಕ್ಕೆ ಕೊಡಬೇಕಾಗಿದೆ. ‘ನಾವು ಹರಿಸಿದ ಬೆವರಿನ ಲಾಭ ದಲ್ಲಾಳಿಗಳ ಪಾಲಾಗುತ್ತದೆ. ನಾವು ಕೆ.ಜಿ ಟೊಮೆಟೊಗೆ ₹ 1ಕ್ಕಿಂತಲೂ ಕಡಿಮೆ ಲಾಭ ಪಡೆಯುತ್ತೇವೆ. ಅದೂ ಸಿಕ್ಕರೆ ಉಂಟು, ಇಲ್ಲದಿದ್ದರೆ ಇಲ್ಲ. ಆದರೆ ವ್ಯಾಪಾರಿಗಳು ₹ 4–5 ಲಾಭ ಮಾಡಿಕೊಳ್ಳುತ್ತಿದ್ದಾರೆ. ಈಗ ಬೆಲೆ ಇದ್ದರೂ ಲಾಭ ಇಲ್ಲದಂತಾಗಿದೆ’ ಎಂದು ಶಿವರಾಜು ಹೇಳಿದರು.

ಮಧ್ಯವರ್ತಿಗಳ ಕೈ ತಪ್ಪಿಸಿ:
‘ರೈತ ಮತ್ತು ಗ್ರಾಹಕನ ನಡುವೆ ಇರುವ ಮಧ್ಯವರ್ತಿಗಳ ಕೈ ಮೇಲಾಗುತ್ತಿದೆ. ಉತ್ತಮ ಬೆಲೆ ಇದ್ದಾಗ ರೈತರಿಗೆ ಕೇವಲ ಶೇ 30–40 ಲಾಭ ದೊರೆಯುತ್ತದೆ. ವರ್ತಕರು ಶೇ 70–80ರಷ್ಟು ಲಾಭ ಮಾಡಿಕೊಳ್ಳುತ್ತಾರೆ. ವೈಜ್ಞಾನಿಕ ಬೆಲೆ ನಿಗದಿ ಮಾಡಿದರೆ ಮಧ್ಯವರ್ತಿಗಳ ಕೈ ತಪ್ಪಿಸಬಹುದು. ರೈತರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆ ಮಾಡಿಕೊಡಬೇಕು. ಕೆಲವೆಡೆ ರೈತರು ಮಾರಾಟ ಮಾಡಿದರೆ ವರ್ತಕರು ಅವರ ಮೇಲೆ ದಬ್ಬಾಳಿಕೆ ಮಾಡಿದ ಉದಾಹರಣೆಗಳಿವೆ. ರೈತರಿಗೆ ಆಗುವ ಅನ್ಯಾಯ ತಪ್ಪಿಸಲು ಸರ್ಕಾರ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು’ ಎಂದು ರೈತ ಹೋರಾಟಗಾರ ಕೆ.ಎಸ್‌.ನಂಜುಂಡೇಗೌಡ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT