ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದಲ್ಲೂ ದ್ರಾಕ್ಷಿ...

Last Updated 13 ಮೇ 2013, 19:59 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಮಳೆಯ ಅಭಾವದಿಂದ ಅಂತರ್ಜಲ ಕುಸಿತ. ಎಲ್ಲೆಡೆ ಬರಗಾಲದ ಛಾಯೆ. ಇದರಿಂದ ಕೊಳವೆ ಬಾವಿಗಳಲ್ಲಿ ಸಿಗುವ ನೀರು ಬೇಸಾಯಕ್ಕೆ ಸಾಲದು. ಇನ್ನೊಂದೆಡೆ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ, ಮತ್ತೊಂದೆಡೆ ದಾಳಿಂಬೆ ಸೇರಿದಂತೆ ಇತರ ಬೆಳೆಗಳು ರೋಗಕ್ಕೆ ತುತ್ತಾಗಿದೆ. ಪರಿಣಾಮ, ಕಂಗಾಲಾಗಿರುವ ಅನ್ನದಾತ.

ಇಂಥ ವಿಕೋಪದ ನಡುವೆಯೂ ಬಾವಿಯಲ್ಲಿ ಲಭ್ಯವಾಗುವ ಸ್ವಲ್ಪ ನೀರನ್ನು ಜಾಣತನದಿಂದ ಹನಿ ಹನಿಯಾಗಿ ಬಳಸಿಕೊಂಡು ಬೇಸಾಯ ಮಾಡಿ ಜೀವನ ನಿರ್ವಹಣೆ ಮಾಡಿ ಯಶಸ್ವಿಯಾಗಿದ್ದಾರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ನೆರೆಬೆಂಚಿ ಗ್ರಾಮದ ರೈತ ರಾಜಾಸಾಬ್ ನದಾಫ್. ಒಣ ದ್ರಾಕ್ಷಿ ತಯಾರಿಸುವ ಘಟಕ ಸ್ಥಾಪನೆಯ ಸಾಹಸ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ ಇವರು.

ಕೊಪ್ಪಳ ಜಿಲ್ಲೆ ಸೋನಾಮಸೂರಿ ಅಕ್ಕಿಗೆ ಹೆಸರುವಾಸಿ. ಭತ್ತದ ಕಣಜ ಎಂದೇ ಜಿಲ್ಲೆ ಪ್ರಖ್ಯಾತಿ. ಇಡೀ ಹೈದರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿಯೇ ಈ ಜಿಲ್ಲೆ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ. ಲಾಭದಾಯಕ ತೋಟಗಾರಿಕಾ ಬೆಳೆ ಎಂದರೆ ಒಣದ್ರಾಕ್ಷಿ. ಇದರಲ್ಲಿಯೇ ಸಾಧನೆ ಮಾಡಿದ್ದಾರೆ ನದಾಫ್.

ಕೇವಲ ನಾಲ್ಕು ಎಕರೆ ಭೂಮಿಯಲ್ಲಿ ದ್ರಾಕ್ಷಿ ಬೇಸಾಯ ಮಾಡಿ ಯಶಸ್ವಿಯಾಗಿದ್ದಾರೆ ಇವರು. ನದಾಫ್ ಅವರಿಗೆ ಫಲವತ್ತಾದ 12 ಎಕರೆ ಭೂಮಿ ಇದೆ. ಈ ಭೂಮಿಯಲ್ಲಿ ಕೊಳವೆ ಬಾವಿ ಕೊರೆಸಿ ಶೇಂಗಾ, ಹತ್ತಿ, ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆಯುತ್ತಿದ್ದರು. ಈ ಬೆಳೆಗಳಿಗೆ ಬೆಲೆ ಕುಸಿದು ಪ್ರಗತಿ ಹೊಂದಲು ಸಾಧ್ಯವಾಗಲಿಲ್ಲ. ದಾಳಿಂಬೆ ಬೆಳೆಯು ಅಂಗಮಾರಿ ರೋಗಕ್ಕೆ ಈಡಾಗಿ ನಷ್ಟ ಹೊಂದಿದರು. ಎರಡು ವರ್ಷಗಳಲ್ಲಿ ಮಳೆ ಸರಿಯಾಗಿ ಬರದಿರುವುದರಿಂದ ಅಂರ್ತಜಲ ಕುಸಿದು ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಯಿತು. ಬೆಳೆದ ದ್ರಾಕ್ಷಿ ಬೆಳೆಗೆ ಉತ್ತಮ ಬೆಲೆ ಸಿಗದ ಕಾರಣ ಒಣದ್ರಾಕ್ಷಿ ಬೆಳೆಯಲು ಮುಂದಾದರು.

ಹೆಚ್ಚಾದ ಖರ್ಚು
ವರ್ಷದಿಂದ ವರ್ಷಕ್ಕೆ ದ್ರಾಕ್ಷಿ ಹಣ್ಣಿನ ಬೆಲೆ ಕುಸಿತ ಕಂಡುಬಂದಿತು. ದ್ರಾಕ್ಷಿ ಬೆಳೆಯಲು ವಿವಿಧ ಹಂತಗಳಲ್ಲಿ ತಗಲುವ ಖರ್ಚು ದಿನೇ ದಿನೇ ಹೆಚ್ಚಾಯಿತು. ಇದರಿಂದ ಇಳಿಮುಖವಾದ ಆದಾಯ. ನದಾಫ್ ಚಿಂತೆಗೀಡಾದರು. ಪರಿಸ್ಥಿತಿ ಹೀಗಿರುವಾಗ ದ್ರಾಕ್ಷಿ ಹಣ್ಣನ್ನು ಒಣ ದ್ರಾಕ್ಷಿಯಾಗಿ (ರೇಜಿನ್) ಪರಿವರ್ತಿಸಿ, ದ್ರಾಕ್ಷಿ ಬೆಳೆಯ ಮೌಲ್ಯವರ್ಧನೆ ಮಾಡುವ ಸಾಹಸಕ್ಕೆ ಕೈ ಹಾಕಿದರು. ಈ ಮೊದಲು 20 ರೂಪಾಯಿಯಂತೆ 15 ಟನ್‌ಗಳಷ್ಟು ದ್ರಾಕ್ಷಿ ಹಣ್ಣು ಮಾರಾಟ ಮಾಡಿದ್ದರು. ಆದರೆ ಖರ್ಚು-ವೆಚ್ಚ ನೋಡಿದಾಗ ನಿವ್ವಳ ಲಾಭ ಅತ್ಯಂತ ಕಡಿಮೆ ಎನ್ನಿಸಿತು. ಆದುದರಿಂದ ಒಣ ದ್ರಾಕ್ಷಿ ಮಾಡಿ ಮಾರಾಟ ಮಾಡಿದರು.

ಇದರಿಂದ ಪ್ರತಿ ಕೆ.ಜಿ.ಗೆ ರೂ. 150 ರಿಂದ 200 ರವರೆಗೂ ಬೆಲೆ ದೊರಕಿತು. ಈ ವರ್ಷ ರಾಜಾಸಾಬ್ ನದಾಫ್ 5 ಟನ್‌ಗಳಷ್ಟು ಹಣ್ಣನ್ನು ಒಣದ್ರಾಕ್ಷಿಯಾಗಿ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒಣದ್ರಾಕ್ಷಿ ಮಾಡಲು ಈಗ ಹೊಸ ತಾಂತ್ರಿಕತೆ ಲಭ್ಯವಿದ್ದು, ಹಿಂದೆಂದಿಗಿಂತಲೂ ಒಳ್ಳೆಯ ಗುಣಮಟ್ಟದ ಒಣ ದ್ರಾಕ್ಷಿ ತಯಾರಿಸಬಹುದಾಗಿದೆ. ಅಷ್ಟೆ ಅಲ್ಲದೇ ಗುಣಮಟ್ಟ ಕೆಡುವ ಪ್ರಮಾಣ ಕೂಡ ಕಡಿಮೆ ಎನ್ನುತ್ತಾರೆ ರಾಜಾಸಾಬ್.

ಹೀಗೆ ಮಾಡಿ
`ದ್ರಾಕ್ಷಿ ಹಣ್ಣುಗಳನ್ನು ಕುದಿಯುವ ಕಾಸ್ಟಿಕ್ ಸೋಡಾದಲ್ಲಿ 30 ಸೆಕೆಂಡ್‌ವರೆಗೂ ಮುಳುಗಿಸಿ ತಕ್ಷಣವೇ ಹೊರತೆಗೆದು, ತಣ್ಣೀರಿನಲ್ಲಿ ತೊಳೆಯಬೇಕು. ಇದನ್ನು ಶೇ. 90ರಷ್ಟು ನೆರಳು ಪರದೆ ಮಾಡಿ ಜಾಲಿ ಪರದೆಯ ಮೇಲೆ ಹಣ್ಣುಗಳನ್ನು ಹರಡಬೇಕು. ಇದಕ್ಕೆ ಗಂಧಕದ ಧೂಪದಿಂದ ಉಪಚರಿಸಿ ನಂತರ ಇಥೈಲ್ ಓಲಿಯೇಟ್ ಹಾಗೂ ಪೊಟ್ಯಾಷಿಯಂ ಕಾರ್ಬೊನೇಟ್ ದ್ರಾವಣದಿಂದ ಉಪಚರಿಸಬೇಕು. ಸ್ವಲ್ಪ ಬಣ್ಣ ಬರುವ ದ್ರಾವಣ ಬೆರೆಸಿದರೆ 15 ರಿಂದ 22 ದಿನಗಳಲ್ಲಿ ಒಣದ್ರಾಕ್ಷಿ ರೆಡಿ.

`ಇದನ್ನು ಗ್ರೇಡಿಂಗ್ ಮಾಡಿ 1 ಕೆ.ಜಿ. ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ತಿಂಗಳು ಸಂಗ್ರಹಿಸಿಡಬೇಕು. ಹೀಗೆ ಮಾಡಿದರೆ ಯೋಗ್ಯ ಬೆಲೆ ಬಂದಾಗ ದೂರದೂರಿನ ಮಾರುಕಟ್ಟೆಗೂ ಸಾಗಿಸುವುದು ಸುಲಭ' ಎನ್ನುತ್ತಾರೆ ರಾಜಾಸಾಬ್ ನದಾಫ್.

ಮುಂಬರುವ ದಿನಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ದ್ರಾಕ್ಷಿ ಬೆಳೆಗಾರರು ಒಣದ್ರಾಕ್ಷಿ ಮಾಡುವ ಸಾಹಸಕ್ಕೆ ಮುಂದಾದಲ್ಲಿ ಜಿಲ್ಲೆಯ ದ್ರಾಕ್ಷಿ ಬೆಳೆ ಬೆಳೆಯುವ ವಿಸ್ತೀರ್ಣವೂ ವೃದ್ಧಿಸಿ, ತೋಟಗಾರಿಕೆ ಕ್ಷೇತ್ರ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ. ಮಾಹಿತಿಗೆ- 9740547995
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT