ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಲು ಬಂಡೆ ಜಾಗದಲ್ಲಿ ಕಾಡು ಸೃಷ್ಟಿ

Last Updated 26 ಅಕ್ಟೋಬರ್ 2015, 19:53 IST
ಅಕ್ಷರ ಗಾತ್ರ

ಇದು 25 ವರ್ಷಗಳ ಹಿಂದೆ ಬಂಜರು ಭೂಮಿ. ಕೃಷಿ ಮಾಡುವುದು ದೂರದ ಮಾತು. ಮೇವು ಬೆಳೆಯಲೂ ಈ ಭೂಮಿಯಲ್ಲಿ ಸಾಧ್ಯವಿರಲಿಲ್ಲ. ಅದೇ ಭೂಮಿಯಲ್ಲಿ ಈಗ ಹಸಿರು ಉಕ್ಕಿದೆ. ಸಾಗುವಾನಿ, ಗಂಧ, ಬೀಟೆ ಮರ ಸೇರಿದಂತೆ ವಿವಿಧ ಬೆಳೆಗಳು ಇಲ್ಲಿ ತುಂಬಿ ಹೋಗಿದ್ದು ವೈವಿಧ್ಯ ಜೀವಸಂಕುಲಗಳ ತಾಣವೂ ಆಗಿದೆ.

ಈ ಜಮೀನು ಇರುವುದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಅಂಡಗಿ ಗ್ರಾಮದಲ್ಲಿ. ಇಂಥ ಸಾಧನೆ ಮಾಡಿರುವುದು ಕರಿಬಸಪ್ಪ ಗೌಡ.  ದೆಹಲಿ ಶಾಂತಿಕೂಟ ಆಶ್ರಮದಲ್ಲಿ ಸರ್ಕಾರ 26 ವರ್ಷಗಳ ಹಿಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ  ಅಂತರ್ಜಲ ಮತ್ತು  ಅರಣ್ಯೀಕರಣ ಮಾಹಿತಿಯನ್ನು ಪಡೆದು ಜಮೀನಿನಲ್ಲಿ ಅಳವಡಿಸಿಕೊಂಡಿರುವ ಕಾರಣ ಇಂದು ಕಲ್ಲಿನಿಂದ ತುಂಬಿದ ಭೂಮಿಯಲ್ಲಿ ವೈವಿಧ್ಯ ಗಿಡ ಮರಗಳು ಬೆಳೆದು ನಿಂತಿವೆ.

ಕರಿಬಸಪ್ಪ ಅವರು ತಮ್ಮ 12 ಎಕರೆ ಭೂಮಿಯಲ್ಲಿ ತೋಟಗಾರಿಕೆ ಬೆಳೆಗಳಾದ ಅಡಿಕೆ, ಚಿಕ್ಕು, ಮಾವು, ತೆಂಗು, ಗಂಧ, ಸಾಗುವಾನಿ ಮರಗಳು, ಬಾಳೆ ಮತ್ತು ಕಾಡು ಜಾತಿ ಮರಗಳಾದ ಹೊನ್ನೆ, ಶಿವನಿ, ಬೀಟೆ ಮರಗಳನ್ನು ಬೆಳೆಸಿದ್ದಾರೆ.  ಇವೆಲ್ಲವನ್ನೂ ಹನಿ ನೀರಿನಲ್ಲಿಯೇ ಬೆಳೆದಿರುವುದು ವಿಶೇಷ. ಈ ತೋಟದಲ್ಲಿ ನಾಲ್ಕು ಇಂಗು ಗುಂಡಿಗಳಿವೆ. ಎಂಟು ವರ್ಷಗಳ ಹಿಂದೆ ಬೋರ್‌ವೆಲ್‌ನಲ್ಲಿ ಉತ್ತಮವಾದ ನೀರು ಬಿದ್ದ ಮೇಲೆ ಅಡಿಕೆ ಬೆಳೆ ಬೆಳೆಯುತ್ತಿದ್ದಾರೆ.

ಕೃಷಿ ವಿಧಾನ ಹೀಗಿದೆ
ಆರು ಅಡಿ ಅಂತರದಲ್ಲಿ ಬದು ನಿರ್ಮಿಸಿ ಸಾಗುವಾನಿ ಗಿಡಗಳನ್ನು ನೆಟ್ಟಿದ್ದಾರೆ. ಸಾಲಿನಿಂದ ಸಾಲಿಗೆ 25 ಅಡಿ ಅಂತರವಿದೆ. ಅದರ ಮಧ್ಯದಲ್ಲಿ ಅಡಿಕೆ, ಮಾವು, ತೆಂಗು, ಗಂಧ, ಬಾಳೆ, ಚಿಕ್ಕು ಮತ್ತು ಕಾಡು ಜಾತಿಯ ಗಿಡಗಳನ್ನು ನೆಟ್ಟಿದ್ದಾರೆ. ಎರಡು ದೊಡ್ಡ ಟ್ಯಾಂಕರ್ ನಿರ್ಮಿಸಿದ್ದು, ಈ ಟ್ಯಾಂಕರ್‌ಗಳಿಗೆ ಕೊಟ್ಟಿಗೆಯಿಂದ ನೇರವಾಗಿ ಗೋಮೂತ್ರ ಹೋಗುವ ವ್ಯವಸ್ಥೆ ಇದೆ. ಬಯೋಟ್ಯಾಂಕರ್‌ನಿಂದ ತಯಾರಿಸುವ ರಸಸಾರ ಘಟಕವನ್ನು ಬೋರ್‌ವೆಲ್‌ನಿಂದ ಬರುವ ನೀರಿಗೆ ಸೇರಿಸಿ ಎಲ್ಲಾ ಬೆಳೆಗೂ ನೀಡಲಾಗುತ್ತದೆ. ಎರೆಹುಳು ದೊಡ್ಡಿಯಲ್ಲಿ ಗೊಬ್ಬರ ತಯಾರಿಸಲಾಗುತ್ತದೆ.

ಸಾವಯವ ಕೃಷಿ
ಪ್ರಕೃತಿಯಲ್ಲಿ ಲಭಿಸುವ ಜೀವಮೂಲ ದ್ರವ್ಯಗಳ ನೆರವಿನಿಂದ ಕೃಷಿ ಮಾಡುವುದರಿಂದ ಒಳ್ಳೆಯ ಫಸಲು ಸಾಧ್ಯ ಎನ್ನುವುದು ಅವರ ಮಾತು. ‘ಹಸಿಕಸ, ಎಲೆಗಳು, ಸೆಗಣಿ, ಗೋಮೂತ್ರ ಹುಳಿ ಮಜ್ಜಿಗೆ ಕೊಳೆಸಿ, ಬೆಳೆಗೆ ಕೊಡಬೇಕು. ಇದು ಮಣ್ಣಿನ ಜೀವ ಸಂಕುಲವನ್ನು ಬೆಳೆಸುತ್ತದೆ. ಆ ಜೀವಿಗಳು ಸಸ್ಯಕ್ಕೆ ಬೇಕಾದ ಜೈವಿಕ ಅಂಶವನ್ನು ಒದಗಿಸುತ್ತವೆ. ಮಣ್ಣಿನ ಜೀವಾಣುಗಳನ್ನು ಎಷ್ಟು ಬೆಳೆಸುತ್ತೇವೆಯೋ ಅಷ್ಟು ಮಣ್ಣಿನ ಫಲವತ್ತತೆ ಹೆಚ್ಚುತ್ತದೆ’ ಎನ್ನುತ್ತಾರೆ ಕರಿಬಸಪ್ಪ ಗೌಡ.

ತೋಟಗಾರಿಕಾ ಬೆಳೆಯೊಂದಿಗೆ ದೀರ್ಘಾವಧಿ ಬೆಳೆಗಳನ್ನೂ ಬೆಳೆಯುತ್ತಿದ್ದಾರೆ. ಚಿಕ್ಕುವಿನಿಂದ ವರ್ಷಕ್ಕೆ ಮೂರು ಲಕ್ಷ, ಮಾವಿನಿಂದ 50 ಸಾವಿರ ಸದ್ಯ ಪಡೆದಿದ್ದಾರೆ. ಇಂದಿನ ಮಾರುಕಟ್ಟೆ ಬೆಲೆಗೆ ಒಂದು ಸಾಗುವಾನಿ ಮರಕ್ಕೆ 1–20ಸಾವಿರ ಬೆಲೆ ಇದೆ ಎನ್ನುತ್ತಾರೆ ಅವರು. ಅರಣ್ಯೀಕರಣ ಮಿಶ್ರ ಕೃಷಿಯಲ್ಲಿ ಅಧಿಕ ಲಾಭ ಗಳಿಸಬಹುದು. ಒಂದೇ ಬೆಳೆಯನ್ನು ನಿರಂತರವಾಗಿ ಬೆಳೆಯುತ್ತಿದ್ದರೆ, ಆದಾಯ ಕಡಿಮೆಯಾಗಬಹುದು. ಬಹು ಬೆಳೆಯನ್ನು ಬೆಳೆಯುವುದು ಉತ್ತಮ.

ಸಾವಯವ ಕೃಷಿಯನ್ನು ಮಾಡಿದರೆ ಲಾಭ ಗಳಿಸಬಹುದು ಎಂಬುದಕ್ಕೆ ಇವರೇ ಸಾಕ್ಷಿ. ‘ಕೃಷಿ ಮಾಡುವ ಅವಕಾಶವಿದ್ದರೆ, ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡುವ ಬದಲು ನಾವೇ ನಾಲ್ಕಾರು ಜನರಿಗೆ ಕೆಲಸ ಕೊಡಬಹುದು’ ಎನ್ನುವ ಕರಿಬಸಪ್ಪನವರು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸಾಧನೆಗೆ 2006ರಲ್ಲಿ ‘ಶ್ರೇಷ್ಠ ಕೃಷಿಕ ಪ್ರಶಸ್ತಿ’ ಲಭಿಸಿದೆ.

ಸಂಪರ್ಕ ಸಂಖ್ಯೆ: 9449453149 (ಸಂಜೆ ವೇಳೆ) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT