ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಬದನೆ ಅಲ್ಲ...

Last Updated 27 ಮೇ 2013, 19:59 IST
ಅಕ್ಷರ ಗಾತ್ರ

ಈ ಚಿತ್ರದಲ್ಲಿ ಇರುವುದು ಏನು ಎಂದು `ಥಟ್ ಅಂತ ಹೇಳಿ' ಎಂದು ನಿಮ್ಮನ್ನು ಯಾರಾದರೂ ನೀವು ಹೇಳುವುದು `ಬದನೆಕಾಯಿ' ಎಂದು ಅಲ್ಲವೇ? ಆದರೆ ವಾಸ್ತವದಲ್ಲಿ ಇದು ಬದನೆ ಅಲ್ಲ, ಬದಲಿಗೆ ಇದು ಪೆಪಿನೋ. ಬಲು ಅಪರೂಪದ ಹಾಗೂ ಅಷ್ಟೇ ರುಚಿಕರ ತರಕಾರಿ ಇದು.

ಇಂಥದ್ದೊಂದು ಅಪರೂಪದ ತರಕಾರಿ ಬೆಳೆದಿದ್ದಾರೆ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕೃಷಿಕ ಅನಿಲ್ ಬಳಂಜ. ಯಾವುದೇ ಹೊಸ ತರಕಾರಿ, ಹಣ್ಣು ಅದು ಏನೇ ಇದ್ದರೂ ಅದನ್ನು ತಮ್ಮ ಹೊಲದಲ್ಲಿ ಬೆಳೆಯಬೇಕು ಎನ್ನುವ ಉತ್ಸಾಹ ಯುವಕ ಅನಿಲ್ ಅವರದ್ದು.

ದೂರದ ಊರುಗಳಿಗೂ ತೆರಳಿ ಅಪರೂಪದ ತರಕಾರಿಗಳನ್ನು ಸಂಗ್ರಹಿಸುವ ಹುಮ್ಮಸ್ಸು ಅವರದ್ದು. ಈಗಾಗಲೇ ಅನೇಕ ಹೊಸತುಗಳನ್ನು ಹೊಂದಿರುವ ಅವರ ಸಂಗ್ರಹಕ್ಕೆ ಹೊಸತೊಂದು ಸೇರ್ಪಡೆ ಈ ಪೆಪಿನೋ. ಮಡಿಕೇರಿಯ ಸ್ನೇಹಿತರೊಬ್ಬರಿಂದ ತಂದ ಪೆಪಿನೋ ತುಂಡುಗಳಿಂದ ಗಿಡ ಮಾಡಿಕೊಂಡು ಉತ್ತಮ ಆರೈಕೆ ಮಾಡಿದರು. ಇದೀಗ ಆರು ತಿಂಗಳುಗಳಲ್ಲಿ ಗಿಡದ ತುಂಬಾ ಪೆಪಿನೋ ಕಾಯಿ ಕಾಣಿಸಿಕೊಂಡಿವೆ.

ಪೆಪಿನೋ ವೈಜ್ಞಾನಿಕ ಹೆಸರು ಸೋಲೆನಿಯಂ ಮುರಿಕಾಟಂ. ಇದು ಟೊಮೆಟೊ ಹಾಗೂ ಬದನೆಯನ್ನು ಹೋಲುತ್ತದೆ. ಬದನೆ ಹೂವುಗಳನ್ನೇ ಹೋಲುವ ಬಿಳಿ ನೇರಳೆ ಮಿಶ್ರಿತ ಬಣ್ಣದ ಹೂವುಗಳು. ಕಾಯಿ ಮೂಡಿ ಬೆಳೆಯುತ್ತಲೇ ಅದರ ಮೈಮೇಲೆ ಕಂದು ಬಣ್ಣದ ಗೆರೆಗಳು ಕಾಣಿಸಿಕೊಳ್ಳುತ್ತವೆ. ಹಾಗೆಯೇ ಅಷ್ಟೇ ಸಮೃದ್ಧ ಕಾಯಿಗಳು. ಎಲೆಗಳು ಟೊಮೆಟೊ ಇಲ್ಲವೇ ಬದನೆ ಗಿಡಗಳಂತಲ್ಲ. ಗಿಡ ಸುಮಾರು ಎರಡು ಮೀಟರ್ ಎತ್ತರ ಬೆಳೆಯುತ್ತದೆ.

ಈ ಪೆಪಿನೋ ಆಂಡಿಸ್ ಪರ್ವತ ಶ್ರೇಣಿಯ ಮೂಲದ್ದು. ಪೆಪಿನೋ ಸಿಹಿ ರುಚಿ ಹೊಂದಿದೆ. ಹೀಗಾಗಿ ಸಿಹಿ ಪೆಪಿನೋ ಎಂದೂ, ಪೆಪಿನೋ ಮೆಲನ್ ಎಂದೂ ಕರೆಯುತ್ತಾರೆ. ಕೊಲಂಬಿಯಾ, ಚಿಲಿ, ಪೆರು, ಬೊಲಿವಿಯಾ ಮಾರುಕಟ್ಟೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ನ್ಯೂಜಿಲೆಂಡ್, ಟರ್ಕಿ, ಮಾರಿಷಸ್‌ಗಳಲ್ಲಿ ರಫ್ತು ಮಾಡಲೆಂದೇ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಚಿಲಿ ದೇಶದಲ್ಲಿ 400 ಹೆಕ್ಟೇರು ಪ್ರದೇಶದಲ್ಲಿ ಪೆಪಿನೋ ಬೆಳೆ ಇದೆ ಎಂದು ಮೂಲಗಳು ಹೇಳುತ್ತವೆ.

ಅಮೆರಿಕದಲ್ಲಿ 1889ಕ್ಕೂ ಮುನ್ನ ಇದನ್ನು ಬೆಳೆಯಲಾಗುತ್ತಿತ್ತು. ನಂತರ ಆರ್ಥಿಕವಾಗಿ ಲಾಭವಾಗುವ ತಳಿಗಳನ್ನು ನ್ಯೂಜಿಲೆಂಡ್‌ನಿಂದ ತರಿಸಿಕೊಳ್ಳಲಾಗುತಿತ್ತು.

ಪೆಪಿನೋ ಟ್ರೀ ಟೊಮೆಟೊ ಹತ್ತಿರ ಸಂಬಂಧಿ ಎನ್ನಲಾಗುತ್ತಿದೆ. ಪೆಪಿನೋ ತರಕಾರಿ, ಹಣ್ಣು ಆಗಿಯೂ ಬಳಸಬಹುದು. ಹಣ್ಣು ರುಚಿಕರವಾಗಿದೆ. ಮಕ್ಕಳು ಬಾಯಿ ಚಪ್ಪರಿಸಿ ತಿನ್ನುತ್ತಾರೆ.

ಬೆಂಗಳೂರಿನ ಸೂಪರ್ ಮಾರ್ಕೆಟ್‌ಗಳಲ್ಲಿ ಇದು ಅಪರೂಪಕ್ಕೆ ದೊರೆಯುವುದುಂಟು. ಆದರೆ ದಕ್ಷಿಣ ಕನ್ನಡದ ವಾತಾವರಣದಲ್ಲಿಯೂ ಅಪರೂಪದ ಪೆಪಿನೋ ಬೆಳೆಯಬಲ್ಲದು ಎಂದು ತೋರಿಸಿಕೊಟ್ಟ ಅನಿಲ್ ಅವರ ಉತ್ಸಾಹ ಮೆಚ್ಚಬೇಕಾದುದು. ಹಾಗೆಯೇ ಈ ಪೆಪಿನೋವನ್ನು ನೀವೂ ಬೆಳೆದು ನೋಡಿ. ಹಾಗೆಯೇ ಚಪ್ಪರಿಸಿ ಆನಂದಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT