ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧ ಎಕರೆಯಲ್ಲೂ ಅಧಿಕ ಆದಾಯ!

Last Updated 8 ಜೂನ್ 2015, 19:30 IST
ಅಕ್ಷರ ಗಾತ್ರ

ಹತ್ತಾರು ಎಕರೆ ಜಮೀನಿದ್ದರೂ ಕೃಷಿಯಲ್ಲಿ ಲಾಭವಿಲ್ಲ ಎಂಬ ಲೆಕ್ಕಾಚಾರದಿಂದ ಇಂದಿನ ಯುವಕರು ಪಟ್ಟಣದತ್ತ ವಲಸೆ ಹೋಗುತ್ತಾರೆ. ಆದರೆ, ಇಲ್ಲೊಬ್ಬರು ಪಟ್ಟಣದಿಂದ ಹಳ್ಳಿಗೆ ಬಂದು  ಲಾಭದ ಹಾದಿ ತುಳಿದಿದ್ದಾರೆ. ಇರುವ ಅರ್ಧ ಎಕರೆ ಜಮೀನಿನಲ್ಲಿಯೇ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕಾಶಿಪಟ್ಣ ಗ್ರಾಮದ ಸುಬ್ಬಣ್ಣ ಸಾಲಿಯಾನ್ ಅವರ ಮನೆಬಾಗಿಲಿಗೆ ಬಂದರೆ ಸಾಕು ಚಿಕ್ಕದಾದ ಮತ್ತು ಚೊಕ್ಕದಾದ ಕೃಷಿ ಪ್ರಚಂಚ ಅನಾವರಣಗೊಳ್ಳುತ್ತದೆ. ಏಕೆಂದರೆ, ತಮ್ಮ ಮನೆ ಸುತ್ತ ಇರುವ ಅಲ್ಪ ಜಾಗದಲ್ಲಿ ಕೃಷಿ, ಕೋಳಿ ಫಾರಂ, ಹೈನುಗಾರಿಕೆ ಮಾಡಿದ್ದಾರೆ.

ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಸ್ ಚಾಲಕರಾಗಿ ಜೀವನ ಸಾಗಿಸುತ್ತಿದ್ದ ಇವರು ಸ್ವಾವಲಂಬಿಯಾಗಿ ಬದುಕುವ ಕನಸು ಕಂಡಿದ್ದರು. ಸ್ವ ಉದ್ಯೋಗ ಮಾಡುವ ಉತ್ಸಾಹ ಇದ್ದರೂ ಆರ್ಥಿಕ ಸ್ಥಿತಿಗತಿ ಚೆನ್ನಾಗಿರಲಿಲ್ಲ. ಅಲ್ಲದೆ, ಇರುವ ಅರ್ಧ ಎಕರೆ ಜಾಗದಲ್ಲಿ ಏನು ಮಾಡಲು ಸಾಧ್ಯ ಎಂಬ ಚಿಂತೆ ಅವರನ್ನು ಕಾಡಿತ್ತು. ಈ ಸಂದರ್ಭ ಏನು ಮಾಡಬೇಕು ಎಂಬುದನ್ನು ತೋಚದೆ ಗೊಂದಲದಲ್ಲಿದ್ದರು. ಈ ವೇಳೆ ‘ಐಡಿಯಲ್ ಅನುಪಮ ಫಾರ್ಮ್ಸ್’ ಮತ್ತು ‘ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ಇವರ ಕನಸನ್ನು ನನಸು ಮಾಡಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸದಸ್ಯರಾಗಿದ್ದ ತಂದೆ ಐತಪ್ಪ ಪೂಜಾರಿ ಅವರ ಮುಖಾಂತರ ಒಂದು ಲಕ್ಷ ರೂಪಾಯಿ ಸಾಲ ಪಡೆದು, ಐಡಿಯಲ್ ಫಾರ್ಮ್‌ನವರ ಮಾರ್ಗದರ್ಶನದಂತೆ ಇರುವ ಸ್ವಲ್ಪ ಜಾಗದಲ್ಲಿ ಮೂರು ಸಾವಿರ ಕೋಳಿ ಸಾಕುವ ಫಾರ್ಮ್ ಕಟ್ಟಡವನ್ನು ನಿರ್ಮಿಸಿದರು. ಐಡಿಯಲ್ ಫಾರ್ಮ್‌ನವರು ಚಿಕ್ಕ ಕೋಳಿ ಮರಿಯನ್ನು ಅವರ ಕೈಗೆ ಕೊಟ್ಟು ಅದನ್ನು 30 ದಿನಗಳವರೆಗೆ ಪೋಷಿಸಿ ಬೆಳೆಸುವ ಜವಾಬ್ದಾರಿ ಹಸ್ತಾಂತರಿಸಿದರು. ತಿಂಗಳು ಆಗುವಷ್ಟರಲ್ಲಿ ಅವುಗಳ ತೂಕ ಮತ್ತು ಆರೋಗ್ಯವನ್ನು ಕಾಪಾಡಿಕೊಂಡು ಬೆಳೆಸಬೇಕಿತ್ತು. ಮೊದಮೊದಲು ಇದು ಕಷ್ಟವೆನಿಸುತ್ತಿದ್ದರೂ ಆನಂತರ ಯಾವುದೇ ಭಯವಿಲ್ಲದೇ ಕೋಳಿ ಸಾಕಣೆ ಮುಂದುವರಿಸಿದರು.

‘ಮೊದಲ ಫಾರ್ಮ್ ಕಟ್ಟಡ ನಿರ್ಮಿಸಿದೆ. ಅದರಲ್ಲಿ ಗಳಿಸಿದ ಲಾಭದಲ್ಲಿ ಸಾಲವನ್ನು ತೀರಿಸಿ, ಮತ್ತೆ ಸಾಲ ಪಡೆದು ಇನ್ನೊಂದು ಫಾರ್ಮ್  ನಿರ್ಮಿಸಿದೆ. ಇದರಲ್ಲಿ 5-6 ಸಾವಿರ ಕೋಳಿ ಮರಿಗಳನ್ನು ಬೆಳೆಸಿ, ಐಡಿಯಲ್‌ನವರಿಗೆ ಮಾರಾಟ ಮಾಡುತ್ತಿದ್ದೇನೆ. ಇದರ ಜೊತೆಗೆ ಕೋಳಿ ಗೊಬ್ಬರದಿಂದಲೂ ಆದಾಯ ಗಳಿಸುತ್ತಿದ್ದೇನೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸುಬ್ಬಣ್ಣ.

ಎಲ್ಲ ಉತ್ಪಾದನಾ ವೆಚ್ಚ ಕಳೆದು ತಿಂಗಳಿಗೆ ಸರಾಸರಿ15ರಿಂದ20 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಇದರ ಜೊತೆಗೆ ಮನೆಯ ಹಿಂಭಾಗದಲ್ಲಿ ಚಪ್ಪರ ಹಾಕಿ ಬಗೆಬಗೆಯ ತರಕಾರಿಗಳನ್ನೂ ಬೆಳೆಸುತ್ತಿದ್ದಾರೆ. ಮನೆಯ ಟೆರೇಸ್‌ ಮೇಲೆ ಗೋಣಿ ಚೀಲಗಳ ಮುಖಾಂತರ ಬೆಂಡೆಕಾಯಿ, ಬದನೆಕಾಯಿ ಹೀಗೆ ತರಕಾರಿಗಳನ್ನು ಬೆಳೆಸಿ ಮನೆ ಬಳಕೆ ಮತ್ತು ಮಾರಾಟಕ್ಕೆ ಆಗುವಷ್ಟು ಸಮೃದ್ಧವಾಗಿ ಬೆಳೆಸಿದ್ದಾರೆ. ಈ ಎಲ್ಲ ತರಕಾರಿಗಳನ್ನು ಸಾವಯವ ಗೊಬ್ಬರ ಬಳಸಿ ಬೆಳೆಸುತ್ತಾರೆ.

ಇವುಗಳ ಜೊತೆಗೆ ಹೈನುಗಾರಿಕೆಯನ್ನೂ ಮಾಡಿ ದಿನದಲ್ಲಿ ಸುಮಾರು 10-12 ಲೀಟರಷ್ಟು ಹಾಲನ್ನು ಡೇರಿಗೆ ಹಾಕುತ್ತಾರೆ. ಮನೆಬಳಕೆಗೆ ಗೊಬ್ಬರ ಗ್ಯಾಸ್ ಅಳವಡಿಸಿದ್ದಾರೆ. ಹೀಗೆ, ಸ್ವಲ್ಪಜಾಗದಲ್ಲಿ ಕೃಷಿ ಚಟುವಟಿಕೆ, ಹೈನುಗಾರಿಕೆ ಮತ್ತು ಕೋಳಿ ಫಾರಂ ನಡೆಸಿ ಇದೀಗ ಪ್ರಗತಿಪರ ಕೃಷಿಕರಾಗಿ ಬೆಳೆಯುತ್ತಿದ್ದಾರೆ. ಇವರ ಸಾಧನೆಯನ್ನು ಕಂಡು ಹಲವು ಮಂದಿ ಇವರಿಂದ ಮಾರ್ಗದರ್ಶನ ಪಡೆದು ಕೋಳಿ ಫಾರಂ ನಿರ್ಮಿಸಿದ್ದಾರೆ. ಮನಸ್ಸಿದ್ದರೆ ಮಾರ್ಗವಿದೆ ಎಂಬುದಕ್ಕೆ ಸುಬ್ಬಣ್ಣ ಒಳ್ಳೆಯ ನಿದರ್ಶನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT