ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನ ಹುಳು ರೈತರ ಗೋಳು

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಪ್ರಕೃತಿ ವಿಕೋಪ­ಗಳಿಂದ ಕಂಗಾಲಾಗಿರುವ ರೈತರಿಗೆ ಬಸವನ ಹುಳುವಿನ ಕಾಟ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
ಈ ಹುಳುಗಳು ರಾತ್ರಿಯಿಂದ ಬೆಳಗಿನವರೆಗೂ ತೋಟಗಳಲ್ಲಿ ಇಟ್ಟ ಬೆಳೆಯನ್ನೆಲ್ಲಾ ತಿಂದು ಹಾಕುತ್ತವೆ. ಬಿಸಿಲೇರುವ ಹೊತ್ತಿಗೆ ತಂಪಾದ ಜಾಗ ಹುಡುಕಿ ಹೋಗಿ, ಸಾಯಂಕಾಲ ಆದ ತಕ್ಷಣ ಬೆಳೆಗಳ ಮೇಲೆ ದಾಳಿ ಇಡುತ್ತವೆ. ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ರಸ್ತೆಗಳಲ್ಲಿ ಶಂಖುವಿನೊಂದಿಗೆ ತನ್ನ ಕೊಂಬುಗಳನ್ನು ಮೇಲಕ್ಕೆ  ಎತ್ತಿಕೊಂಡು ಓಡಾಡುತ್ತಿರುತ್ತವೆ.

ದಾರಿಯಲ್ಲಿ ಓಡಾಡುವ ಜನರುಗಳ ಕಾಲಿಗೆ ಸಿಕ್ಕಿ ತುಳಿದರೆ ಅವುಗಳಿಂದ ಹೊರಹೊಮ್ಮುವ ರಸ ಕಾಲು ಹಾಗೂ ಬಟ್ಟೆಗಳಿಗೆಲ್ಲಾ ಸಿಡಿಯುತ್ತದೆ. ಇನ್ನು ಶಂಖು ಬಲಿತಿರುವ ಹುಳುಗಳನ್ನು ಕಲ್ಲಿನಿಂದ ಬಡಿದರೂ ಸಾಯುವುದಿಲ್ಲ. ಇವುಗಳಿಗೆ ವಿಷಕಾರಿ ಔಷಧಿ ಸಿಂಪಡಿಸಿದ ಶಂಖುವಿನೊಳಗೆ ಸೇರಿಕೊಂಡು ಬದುಕಿ ಬಿಡುತ್ತವೆ. ಶಂಖುವಿನ ಮೇಲೆ ಔಷಧಿ ಸಿಂಪಡಿಸಿದರೆ ಆ ಔಷಧ ಸಿಂಪಡಿಸಿದ ಸಸ್ಯಗಳನ್ನು ಪ್ರಾಣಿಗಳು ತಿಂದರೆ ಅವುಗಳು ಸಾವನ್ನಪ್ಪುತ್ತವೆ.

ಸೂರ್ಯಕಾಂತಿ, ಮೆಣಸಿನಗಿಡ, ರೇಷ್ಮೆ, ಅಡಿಕೆ, ಬಾಳೆ ಹೀಗೆಯೇ ನೀರಾವರಿ ಜಮೀನುಗಳಲ್ಲಿಯೇ ಇವುಗಳ ವಾಸ. ಅಲ್ಲಿ ಬೆಳೆ ಇಟ್ಟಿರುವ ಸಸಿಗಳ ಸುಳಿಗಳನ್ನು ತಿಂದು ಅವುಗಳು ಬೆಳೆಯದಂತೆ ಮಾಡುತ್ತವೆ. ಚಿಕ್ಕ ಅಡಿಕೆ ಮರಗಳಲ್ಲಿ ಸುಳಿಗಳನ್ನು ಕಡಿದು ಮರಗಳೇ ಒಣಗುವಂತೆ ಮಾಡುತ್ತವೆ. ಬಾಳೆ ಗಿಡಗಳಲ್ಲಿ ಎಲೆಗಳನ್ನು ತಿಂದು ಬೋಡ ಮಾಡುತ್ತವೆ.

ಸೂರ್ಯಕಾಂತಿ ಹಾಗೂ ಮೆಣಸಿನ ಗಿಡಗಳನ್ನು ನೆಟ್ಟಿರುವ ಸ್ಥಳಗಳಲ್ಲಿ ಎಲೆ ಹಾಗೂ ಕಾಂಡಗಳನ್ನೆಲ್ಲ ತಿಂದು ಗಿಡಗಳೇ ಇಲ್ಲದಂತೆ ಮಾಡುತ್ತವೆ. ರೇಷ್ಮೆ ತೋಟಗಳಲ್ಲಿ ಸೊಪ್ಪನ್ನು ಚಿಗುರಲು ಬಿಡುವುದಿಲ್ಲ, ರೇಷ್ಮೆ ಹುಳುಗಳಿಗೆ ರಸವಾಗಿರುವ ಸುಳಿಸೊಪ್ಪನ್ನು ಹಾಕಬೇಕು. ಸುಳಿಗಳೇ ಇಲ್ಲದಂತಾಗುವುದರಿಂದ ರೇಷ್ಮೆ ಹುಳುಗಳು ಗಾತ್ರದಲ್ಲಿ ಕುಗ್ಗಿ ಬೆಳೆಗಳು ಉತ್ತಮವಾಗಿ ಬರುತ್ತಿಲ್ಲ. ಸೊಪ್ಪು ಕೊಯ್ದ ರೇಷ್ಮೆ ಹುಳುಗಳಿಗೆ ಹಾಕಿದಾಗ ಇವು ರೇಷ್ಮೆ ಬುಡಗಳ ಸಿಪ್ಪೆಯನ್ನು ತಿಂದು ರೇಷ್ಮೆ ಬುಡಗಳನ್ನೇ ಒಣಗುವಂತೆ ಮಾಡುತ್ತವೆ.

ಈ ಎಲ್ಲಾ ಕಾರಣಗಳಿಂದ ಜನರು ಬೆಳ್ಳಂಬೆಳಿಗ್ಗೆಯೇ ಎದ್ದು ಬದುಗಳಲ್ಲಿ ಇರುವಂತಹ ಬಸವನ ಹುಳುಗಳನ್ನು ಕೋಲಿನಿಂದ ಸಾಯಿಸುತ್ತಿದ್ದರು. ಆ ಸಂದರ್ಭದಲ್ಲಿ ಬಸವನ ಹುಳುವಿನಲ್ಲಿರುವ ಶಂಖುವು ಒಡೆದು ಬಿಸಿಲಿಗೆ ಒಣಗಿ ಕೆಲವೇ ದಿನಗಳಲ್ಲಿ ಗಾಜಿನಂತೆಯೇ ಚೂಪಾಗುತ್ತಿತ್ತು. ಆಗ ರೈತರು ಹೊಲಗಳಲ್ಲಿ ಓಡಾಡುವಾಗ ಕಾಲಿಗೆ ತೂರಿಕೊಂಡು ಆ ವ್ಯಕ್ತಿಗಳಿಗೆ ತೂರಿಕೊಂಡ ಜಾಗದಲ್ಲಿ ಒಂದಿಂಚು ಮಾಂಸವನ್ನು ವೈದ್ಯರಿಂದ ತೆಗೆಸಿಕೊಳ್ಳ­ಬೇಕಾಯಿತು. ಅಂದಿನಿಂದ ರೈತರು ಇವುಗಳನ್ನು ಸಾಯಿಸುವುದನ್ನು ಬಿಟ್ಟರು.
ಈ ಹುಳು ಬೇಸಿಗೆ ಕಾಲದಲ್ಲಿ ದಿಣ್ಣೆಯ ಜಮೀನುಗಳಲ್ಲಿದ್ದರೂ ಮೂರ್ನಾಲ್ಕು ತಿಂಗಳುಗಳವರೆಗೂ  ಆಹಾರ ಇಲ್ಲದೇ ಶಂಖುವಿನಲ್ಲಿಯೇ ಇದ್ದು ಪ್ರಾಣ ಉಳಿಸಿಕೊಳ್ಳುತ್ತವೆ.

ಇದರ ಸಂತತಿ ಬೇರೆ ಪ್ರಾಣಿಗಳ ಸಂತತಿಗಿಂತಲೂ ಹೆಚ್ಚಾಗಿ ಬೆಳೆಯುತ್ತಿದೆ. ಇವು ಒಂದು ಬಾರಿ 400 ರಿಂದ 900 ರವರೆಗೂ ಮೊಟ್ಟೆ ಇಡುತ್ತವೆ. ತಿಪ್ಪೆ ಹೊಂಡ ಹಾಗೂ ತಂಪಾದ ಸ್ಥಳಗಳಲ್ಲಿ ಮೊಟ್ಟೆ ಹಾಕುತ್ತವೆ. ಈ ಮೊಟ್ಟೆಗಳು ಅಲ್ಲಿಯೇ ಮರಿಗಳಾಗುತ್ತವೆ.
ಈ ಹುಳುಗಳನ್ನು ಬೆಂಕಿಯಲ್ಲಿ ಸುಟ್ಟರೂ ಸುಡುವುದಿಲ್ಲ, ಇವುಗಳಲ್ಲಿ ತೇವಾಂಶ ಅಧಿಕವಾಗಿರುವ ಕಾರಣ ಬೆಂಕಿಯೇ ನಂದು ಹೋಗುತ್ತದೆ. ರೈತರು ಹೊಲ ಗದ್ದೆಗಳಲ್ಲಿ ಆಳುಗಳನಿಟ್ಟು ಬಸವನ ಹುಳುಗಳನ್ನು ಆಯ್ದು ಭೂಮಿಯಲ್ಲಿ ಆರರಿಂದ ಏಳು ಅಡಿ ಗುಂಡಿ ಹೊಡೆದು ಅದರೊಳಗೆ ಹಾಕಿ ಮುಚ್ಚಿದರೂ ಸಾಯದೇ ಎದ್ದು ಬರುತ್ತವೆ. ಸರ್ಕಾರ ಇದಕ್ಕೆ ಸೂಕ್ತ ಔಷಧ ಕಂಡುಹಿಡಿದು ರೈತರ ಸಮಸ್ಯೆಗೆ ಸ್ಪಂದಿಸಬೇಕಿದೆ.

ಹೀಗೆ ಮಾಡಿ ನೋಡಿ
ಒಂದು ಪ್ಲಾಸ್ಟಿಕ್‌ ಚೀಲದಲ್ಲಿ ಒಂದು ಕೆ.ಜಿ. ಸುಣ್ಣ ಅಥವಾ 2 ಕೆ.ಜಿ. ಉಪ್ಪು ಸೇರಿಸಿ ಅದರಲ್ಲಿ ಹುಳುಗಳನ್ನು ಹಿಡಿದು ಹಾಕಿ. ಅದನ್ನು ಮಣ್ಣಿನಲ್ಲಿ ಮುಚ್ಚಿ. ಇದರಿಂದ ಹುಳುಗಳು ಸಾಯುತ್ತವೆ. ಈ ಸತ್ತ ಹುಳುಗಳನ್ನು ಅಡಿಕೆ ಅಥವಾ ತೆಂಗಿನ ಮರದ ಬುಡಕ್ಕೆ ಹಾಕಿದರೆ ಕನಿಷ್ಠ ನಾಲ್ಕೈದು ವರ್ಷ ಉತ್ತಮ ಗೊಬ್ಬರವೂ ಆಗುತ್ತದೆ! ಹುಳು ತೀವ್ರವಾಗಿದ್ದು ಹಿಡಿದು ಹಾಕಲು ಕಷ್ಟವಾದರೆ ಬಾತುಕೋಳಿ ಸಾಕಿ, ಅವುಗಳನ್ನು ತೋಟದಲ್ಲಿ ಬಿಡಿ. ಇದು ಬಿಟ್ಟು ನನಗೆ ತಿಳಿದ ಮಟ್ಟಿಗೆ ಇವುಗಳನ್ನು ನಾಶಪಡಿಸಲು ಸದ್ಯ ಯಾವುದೇ ಸೂಕ್ತ ಔಷಧಗಳು ಲಭ್ಯವಿಲ್ಲ.
– ಎಲ್‌.ನಾರಾಯಣ ರೆಡ್ಡಿ, ಸಾವಯವ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT